ಕರಡಹಳ್ಳಿ ಸೀತಾರಾಮು

ಕನ್ನಡಪ್ರಭ ವಾರ್ತೆ ನಾಗಮಂಗಲ

ಗೃಹಬಳಕೆ ಅನಿಲ ಸಿಲಿಂಡರ್‌ಗಳ ಅಸಮರ್ಪಕ ಪೂರೈಕೆಯಿಂದ ಪಟ್ಟಣ ಸೇರಿದಂತೆ ತಾಲೂಕಿನ ಜನರು ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಎಸ್‌ಆರ್ ಇಂಡೇನ್ ಗ್ಯಾಸ್ ಏಜೆನ್ಸಿ ಅಂಗಡಿ ಎದುರು ಬೆಳಿಗ್ಗೆಯಿಂದ ಸಂಜೆವರೆಗೂ ಜನರು ತಿಂಡಿ, ಊಟವಿಲ್ಲದೆ ಸರತಿ ಸಾಲಿನಲ್ಲಿ ನಿಂತು ಸಿಲಿಂಡರ್ ಸಿಗದೆ ಬರಿಗೈಲಿ ಮನೆಗೆ ವಾಪಸ್ ತೆರಳುವಂತಾಗಿದೆ.

ಗೃಹಬಳಕೆ ಸಿಲಿಂಡರ್ ಬುಕ್ ಮಾಡಿದ ಹದಿನೈದು ದಿನದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ಪೂರೈಸುವುದಾಗಿ ಹೇಳುವ ಏಜೆನ್ಸಿಯವರು ಒಂದೂವರೆ ತಿಂಗಳು ಕಳೆದರೂ ಕೂಡ ಬೇಡಿಕೆಗೆ ಅನುಸಾರವಾಗಿ ಸಿಲಿಂಡರ್ ಲೋಡ್ ಬರುತ್ತಿಲ್ಲವೆಂಬ ನೆಪಹೇಳಿ ಸಮರ್ಪಕವಾಗಿ ಸಿಲಿಂಡರ್ ಪೂರೈಸದೆ ಸತಾಯಿಸುತ್ತಿದ್ದಾರೆ. ಅಲ್ಲದೇ, ಎಸ್‌ಆರ್ ಇಂಡೇನ್ ಗ್ಯಾಸ್ ಏಜೆನ್ಸಿಯವರು ಗೃಹಬಳಕೆಯ ಸಿಲಿಂಡರ್‌ಗಳನ್ನು ಕಾಫಿ-ಟೀ ಹೋಟೆಲ್‌ಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸಿಲಿಂಡರ್ ಗ್ರಾಹಕರ ಆರೋಪವಾಗಿದೆ.

ಪಟ್ಟಣದ ಎಸ್‌ಆರ್ ಇಂಡೇನ್ ಗ್ಯಾಸ್ ಏಜೆನ್ಸಿ 27,637 ಗ್ರಾಹಕರನ್ನು ಹೊಂದಿದ್ದರೆ, ತಾಲೂಕಿನ ಬೆಳ್ಳೂರಿನ ಎಚ್.ಪಿ.ಗ್ಯಾಸ್ ಏಜೆನ್ಸಿ 17,500 ಗ್ರಾಹಕರು ಹಾಗೂ ಚಿಣ್ಯದ ಭಾರತ್ ಗ್ಯಾಸ್ ಏಜೆನ್ಸಿ 1308 ಗ್ರಾಹಕರನ್ನು ಹೊಂದಿದೆ. ಒಟ್ಟಾರೆ ತಾಲೂಕಿನಲ್ಲಿರುವ ಮೂರು ಗ್ಯಾಸ್ ಏಜೆನ್ಸಿಗಳಿಂದ ಒಟ್ಟು 46,445 ಗ್ರಾಹಕರಿದ್ದಾರೆ.


