ಹೊಸಕೆರೆ ಗ್ರಾಮಕ್ಕೆ ನೀರು ಹರಿಸುವಂತೆ ಕೆರೆಗಳಿದು ಜನರ ಪ್ರತಿಭಟನೆ

| Published : Aug 20 2024, 12:54 AM IST

ಹೊಸಕೆರೆ ಗ್ರಾಮಕ್ಕೆ ನೀರು ಹರಿಸುವಂತೆ ಕೆರೆಗಳಿದು ಜನರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದ್ದಾರೆ ವಿನಃ ನೀರು ಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ಕೆಆರ್ ಎಸ್ ಅಣೆಕಟ್ಟೆಯಿಂದ ನಾಲೆ ಮೂಲಕ ತಾಲೂಕಿನ ಹೊಸಕೆರೆ ಗ್ರಾಮಕ್ಕೆ ನೀರು ಹರಿಸುವಂತೆ ಒತ್ತಾಯಿಸಿ, ಕೆರೆಗಿಳಿದು ಜನರು ಪ್ರತಿಭಟನೆ ನಡೆಸಿದರು.

ಗ್ರಾಮಕ್ಕೆ ನೀರು ಹರಿಸದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡ ಎಚ್.ಎಂ.ಮಲ್ಲೇಶ್ ಮಾತನಾಡಿ, ಅಣೆಕಟ್ಟೆಯಲ್ಲಿ ನೀರು ತುಂಬಿದರೂ ಹೊಸಕೆರೆ ಹಾಗೂ ನಿಲವಾಗಿಲು ಗ್ರಾಪಂಗಳ ಕೆರೆಗಳಿಗೆ ನೀರು ತುಂಬಿಸದೆ ಅಧಿಕಾರಿಗಳು ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರು ಹರಿಸದ ಹಿನ್ನೆಲೆಯಲ್ಲಿ ರೈತರು ಹಾಕಿದ್ದ ಭತ್ತದ ವಟ್ಲು ಒಣಗುತ್ತಿದೆ. ಕೃಷಿ ಪರ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದ್ದಾರೆ ವಿನಃ ನೀರು ಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಕಳೆದ ವರ್ಷ ಮಳೆ ಇಲ್ಲದ ಪರಿಣಾಮ ಕೆರೆಗಳಿಗೆ ನೀರು ಹರಿಸಿಲ್ಲ. ಈ ವರ್ಷ ನೀರು ಇದ್ದರೂ ನೀರು ಹರಿಸದ ಪರಿಣಾಮ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಭಾಗದ ಕೆರೆ, ಕಟ್ಟೆಗಳಿಗೆ ನೀರು ಹರಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೀನಾ ಮೇಷ ಎಣಿಸುತ್ತಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಸಕೆರೆ ಗ್ರಾಮದ ಕೆರೆಗೆ ನೀರು ಬಂದರೆ ಸುಮಾರು 500 ಎಕರೆ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀರು ಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಎಚ್ಆರ್ ಬಿಸಿ ನಾಲೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಶಿವಮಾದಯ್ಯ, ಮುಖಂಡರಾದ ಎಚ್.ಎಂ.ಮಲ್ಲೇಶ್, ಎಚ್.ಸಿ.ರಾಮು, ಶಿವಣ್ಣ, ರಾಮಕೃಷ್ಣ, ಶಿವ ಮಾದಯ್ಯ, ಪುಟ್ಟಸ್ವಾಮಿ, ಅಪ್ಪಾಜಿ ,ಗೋಪಾಲ್, ಮಾಲಿಂಗೇಗೌಡ, ಎಚ್.ಎಮ್.ರಾಮು, ಚಂದ್ರು, ಲೋಕೇಶ್, ಶಿವಣ್ಣ, ಬಾಲರಾಜ್, ಸುರೇಶ್, ಬೋರೇಗೌಡ, ವಿಜೇಂದ್ರ ಹಲವರು ಇದ್ದರು.