ಸಾರಾಂಶ
ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ
ಶಿರಹಟ್ಟಿ ತಾಲೂಕು ಬರದ ನಾಡೆಂಬ ಶಾಶ್ವತ ಹಣೆಪಟ್ಟಿ ಹೊಂದಿದೆ. ಜತೆಗೆ ಇಲ್ಲಿ ಅಭಿವೃದ್ಧಿ ಕಾರ್ಯಗಳಿಗೂ ಬರ ಬಂದಿದೆ ಎಂಬ ಆರೋಪ ಜನರಿಂದ ಕೇಳಿ ಬರುತ್ತಿದೆ.ತಾಲೂಕಿನ ಬಹುತೇಕ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿವೆ. ಮೇಲಿಂದ ಮೇಲೆ ಉಂಟಾಗುವ ಬರಗಾಲದಿಂದ ಅನೇಕ ಕುಟುಂಬಗಳು ಕಂಗೆಟ್ಟಿವೆ. ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಿದೆ. ಕೂಲಿ-ನಾಲಿ ಮಾಡುವುದಾದರೂ ಸರಿ ಎಂದು ನಗರಗಳಿಗೆ ಧಾವಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇಡೀ ತಾಲೂಕು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಸುಗಮ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳಿಲ್ಲ. ಪ್ಲೋರೈಡ್‌ಯುಕ್ತ ನೀರು ಸೇವನೆ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ದುಡಿಮೆಗೆ ತಕ್ಕ ಆದಾಯ ದೊರೆಯುತ್ತಿಲ್ಲ. ಸೂಕ್ತ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಮುಖ್ಯವಾಗಿ ಉತ್ತಮ ಗುಣಮಟ್ಟದ ಶಿಕ್ಷಣವೂ ಮಕ್ಕಳಿಗೆ ದೊರೆಯುತ್ತಿಲ್ಲ. ಇವೆಲ್ಲ ಕಾರಣಗಳಿಂದ ತಾಲೂಕು ಅಭಿವೃದ್ಧಿ ಕಾಣದಾಗಿದೆ.
ತಾಲೂಕಿನ ಬಹುತೇಕ ರಸ್ತೆಗಳು ಇಂದಿಗೂ ಡಾಂಬರು ಕಂಡಿಲ್ಲ. ಅನೇಕ ಗ್ರಾಮಗಳಿಗೆ ಸರಿಯಾದ ವಿದ್ಯುತ್, ನೀರು, ವೈದ್ಯಕೀಯ ಸೌಲಭ್ಯಗಳು ದೊರೆತಿಲ್ಲ. ಗ್ರಾಮೀಣ ಪ್ರದೇಶದ ಕೆಲವೆಡೆ ವಾಹನ ಸಂಚಾರ ಬೆಳಗ್ಗೆ ಒಂದು, ಸಂಜೆ ಒಂದು ಎಂಬಷ್ಟು ವಿರಳವಾಗಿದೆ. ಇಂಥ ಕುಗ್ರಾಮಗಳೇ ಇರುವ ಶಿರಹಟ್ಟಿ ಅಭಿವೃದ್ಧಿ ಕಾಣುವುದು ಯಾವಾಗ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.೬೬೪ ಚ.ಕಿ.