ಹೆಚ್ಚುತ್ತಿರುವ ಕಳ್ಳತನಕ್ಕೆ ಬೆಚ್ಚಿಬಿದ್ದ ಜನತೆ

| Published : Mar 06 2025, 12:35 AM IST

ಹೆಚ್ಚುತ್ತಿರುವ ಕಳ್ಳತನಕ್ಕೆ ಬೆಚ್ಚಿಬಿದ್ದ ಜನತೆ
Share this Article
  • FB
  • TW
  • Linkdin
  • Email

ಸಾರಾಂಶ

ಸರಣಿ ಕಳ್ಳತನ ಪಟ್ಟಣದಲ್ಲಿ ಹೆಚ್ಚಾಗಿದೆ. ಸಹಜವಾಗಿ ಸಾರ್ವಜನಿಕರು ಕೂಡ ಇದರಿಂದ ಬೆಚ್ಚು ಬಿದ್ದಿದ್ದು, ಮನೆ ಬಿಟ್ಟು ಎಲ್ಲಿಯೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂಟಿ ಮನೆಗಳನ್ನೇ ಗುರಿಯಾಗಿಸಿಕೊಳ್ಳುತ್ತಿರುವ ದುಷ್ಕರ್ಮಿಗಳು ಸುಲಭವಾಗಿ ಖನ್ನ ಹಾಕುತ್ತಿದ್ದಾರೆ. ಇದರಿಂದಾಗಿ ಮನೆಗೆ ಬೀಗ ಹಾಕಿಕೊಂಡು ಎಲ್ಲಿಯೂ ಹೊರಗೆ ಹೋಗದ ಪರಿಸ್ಥಿತಿ ಸಾರ್ವಜನಿಕರು ಎದುರಿಸುವಂತಾಗಿದೆ.

ಈರಣ್ಣಾ ಬುಡ್ಯಾಗೋಳ

ಕನ್ನಡಪ್ರಭ ವಾರ್ತೆ ರಾಮದುರ್ಗಸರಣಿ ಕಳ್ಳತನ ಪಟ್ಟಣದಲ್ಲಿ ಹೆಚ್ಚಾಗಿದೆ. ಸಹಜವಾಗಿ ಸಾರ್ವಜನಿಕರು ಕೂಡ ಇದರಿಂದ ಬೆಚ್ಚು ಬಿದ್ದಿದ್ದು, ಮನೆ ಬಿಟ್ಟು ಎಲ್ಲಿಯೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂಟಿ ಮನೆಗಳನ್ನೇ ಗುರಿಯಾಗಿಸಿಕೊಳ್ಳುತ್ತಿರುವ ದುಷ್ಕರ್ಮಿಗಳು ಸುಲಭವಾಗಿ ಖನ್ನ ಹಾಕುತ್ತಿದ್ದಾರೆ. ಇದರಿಂದಾಗಿ ಮನೆಗೆ ಬೀಗ ಹಾಕಿಕೊಂಡು ಎಲ್ಲಿಯೂ ಹೊರಗೆ ಹೋಗದ ಪರಿಸ್ಥಿತಿ ಸಾರ್ವಜನಿಕರು ಎದುರಿಸುವಂತಾಗಿದೆ.

ಕತ್ತಲೆ ಆವರಿಸಿದರೆ ಸಾಕು ರಾಮದುರ್ಗ ಪಟ್ಟಣದಲ್ಲಿ ಯಾರ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಾರೆ ಎಂಬ ಜನರನ್ನು ಆವರಿಸಿಕೊಂಡು ಬಿಟ್ಟಿದೆ. ಪೊಲೀಸ್‌ ಇಲಾಖೆ ಕೂಡ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಪ್ರಯತ್ನ ನಡೆಸಿದೆಯಾದರೂ ಅದು ಇನ್ನೂ ಯಶಸ್ವಿಯಾಗುತ್ತಿಲ್ಲ. ರಾತ್ರಿ ವೇಳೆ ಹೆಚ್ಚು ಗಸ್ತು ತಿರುಗಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇದರಿಂದ ಕಳ್ಳರಲ್ಲಿ ಸ್ವಲ್ವವಾದರೂ ಭಯವಾಗುತ್ತದೆ ಎನ್ನುತ್ತಾರೆ.ಈಗಾಗಲೇ ಹಲವಾರು ಮನೆಗಳು, ಅಂಗಡಿಗಳಲ್ಲಿ ದುಷ್ಕರ್ಮಿಗಳು ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ. ಇಷ್ಟಾದರೂ ಪೊಲೀಸರ ಕೈಗೂ ಸಿಗದೆ ಅವರನ್ನು ಯಾಮಾರಿಸುತ್ತಿದ್ದಾರೆ. ಇದು ಕೂಡ ಜನರ ಆತಂಕಕ್ಕೆ ಕಾರಣವಾಗಿದೆ. ಆಗೊಂದು, ಈಗೊಂದು ಕಳವು ಪ್ರಕರಣಗಳು ನಡೆಯುತ್ತಿದ್ದರೂ ದುಷ್ಕರ್ಮಿಗಳ ಕೈಚಳಕ ಮಾತ್ರ ಗೊತ್ತಾಗದಂತೆ ನಡೆಯುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.ಎಲ್ಲೆಲ್ಲಿ ಕಳ್ಳತನವಾಗಿವೆ?:

