ಶೌಚಾಲಯ ಗೋಡೆ ಬಿದ್ದು ಜನರಿಗೆ ತೊಂದರೆ

| Published : Oct 10 2025, 01:01 AM IST

ಸಾರಾಂಶ

ಸ್ಥಳೀಯರು ಸಂತೆಯ ಪ್ರದೇಶದಲ್ಲಿ ತಕ್ಷಣ ಶೌಚಾಲಯದ ಗೋಡೆ ಮತ್ತು ಕಾಂಪೌಂಡ್ ಪುನರ್‌ನಿರ್ಮಿಸಿ ಶೌಚಾಲಯ ಪುನಃ ಬಳಕೆಗೆ ತರಬೇಕು

ಹನಮಸಾಗರ: ಪಟ್ಟಣದ ಸಂತೆ ಬಜಾರ್ ಪ್ರದೇಶದಲ್ಲಿರುವ ಪುರುಷರ ಶೌಚಾಲಯದ ಗೋಡೆ ಹಾಗೂ ಕಾಂಪೌಂಡ್ ಬಿದ್ದು ಕಾರಣ ಜನರಿಗೆ ತೀವ್ರ ತೊಂದರೆ ಎದುರಾಗಿದೆ.

ಪ್ರತಿ ಸೋಮವಾರ ನಡೆಯುವ ಈ ಸಂತೆ ಬಜಾರ್‌ಗೆ ಹತ್ತಿರದ 30 ರಿಂದ 50 ಹಳ್ಳಿಗಳ ಜನರು ವ್ಯಾಪಾರಕ್ಕಾಗಿ ಹಾಗೂ ಖರೀದಿಗಾಗಿ ಆಗಮಿಸುತ್ತಾರೆ.ಆದರೆ, ಶೌಚಾಲಯ ಬಳಕೆಗೆ ಅನುಕೂಲವಾಗದಿರುವುದರಿಂದ ಪುರುಷರು, ಮಹಿಳೆಯರು ಹಾಗೂ ಚಿಕ್ಕಮಕ್ಕಳು ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾಮದ 6ನೇ ವಾರ್ಡ್‌ನ ವ್ಯಾಪ್ತಿಯ ಈ ಶೌಚಾಲಯದ ಗೋಡೆ ಮೂರು ನಾಲ್ಕು ತಿಂಗಳು ಹಿಂದೆಯೇ ಬಿದ್ದಿದ್ದರೂ, ಸಂಬಂಧಿಸಿದ ವಾರ್ಡ್ ಸದಸ್ಯರು ಹಾಗೂ ಗ್ರಾಪಂ ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂತೆ ಬಜಾರ್‌ನಲ್ಲಿ ವ್ಯಾಪಾರ ಮಾಡುವವರು ಮತ್ತು ಭೇಟಿ ನೀಡುವವರು ಹಲವಾರು ಬಾರಿ ಫೋನ್ ಮುಖಾಂತರ ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಸ್ಪಂದನೆ ದೊರಕಿಲ್ಲ.

ಸ್ಥಳೀಯರು ಸಂತೆಯ ಪ್ರದೇಶದಲ್ಲಿ ತಕ್ಷಣ ಶೌಚಾಲಯದ ಗೋಡೆ ಮತ್ತು ಕಾಂಪೌಂಡ್ ಪುನರ್‌ನಿರ್ಮಿಸಿ ಶೌಚಾಲಯ ಪುನಃ ಬಳಕೆಗೆ ತರಬೇಕು ಎಂದು ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.