ಧಾರವಾಡ:
ಬೇಸಿಗೆ ಬಂತೆಂದರೆ ಸಾಕು ಈ ಪ್ರದೇಶದ ಜನರು ಮನೆಯ ಬಾಗಿಲು, ಕಿಟಕಿ ಮುಚ್ಚಿಕೊಂಡು, ಮೂಗು, ಬಾಯಿಗೆ ಬಟ್ಟೆ ಕಟ್ಟಿಕೊಂಡು ಜೀವಿಸುವ ಸ್ಥಿತಿ. ಸುಟ್ಟ ತ್ಯಾಜ್ಯದ ಹೊಗೆ ಹಾಗೂ ಕೆಟ್ಟ ವಾಸನೆ ಈ ಬಡಾವಣೆಗಳ ಜನರ ಜೀವದ ಜೊತೆಗೆ ಆಟವಾಡುತ್ತಿದೆ.ಹೌದು. ಇಲ್ಲಿಯ ಹೊಸಯಲ್ಲಾಪೂರದ ತ್ಯಾಜ್ಯದ ಗುಡ್ಡಕ್ಕೆ ಮತ್ತೀಗ ಭಾರೀ ಪ್ರಮಾಣದಲ್ಲಿ ಬೆಂಕಿ ಬಿದ್ದಿದೆ. ಇಸ್ರೇಲ್, ದುಬೈ, ಇರಾನ್‌ಗಳಲ್ಲಿ ಯುದ್ಧ ನಡೆಯುತ್ತಿದ್ದು, ಅಲ್ಲಲ್ಲಿ ಬೀಳುತ್ತಿರುವ ಬಾಂಬ್‌ಗಳಿಂದ ಆವರಿಸಿದ ಬೆಂಕಿ ಹಾಗೂ ದಟ್ಟವಾದ ಹೊಗೆಯ ರೀತಿಯಲ್ಲಿ ಧಾರವಾಡದಲ್ಲೂ ಸೋಮವಾರ ಎತ್ತರದ ಬೆಂಕಿ ಹಾಗೂ ದಟ್ಟವಾದ ಹೊಗೆಯು ಕೆಲ ಹೊತ್ತು ಜನರನ್ನು ಕಂಗೆಡಿಸಿತ್ತು.
ಕಳೆದ ನಾಲ್ಕೈದು ದಿನಗಳಿಂದ ನಿಧಾನವಾಗಿ ಶುರುವಾಗಿದ್ದ ಬೆಂಕಿ ಹಾಗೂ ವಿಷದ ಹೊಗೆಯು ಸೋಮವಾರ ವ್ಯಾಪಕವಾಗಿ ಹರಡಿದ್ದು, ಆತಂಕ ಸೃಷ್ಟಿಸಿದೆ. ಇದರಿಂದ ಬೇಸತ್ತು ಟೋಲನಾಕಾ ಬಳಿ ಕೆಲ ಹೊತ್ತು ಸ್ಥಳೀಯರು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ಒಂದು ವರ್ಷದ ಹಿಂದೆ ಅಂದರೆ, 2025ರ ಮಾ. 12ರಂದು ಇಲ್ಲಿಯ ಹುಬ್ಬಳ್ಳಿ ರಸ್ತೆಯ ಟೋಲನಾಕಾ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಲಾಗಿತ್ತು. ಇಂತಹ ಪ್ರತಿಭಟನೆ, ರಸ್ತೆ ಬಂದ್ ಹಲವಾರು ವರ್ಷಗಳಿಂದ ಆದರೂ ಮಹಾನಗರ ಪಾಲಿಕೆಯಾಗಲಿ, ಸ್ಥಳೀಯ ಶಾಸಕರಾಗಲಿ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಆಗಾಗ ವಿಷಯದ ಹೊಗೆಯುಂಡ ಜನರು ಅವರಿಗೆಲ್ಲಾ ಹಿಡಿಶಾಪ ಹಾಕುತ್ತಿದ್ದಾರೆ.