27 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಎಸ್‌ಆರ್ ಇಂಡೇನ್ ಗ್ಯಾಸ್ ಏಜೆನ್ಸಿ ಮೂಲಕ ತಾಲೂಕು ಮಾತ್ರವಲ್ಲದೆ ಮಂಡ್ಯ ತಾಲೂಕಿನ ಬಸರಾಳು ಹಾಗೂ ಕುಣಿಗಲ್ ತಾಲೂಕಿನ ಯಡಿಯೂರು ವರೆಗೂ ಗೃಹಬಳಕೆ ಸಿಲಿಂಡರ್ ಪೂರೈಕೆಯಾಗುತ್ತಿದೆ. ಆದರೆ, ಗ್ರಾಹಕರು ಬುಕಿಂಗ್ ಮಾಡಿ ಒಂದೂವರೆ ತಿಂಗಳು ಕಳೆದರೂ ಸಹ ಸಿಲಿಂಡರ್ ಪೂರೈಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಎಚ್‌ಪಿ ಮತ್ತು ಭಾರತ್ ಗ್ಯಾಸ್ ಏಜೆನ್ಸಿಯ ಗ್ರಾಹಕರಿಗಿಂತ ಎಸ್‌ಆರ್ ಇಂಡೇನ್ ಗ್ಯಾಸ್ ಏಜೆನ್ಸಿಯ ಗ್ರಾಹಕರಿಗೆ ಸಿಲಿಂಡರ್ ಪಡೆಯುವುದೇ ದೊಡ್ಡ ತಲೆನೋವಾಗಿದೆ.

ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ:

ಗೃಹ ಬಳಕೆ ಸಿಲಿಂಡರ್ ಸಮಸ್ಯೆ ಕುರಿತಂತೆ ದೂರು ಹೇಳಲು ಅಥವಾ ಮಾಹಿತಿ ಪಡೆದುಕೊಳ್ಳಲು ಪಟ್ಟಣದ ಎಸ್‌ಆರ್ ಇಂಡೇನ್ ಗ್ಯಾಸ್ ಏಜೆನ್ಸಿ ಕಚೇರಿಗೆ ಪ್ರತಿನಿತ್ಯ ನೂರಾರು ಮಂದಿ ಗ್ರಾಹಕರು ದೂರವಾಣಿ ಕರೆ ಮಾಡಿದರೂ ಸಹ ಕಚೇರಿ ಸಿಬ್ಬಂದಿ ಸೌಜನ್ಯಕ್ಕಾದರೂ ಕರೆ ಸ್ವೀಕರಿಸುವುದಿಲ್ಲ. ಕೆಲವೊಮ್ಮೆ ಕರೆ ಸ್ವೀಕರಿಸಿದರೂ ಸರ್ವರ್ ಸಮಸ್ಯೆಯಿದೆ ನಾಳೆ ಕರೆ ಮಾಡಿ ಎಂದು ಉಡಾಫೆ ಉತ್ತರ ನೀಡುತ್ತಾರೆಂದು ಹೇಳಲಾಗುತ್ತಿದೆ.

ಈ ಹಿಂದೆ ಪ್ರತಿನಿತ್ಯ ಎಸ್‌ಆರ್ ಇಂಡೇನ್ ಗ್ಯಾಸ್ ಏಜೆನ್ಸಿಗೆ ಒಂದು ಲೋಡ್‌ನಲ್ಲಿ 318 ಗೃಹಬಳಕೆ ಸಿಲಿಂಡರ್‌ಗಳು ಬರುತ್ತಿದ್ದವು. 400 ಬುಕಿಂಗ್‌ಗಳಾಗುತ್ತಿದ್ದವು. ಸಮಸ್ಯೆಯಾಗದಂತೆ ಸರಿದೂಗಿಸಬಹುದಿತ್ತು. ಆದರೆ, ಈಗ ಎರಡು ದಿನಕ್ಕೊಮ್ಮೆ ಒಂದು ಲೋಡ್ ಸಿಲಿಂಡರ್ ಬರುತ್ತಿದ್ದು, ಅದೂ ಸಹ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಬುಕಿಂಗ್‌ಗಳಾಗುತ್ತಿವೆ. ಇದರಿಂದ ಗ್ರಾಹಕರಿಗೆ ಸಿಲಿಂಡರ್ ಒದಗಿಸುವಲ್ಲಿ ಸಮಸ್ಯೆಯಾಗುತ್ತಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆ ಪ್ರಮಾಣದ ಸಿಲಿಂಡರ್‌ಗಳು ಪೂರೈಕೆಯಾಗುವ ಸಾಧ್ಯತೆ ಇದೆ ಎಂದು ಎಸ್‌ಆರ್ ಇಂಡೇನ್ ಗ್ಯಾಸ್ ಏಜೆನ್ಸಿ ಸಿಬ್ಬಂದಿಗಳು ಆಹಾರ ನಿರೀಕ್ಷಕರಿಗೆ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.