ಮೀ. ವಿಸ್ತೀರ್ಣದ ಶಿರಹಟ್ಟಿ ತಾಲೂಕಿನ ಜನಸಂಖ್ಯೆ ೨ ಲಕ್ಷಕ್ಕೂ ಹೆಚ್ಚು. ತಾಲೂಕಿನಲ್ಲಿ 7 ಪಿಎಚ್‌ಸಿ, 1 ಸಿಎಚ್‌ಸಿ, 1 ಟಿಎಲ್‌ಎಚ್ ಇದೆ. ವೈದ್ಯರ ಮತ್ತು ಸಿಬ್ಬಂದಿ ಜತೆಗೆ ನರ್ಸ್, ಸ್ಟಾಫ್ ನರ್ಸ್, ಹಿರಿಯ, ಕಿರಿಯ ಮಹಿಳಾ ಸಹಾಯಕಿಯರ ಅಗತ್ಯವಿದೆ. ಸದ್ಯ ಕಾರ್ಯನಿರ್ವಹಿಸುತ್ತಿರುವವರು ಕೂಡ ತರಬೇತಿ ವೈದ್ಯರಾಗಿದ್ದು, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಪ್ರತಿ ವರ್ಷವೂ ಗೋವಾ, ಮಂಗಳೂರು, ಪುತ್ತೂರ ಸೇರಿದಂತೆ ಬೇರೆ ಬೇರೆ ಕಡೆಗೆ ಜನ ದುಡಿಯಲು ಗುಳೆ ಹೋಗುತ್ತಿದ್ದು, ಇದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಉದ್ಯೋಗ ಖಾತ್ರಿಯಂತಹ ಯೋಜನೆಗಳಿದ್ದರೂ ಸರಿಯಾದ ಸಮಯಕ್ಕೆ ದುಡಿಯವ ಕೈಗಳಿಗೆ ಕೆಲಸ ಸಿಗುತ್ತಿಲ್ಲ. ಚುನಾವಣಾ ನೀತಿ ಸಂಹಿತೆ ನೆಪ ಹೇಳಿ ದುಡಿಯುವ ಕೈಗಳಿಗೆ ಕೆಲಸ ನೀಡದೇ ಅಧಿಕಾರಿಗಳು ನುಣುಚಿಕೊಳ್ಳಬಾರದು ಎಂದು ಜನತೆ ಮನವಿ ಮಾಡಿದ್ದಾರೆ.
ಈ ಬಾರಿ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಕೃಷಿ ಉತ್ಪನ್ನ ಬಂದಿಲ್ಲ. ಮೂಲ ಕೃಷಿಯನ್ನೇ ನಂಬಿದ ಜನ ಕಂಗಾಲಾಗಿದ್ದಾರೆ. ಸರ್ಕಾರ ಉದ್ಯೋಗ ಖಾತರಿ ಯೋಜನೆಯಡಿ ₹೩೪೯ ವೇತನ ಹೆಚ್ಚಳ ಮಾಡಿದೆ. ಆದರೆ ವೇತನ ಹೆಚ್ಚಳ ಮಾಡಿದ ಬಗ್ಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾಗಲಿ, ಗ್ರಾಮ ಪಂಚಾಯತಿಯವರಾಗಲಿ ಗ್ರಾಮದಲ್ಲಿ ಅರಿವು ಮೂಡಿಸಿಲ್ಲ. ಹೀಗಾದರೆ ಸರ್ಕಾರದ ಉದ್ದೇಶ ವಿಫಲವಾಗುತ್ತದೆ ಎಂದುಮಾಚೇನಹಳ್ಳಿ ಗ್ರಾಪಂ ಮಾಜಿ ಸದಸ್ಯ ಶಂಕರ ಮರಾಠೆ ಹೇಳಿದರು.
ಈಗಾಗಲೇ ತಾಲೂಕಿನ ೧೪ ಗ್ರಾಪಂ ವ್ಯಾಪ್ತಿಯ ಪಿಡಿಒಗಳ ಜತೆ ಸಭೆ ನಡೆಸಿದ್ದು, ಗ್ರಾಮೀಣ ಪ್ರದೇಶದ ಜನ ವಲಸೆ ಹೋಗುವುದನ್ನು ತಪ್ಪಿಸಲು ಏ. ೧ರಿಂದ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಾಮಗಾರಿ ಪ್ರಾರಂಭ ಮಾಡಲು ಸೂಚನೆ ನೀಡಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ವಿ. ಪ್ರಶಾಂತರಾವ್ ಹೇಳಿದರು.