ಬೇಸಿಗೆಯ ಬಿಸಿಯ ಕಾವಿಗೆ ತಾನಾಗಿಯೇ ತ್ಯಾಜ್ಯದ ಗುಡ್ಡಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿದ್ದು, ಸಮೀಪದ ಬಡಾವಣೆಗಳು ಸೇರಿದಂತೆ ಗಾಳಿ ಬಂದ ಕಡೆಗೆ ಹೊಗೆಯು ಆವರಿಸುತ್ತಿದೆ. ಧಾರವಾಡ-ಹುಬ್ಬಳ್ಳಿ ಸಂಚಾರಿಗಳು ಸೇರಿದಂತೆ ಹೊಸಯಲ್ಲಾಪೂರ, ಯಾಲಕ್ಕಿಶೆಟ್ಟರ್ ಕಾಲನಿ, ಜನ್ನತನಗರ, ದಾನೇಶ್ವರಿ ನಗರ, ಲಕ್ಷ್ಮಿನಗರ, ವಿದ್ಯಾಗಿರಿ, ಮಾಳಮಡ್ಡಿ ವರೆಗೂ ಈ ವಿಷದ ಹೊಗೆ ಆವರಿಸಿದ್ದು, ಜನರು ಶುದ್ಧ ಗಾಳಿಗಾಗಿ ಪರಿತಪಿಸುತ್ತಿದ್ದಾರೆ.
ಮಳೆಗಾದಲ್ಲಿ ಕೊಳೆತ ಕಸದ ವಾಸನೆ, ಬೇಸಿಗೆಯಲ್ಲಿ ಸುಟ್ಟ ತಾಜ್ಯದ ದುರ್ನಾತದಿಂದ ನಾವೆಲ್ಲ ಇದ್ದು ಸತ್ತಂತಾಗಿದೆ. ಮಹಾನಗರ ಪಾಲಿಕೆಯಾಗಲಿ, ಜಿಲ್ಲಾಡಳಿತವಾಗಲಿ ಸ್ಪಂದಿಸುತ್ತಿಲ್ಲ. ಶಾಸಕ ಅರವಿಂದ ಬೆಲ್ಲದ ಅವರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ಪ್ರತಿ ವರ್ಷ ಬೇಸಿಗೆಯಲ್ಲಿ ಟೋಲನಾಕಾ ಬಂದ್ ಮಾಡಿ ಪ್ರತಿಭಟಿಸಿದರೂ ಈ ಸಮಸ್ಯೆಗೆ ಮಾತ್ರ ಪರಿಹಾರ ದೊರೆಯುತ್ತಿಲ್ಲ. ಬರೀ ಸಾಮಾನ್ಯ ಕಸವಲ್ಲದೇ, ವೈದ್ಯಕೀಯ ತ್ಯಾಜ್ಯ, ಸತ್ತ ದನಕರು-ನಾಯಿಗಳ ಕಳೇಬರ ಸಹ ಇಲ್ಲಿರುತ್ತದೆ. ಈ ವಿಷದ ಹೊಗೆಯಿಂದ ಮಕ್ಕಳು, ವೃದ್ಧರು ಅಸ್ತಮಾ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸೋಮವಾರ ಹೊಗೆಯಂತೂ ಒಬ್ಬರ ಮುಖ ಒಬ್ಬರಿಗೆ ಕಾಣದಂತೆ, ವಾಹನಗಳ ಸಂಚಾರಕ್ಕೂ ಸಹ ತೊಂದರೆಯಾಗಿದೆ ಎಂದು ಲಕ್ಷ್ಮಿ ನಗರದ ನಿವಾಸಿ ಉದಯ ಗಿರಿಯಮ್ಣನವರ ಸ್ಥಳೀಯ ಆಡಳಿತ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.