ಕಳೆದ ಮಾರ್ಚ್ 3ರಂದು ನಾವು ಸಿಲಿಂಡರ್ ತೆಗೆದುಕೊಂಡ ನಂತರ ಏ.7ರಂದು ಬುಕಿಂಗ್ ಮಾಡಿದ್ದೇವೆ. ಈವರೆಗೂ ಸಿಲಿಂಡರ್ ಕೊಟ್ಟಿಲ್ಲ. 15 ದಿನದಿಂದ ಪ್ರತಿನಿತ್ಯ ಗ್ಯಾಸ್ ಏಜೆನ್ಸಿ ಅಂಗಡಿಗೆ ಅಲೆದಾಡುತ್ತಿದ್ದರೂ ವಿತರಣಾ ದೃಢೀಕರಣ ಸಂಕೇತ (ಡಿಎಸಿ) ನಂಬರ್ ಬಂದಿಲ್ಲ ಎಂದು ನೆಪ ಹೇಳುತ್ತಿದ್ದಾರೆ. ಮಂಗಳವಾರದಿಂದ ಅಂಗಡಿ ಮುಂದೆ ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಬಿಲ್ ಕೊಟ್ಟು ಎ.ಶ್ರೀರಾಮನಹಳ್ಳಿ ಸಮೀಪ ಗ್ಯಾಸ್ ಸಿಲಿಂಡರ್ ದಾಸ್ತಾನು ಕೇಂದ್ರದಲ್ಲಿ ಪಡೆಯುವಂತೆ ಏಜೆನ್ಸಿಯವರು ಹೇಳುತ್ತಾ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ.

- ರೀಟಾ, ನಾಗಮಂಗಲ ಟಿ.ಬಿ.ಬಡಾವಣೆ ವಾಸಿ

ಅಡುಗೆ ಸಿಲಿಂಡರ್‌ಗಾಗಿ ಕಳೆದ ಒಂದು ತಿಂಗಳಿಂದ ಪರದಾಡುತ್ತಿದ್ದೇವೆ. ಇಂಡೇನ್ ಗ್ಯಾಸ್ ಏಜೆನ್ಸಿಯವರಿಗೆ ಸರಿಯಾಗಿ ಸಿಲಿಂಡರ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಬುಕಿಂಗ್ ಮಾಡಿ ತಿಂಗಳಾದರೂ ನಮಗೆ ಸಿಲಿಂಡರ್ ಸಿಗುತ್ತಿಲ್ಲ. ಆದರೆ, ಸಣ್ಣ ಪುಟ್ಟ ಹೋಟೆಲ್‌ಗಳಿಗೆ ಅಡುಗೆ ಸಿಲಿಂಡರ್‌ಗಳು ಕಾಳಸಂತೆಯಲ್ಲಿ ಮಾರಾಟವಾಗಿ ಪೂರೈಕೆಯಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಿ ಅಧಿಕಾರಿಗಳು ಬುಕಿಂಗ್ ಮಾಡಿದವರಿಗೆ ಸರಿಯಾದ ರೀತಿಯಲ್ಲಿ ಸಿಲಿಂಡರ್ ಪೂರೈಸಲು ಕ್ರಮ ವಹಿಸಬೇಕು.

- ಅನುಸೂಯಮ್ಮ, ನಾಗಮಂಗಲ ಟಿ.ಬಿ.ಬಡಾವಣೆ ವಾಸಿ