ಖರೀದಿಗೆ ಮುಗಿಬಿದ್ದ ಜನತೆ, ಭರ್ಜರಿ ವ್ಯಾಪಾರ

| Published : Oct 20 2025, 01:02 AM IST

ಸಾರಾಂಶ

ಜಿಎಸ್‌ಟಿ ಇಳಿಕೆಯಿಂದ ಎಲೆಕ್ಟ್ರಾನಿಕ್‌ ವಸ್ತು, ಕಾರು, ಬೈಕ್‌ ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಹುಬ್ಬಳ್ಳಿಯ ದುರ್ಗದಬೈಲ್, ಜನತಾ ಬಜಾರ, ಕೊಪ್ಪಿಕರ ರಸ್ತೆ, ದಾಜಿಬಾನಪೇಟೆ, ಶಹಾ ಬಜಾರ, ಗೋಕುಲ ರಸ್ತೆಯ ಮಾಲ್‌ಗಳು ರಿಯಾಯಿತಿ ದರ ಘೋಷಿಸಿದ್ದು ಗ್ರಾಹಕರನ್ನು ಸೆಳೆಯುತ್ತಿವೆ.

ಹುಬ್ಬಳ್ಳಿ:

ನಗರದಲ್ಲಿ ದೀಪಾವಳಿ ಸಂಭ್ರಮ ಹಿಮ್ಮಡಿಗೊಂಡಿದ್ದು ಖರೀದಿ ಭರಾಟೆ ಜೋರಾಗಿದೆ. ಭಾನುವಾರ ರಜಾ ದಿನವಾಗಿದ್ದರಿಂದ ಮಾರುಕಟ್ಟೆ, ಅಂಗಡಿ, ಮುಂಗಟ್ಟುಗಳು ಜನರಿಂದ ತುಂಬಿದ್ದವು. ಜನರು ಹೊಸ ಬಟ್ಟೆ ಖರೀದಿಸುತ್ತಿರುವುದರಿಂದ ಜವಳಿ ಅಂಗಡಿಯಲ್ಲಿ ಜನ ಸಂದಣಿ ಹೆಚ್ಚಳವಾಗಿತ್ತು.

ಜಿಎಸ್‌ಟಿ ಇಳಿಕೆಯಿಂದ ಎಲೆಕ್ಟ್ರಾನಿಕ್‌ ವಸ್ತು, ಕಾರು, ಬೈಕ್‌ ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಹುಬ್ಬಳ್ಳಿಯ ದುರ್ಗದಬೈಲ್, ಜನತಾ ಬಜಾರ, ಕೊಪ್ಪಿಕರ ರಸ್ತೆ, ದಾಜಿಬಾನಪೇಟೆ, ಶಹಾ ಬಜಾರ, ಗೋಕುಲ ರಸ್ತೆಯ ಮಾಲ್‌ಗಳು ರಿಯಾಯಿತಿ ದರ ಘೋಷಿಸಿದ್ದು ಗ್ರಾಹಕರನ್ನು ಸೆಳೆಯುತ್ತಿವೆ.

ಚಿನ್ನಾಭರಣ ಖರೀದಿ:

ಚಿನ್ನದ ದರ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿದರೂ ಖರೀದಿಸುವವರ ಸಂಖ್ಯೆ ಇಳಿಮುಖವಾಗಿಲ್ಲ. ದೀಪಾವಳಿ ಹಬ್ಬಕ್ಕೆ ಖರೀದಿಸಿ ಬಟ್ಟೆಗೆ ಮ್ಯಾಚಿಂಗ್‌ ಆಗುವಂತೆ ಆಭರಣ ಖರೀದಿಸುತ್ತಿದ್ದಾರೆ. ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಆಭರಣದ ಅಂಗಡಿಯಲ್ಲಿ ಭರ್ಜರಿ ವ್ಯಾಪಾರವಾಗಿದೆ.

ಬಣ್ಣ ಬಣ್ಣದ ಮಣ್ಣಿನ ಹಣತೆ ಹಾಗೂ ಆಕಾಶ ಬುಟ್ಟಿಗಳು ಜನರನ್ನು ಆಕರ್ಷಿಸುತ್ತಿವೆ. ಮಣ್ಣಿನ ಹಣತೆ ₹ 50 ರಿಂದ ₹ 100ರ ವರೆಗೆ ಮಾರಾಟವಾಗುತ್ತಿದ್ದರೆ, ಆಕಾಶ ಬುಟ್ಟಿಗಳು ₹ 1000 ವರೆಗೂ ಮಾರಾಟವಾಗುತ್ತಿವೆ. ಗ್ರಾಹಕರು ತಮ್ಮ ಶಕ್ತಿಗಾನುಸಾರವಾಗಿ ಖರೀದಿಸುತ್ತಿದ್ದಾರೆ.