ಜನರಿಗೆ ಗ್ಯಾರಂಟಿ ಯೋಜನೆಗಳ ಮೇಲೆ ಭರವಸೆ

| Published : Apr 16 2024, 01:01 AM IST

ಸಾರಾಂಶ

ಸ್ವಾವಲಂಬಿ ಜೀವನಕ್ಕೆ ರಾಜ್ಯ ಸರ್ಕಾರ ಮಹಿಳೆಯರು ಹಾಗೂ ಯುವಕರಿಗೆ ಗ್ಯಾರಂಟಿ ನೀಡಿದ್ದು, ಜೀವನ, ಆರ್ಥಿಕ ಸುಧಾರಣೆಗೆ ಯೋಜನೆಗಳು ಸಹಕಾರಿಯಾಗಿವೆ.

ಧಾರವಾಡ:

ರಾಜ್ಯದ ಜನತೆ ಕಾಂಗ್ರೆಸ್‌ ನೀಡಿದ ಗ್ಯಾರಂಟಿ ಯೋಜನೆಗಳ ಕುರಿತು ತುಂಬಾ ಭರವಸೆ ಹೊಂದಿದ್ದು ಧಾರವಾಡ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದೆಲ್ಲೆಡೆ ಕಾಂಗ್ರೆಸ್‌ ಪರ ಅಲೆ ಇದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಹೇಳಿದರು.

ಚುನಾವಣೆಯ ಪ್ರಚಾರದ ಅಂಗವಾಗಿ ಶಿಗ್ಗಾಂವಿ ಕ್ಷೇತ್ರದ ಹಿರೇಬೆಂಡಿಗೇರಿ, ಕುರುಬರಮಲ್ಲೂರದಲ್ಲಿ ಪ್ರಚಾರ ಮಾಡಿದ ಅವರು, ಸ್ವಾವಲಂಬಿ ಜೀವನಕ್ಕೆ ರಾಜ್ಯ ಸರ್ಕಾರ ಮಹಿಳೆಯರು ಹಾಗೂ ಯುವಕರಿಗೆ ಗ್ಯಾರಂಟಿ ನೀಡಿದ್ದು, ಜೀವನ, ಆರ್ಥಿಕ ಸುಧಾರಣೆಗೆ ಯೋಜನೆಗಳು ಸಹಕಾರಿಯಾಗಿವೆ. ಈ ಹಿನ್ನೆಲೆಯಲ್ಲಿ ಬರುವ ಲೋಕಸಭೆಯಲ್ಲಿ ತಮ್ಮನ್ನು ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಅಸೂಟಿ ಮನವಿ ಮಾಡಿದರು.

ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಬರೀ ಗ್ಯಾರಂಟಿ ಯೋಜನೆ ಮಾತ್ರವಲ್ಲದೇ ಇಡೀ ದೇಶವನ್ನು ಕಟ್ಟುವ ಕಾರ್ಯ ಕಾಂಗ್ರೆಸ್‌ ಮಾಡಿದೆ. ದೇಶದ ಜನತೆಯ ಋಣ ತೀರಿಸುವ ಕಾಂಗ್ರೆಸ್‌ ಪಕ್ಷಕ್ಕೆ ಜನರು ಬೆಂಬಲ ಸೂಚಿಸಬೇಕು. ಅದರಲ್ಲೂ ಯುವ ಹಾಗೂ ಉತ್ಸಾಹಿ ಯುವಕ ವಿನೋದ ಅಸೂಟಿಯನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದರು. ಮುಖಂಡರಾದ ಯಾಸಿರ್ ಪಠಾಣ್ ಹಾಗೂ ಇತರರು ಇದ್ದರು. ಇಂದು ವಿನೋದ್‌ ಅಸೂಟಿ ನಾಮಪತ್ರ ಸಲ್ಲಿಕೆ

ವಿನೋದ ಅಸೂಟಿ ಏ. 16ರಂದು ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ನಗರದ ಶಿವಾಜಿ ವೃತ್ತದಿಂದ ಬೃಹತ್ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ವೇಳೆ ಕಾರ್ಮಿಕ ಸಚಿವ ಸಂತೋಷ ಲಾಡ್‌, ಶಾಸಕ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರೆಡ್ಡಿ, ಶಿವಲೀಲಾ ಕುಲಕರ್ಣಿ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ್ ಪಾಟೀಲ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಲು ಪ್ರಕಟಣೆ ತಿಳಿಸಿದೆ.