ದುಷ್ಕರ್ಮಿಗಳು ಪಟ್ಟಣದ ಹಲವೆಡೆ ತಮ್ಮ ಕಳ್ಳತನ ಮಾಡಿದ್ದಾರೆ. ಪಟ್ಟಣದ ಅಂಬೇಡ್ಕರ ನಗರದ ನಿವಾಸಿ ಕಂಡಕ್ಟರ್ ಬಸವರಾಜ ಪೂಜಾರ ಮನೆಯಲ್ಲಿ ಕಳ್ಳತನ ಯತ್ನ ನಡೆದಿದೆ. ಬಾಗಿಲು ಕೊಂಡಿ ಮುರಿದು ಕಳ್ಳರು ಒಳಗೆ ಬರಲು ಮುಂದಾಗಿದ್ದಾರೆ. ಆದರೆ, ಅವರ ಈ ಪ್ರಯತ್ನ ವಿಫಲವಾಗಿದೆ.ಅದೇ ರೀತಿ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಎಪಿಎಂಸಿಯ ಸುರುಚಿ ಕ್ಯಾಂಟೀನ್ ಕಿಟಕಿ ಮುರಿದು ಒಳನುಗ್ಗಿದ ಕಳ್ಳರು ಗಲ್ಲಾ ಪೆಟ್ಟಿಗೆಯಲ್ಲಿನ ಚಿಲ್ಲರೆ ಹಣ ಮತ್ತು ಕೆಲವು ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಮಾತ್ರವಲ್ಲ, ಮಹಾಂತೇಶ ನಗರದ ಚಿನ್ನಾಭರಣದ ವ್ಯಾಪಾರಿ ವೀರೇಶ ಗೋವಿಂದ ಪತ್ತೇಪೂರ ಅವರ ಮನೆಯ ಬಾಗಿಲು ಕೊಂಡಿ ಮುರಿದು ಒಳಗೆ ಇಟ್ಟಿದ್ದ ಅಂದಾಜು ₹62 ಲಕ್ಷ ಬೆಲೆ ಬಾಳುವ 1214 ಗ್ರಾಂ ಬಂಗಾರದ ಆಭರಣಗಳನ್ನು ದೋಚಿದ್ದಾರೆ. ಈ ಪ್ರಕರಣಗಳು ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಈ ಮೂರು ಘಟನೆಗಳು ಹದಿನೈದು ದಿನಗಳ ಮಧ್ಯದಲ್ಲಿ ನಡೆದಿವೆ. ಕಳ್ಳತನ ಪ್ರಕರಣಗಳು ರಾಮದುರ್ಗ ಪಟ್ಟಣದ ನಾಗರಿಕರ ಮತ್ತು ಒಂಟಿ ಮನೆ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಮಾತ್ರವಲ್ಲ, ಇದು ಪೊಲೀಸ್ ಇಲಾಖೆಗೂ ಸವಾಲಿನ ಕೆಲಸವಾಗಿ ಕಾಡುತ್ತಿದೆ.ಕಳ್ಳರ ಕರಾಮತ್ತು ಹೇಗಿರುತ್ತದೆ?:

ಕಳ್ಳರು ಕಿಟಕಿ, ಬಾಗಿಲು ಒಡೆದು ಮನೆ ಒಳಗೆ ಹೋಗಿ ಕಳ್ಳತನ ಮಾಡುವುದು ಮಾಮೂಲಿ. ಆದರೆ, ಈ ಕಳ್ಳರು ಕೆಲವು ಸಂದರ್ಭದಲ್ಲಿ ಬೇರೆ ತಂತ್ರಗಳನ್ನೇ ಬಳಸುತ್ತಿದ್ದಾರೆ. ಪಟ್ಟಣ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಗಡದಕೇರಿಯಲ್ಲಿ ಕೆಲವು ಮನೆಗಳಿಗೆ ರಾತ್ರಿ ಒಂದು ಗಂಟೆಯ ನಂತರ ಮನೆ ಬಾಗಿಲು ಬಡಿಯುತ್ತಾರೆ. ನಮಗೆ ಹಸಿವಾಗಿದೆ, ತಿನ್ನಲು ಅನ್ನ ನೀಡಿ ಎಂದು ಕೂಗುತ್ತಾರೆ ಎಂದು ಸಾರ್ವಜನಿಕರೇ ಹೇಳುತ್ತಿದ್ದಾರೆ. ಇದು ಸಾರ್ವಜನಿಕರು ಬೆಚ್ಚಿಬೀಳಲು ಮತ್ತೊಂದು ಕಾರಣವಾಗಿದೆ. ಒಂದು ವೇಳೆ ಮನೆಯೊಳಗೆ ಇರುವವರು ಬಾಗಿಲು ತೆರೆದು ಹೊರ ಬಂದರೆ ನಾಲ್ಕೈದು ಜನರ ತಂಡ ಮುಸುಕುಧಾರಿಗಳು ಮನೆ ಒಳಗೆ ಓಡಿ ಹೋಗುತ್ತಾರೆ. ಹೀಗಾಗಿ ಜನರು ಕೂಡ ಮುಗ್ದರಾಗಿರುವುದರಿಂದ ಇಂತಹ ದುಷ್ಕರ್ಮಿಗಳ ಮಾತನ್ನು ಕೇಳಿದರೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಪೊಲೀಸರು ಇಂತಹ ದುಷ್ಕರ್ಮಿಗಳ ಹೆಡೆಮುರಿ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ. ಮಾತ್ರವಲ್ಲ, ಸಾರ್ವಜನಿಕರಲ್ಲಿಯೂ ಈ ಕುರಿತಾಗಿ ಜಾಗೃತಿ ಮೂಡಿಸಬೇಕಿದೆ.