ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ನಾನು ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಆಯ್ಕೆಯಾದ ನೂರು ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ 10 ಸಾವಿರ ಕೋಟಿ ರು.ಗಳನ್ನು ಕೇಂದ್ರ ಸರ್ಕಾರದಿಂದ ತರುತ್ತೇನೆ ಎಂದು ಮಾಜಿ ಸಚಿವ ಹಾಗೂ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು.ಕೊರಟಗೆರೆ ಪಟ್ಟಣದ ಎಂ.ಜಿ.ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಈ ಚುನಾವಣೆಯು ವಿಶ್ವ ನಾಯಕ ನರೇಂದ್ರ ಮೋದಿಯವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡುವುದು ಮತ್ತು ಮಾಜಿ ಪ್ರಧಾನಿ ದೇವೇಗೌಡರ ಸ್ವಾಭಿಮಾನವನ್ನು ಗೆಲ್ಲಿಸುವುದಾಗಿದೆ, ತುಮಕೂರು ಕ್ಷೇತ್ರದಲ್ಲಿ ಎತ್ತಿನಹೊಳೆ ಯೋಜನೆಗೆ ಮೊದಲ ಆದ್ಯತೆ, ರಾಯದುರ್ಗಾ ಮತ್ತು ತುಮಕೂರು ತ್ವರಿತ ರೈಲ್ವೆ ಕಾಮಗಾರಿ, ಪ್ರಧಾನಿ ಗ್ರಾಮ ಸಡಕ್ ಯೋಜನೆಯಲ್ಲಿ ಲೋಕಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ರಸ್ತೆ ಸೇರಿ ಮೂಲಭೂತ ಸೌಕರ್ಯ, ತುಮಕೂರು ಲೋಕಸಭೆಯ ಪ್ರತಿ ಕ್ಷೇತ್ರದಲ್ಲೂ ಹೈಟೆಕ್ ಆಸ್ಪತ್ರೆ, ನೀರಾವರಿಗೆ ಹೆಚ್ಚಿನ ಆದ್ಯತೆ, ಕೈಗಾರಿಕೆಗಳ ಸ್ಥಾಪನೆ, ಸಿದ್ದರಬೆಟ್ಟ ಕ್ಷೇತ್ರದಲ್ಲಿ ಆರ್ಯವೇದ ವಿಶ್ವವಿದ್ಯಾನಿಲಯ, ಚನ್ನರಾಯನದುರ್ಗವನ್ನು ಬೃಹತ್ ಪ್ರವಾಸಿ ತಾಣವಾಗಿಸುವುದು ಸೇರಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಈ ಚುನಾವಣೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಒಗ್ಗಟ್ಟಿನ ಚುನಾವಣೆಯಾಘಿದ್ದು ಗೆದ್ದ ನಂತರವೂ ಎರಡೂ ಪಕ್ಷಗಳನ್ನು ಸಮಾನ ಮನಸ್ಸಿನಿಂದ ನೋಡುತ್ತೇನೆ, ಏ.3 ರಂದು ಬುಧವಾರ ತುಮಕೂರಿನಲ್ಲಿ ನಾಮಪತ್ರ ಸಲ್ಲಿಸಲಿದ್ದು, ಕೊರಟಗೆರೆ ಕ್ಷೇತ್ರದಿಂದ ಎರಡು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಆಗಮಿಸುವಂತೆ ಕೋರಿದರು.
ಮಾಜಿ ಶಾಸಕ ಪಿ.ಆರ್.ಸುಧಾಕರ ಲಾಲ್ ಮಾತನಾಡಿ, ತುಮಕೂರಿನಲ್ಲಿ ಸೋಮಣ್ಣರನ್ನು ಗೆಲ್ಲಿಸಿಕೊಂಡು ಬರುವಂತೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಕರೆ ಕೊಟ್ಟಿದ್ದಾರೆ, ಈ ಸಮಯ ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಿ ತಮ್ಮ ಶಕ್ತಿ ಪ್ರದರ್ಶಿಸುವ ಸಮಯ ಎಲ್ಲಾ ಬಂದಿದೆ ದೇಶದಲ್ಲಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು, ದೇವೇಗೌಡರ ಸ್ವಾಭಿಮಾನ ಉಳಿಯಬೇಕು, ಸೋಮಣ್ಣ ಗೆಲ್ಲಬೇಕು ಎಂದರು.ಬಿಜೆಪಿ ಮುಖಂಡ ಬಿ.ಎಚ್.ಅನಿಲ್ ಕುಮಾರ್ ಮಾತನಾಡಿ, ಈ ಬಾರಿ ಸೋಮಣ್ಣನವರಿಗೆ ಕೊರಟಗೆರೆ ಮತ್ತು ಮಧುಗಿರಿ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಮತಗಳನ್ನು ನೀಡುತ್ತೇವೆ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವು ಧೂಳಿಪಟವಾಗುತ್ತದೆ. ಮೋದಿ ಗ್ಯಾರಂಟಿಗಳ ಮುಂದೆ ಬೇರೆ ಯಾವ ಗ್ಯಾರಂಟಿಗಳೂ ನಿಲ್ಲುವುದಿಲ್ಲ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಕೊರಟಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜೆಡಿಎಸ್ - ಬಿಜೆಪಿ ಪಕ್ಷಗಳ ಮುಖಂಡರು, ಕಾರ್ಯಕರ್ತರು ಬೃಹತ್ ಬೈಕ್ ರ್‍ಯಾಲಿ ಮತ್ತು ಮೆರವಣಿಗೆ ನಡೆಸಿದರು.ಕಾರ್ಯಕ್ರಮದಲ್ಲಿ ಶಾಸಕರಾದ ಸುರೇಶ್‌ಗೌಡ, ಗೋಪಾಲಯ್ಯ, ಮಾಜಿ ಶಾಸಕ ನೇ.ಲಾ ನರೇಂದ್ರ ಬಾಬು, ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ, ಮಂಡಲಾಧ್ಯಕ್ಷ ಡಾ.ದರ್ಶನ್, ಮಾಜಿ ಅಧ್ಯಕ್ಷ ಪವನ್ ಕುಮಾರ್, ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು, ಜಿಪಂ ಮಾಜಿ ಸದಸ್ಯ ಶಿವರಾಮಯ್ಯ, ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿ.ಕೆ.ವೀರಕ್ಯಾತರಾಯ, ಪಪಂ ಸದಸ್ಯರಾದ ಪ್ರದೀಪ್, ಪುಟ್ಟನರಸಯ್ಯ, ಲಕ್ಷ್ಮೀನಾರಾಯಣ್ ಎರಡು ಪಕ್ಷಗಳ ಮುಖಂಡರಾದ ಲಕ್ಷ್ಮಣ್, ಲಕ್ಷ್ಮೀಶ, ರಮೇಶ್, ಗುರುದತ್ತ್, ಹನುಮಂತರಾಯಪ್ಪ, ಸ್ವಾಮಿ ಸೇರಿ ಇನ್ನಿತರರು ಹಾಜರಿದ್ದರು.