ಕನ್ನಡಪ್ರಭ ವಾರ್ತೆ ಮಂಡ್ಯ
ಮಳವಳ್ಳಿಯಲ್ಲಿ ಕಪ್ಪು ಚಿರತೆ ಪ್ರತ್ಯಕ್ಷ..!, ತೋಟಗಾರಿಕೆ ಇಲಾಖೆ ಪಕ್ಕದಲ್ಲಿ ಕಂಡ ಚಿರತೆ. ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ ಫೋಟೋ. ಅದನ್ನು ನೋಡಿ ಕಂಗಾಲಾದ ಜನರು. ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ ಸ್ಥಳೀಯರು. ಜನರ ಆಕ್ರೋಶಕ್ಕೆ ಮಣಿದು ಮೈಸೂರಿನಿಂದ ಚಿರತೆ ಕಾರ್ಯಪಡೆ ಕರೆಸಿ ಪರಿಶೀಲನೆ, ಚಿರತೆ ಸೆರೆಗೆ ಬೋನ್ ಇಟ್ಟ ಅಧಿಕಾರಿಗಳು. ಕೊನೆಗೆ ಅದು ಎಐ (ಕೃತಕ ಬುದ್ಧಿಮತ್ತೆ) ನಲ್ಲಿ ಸೃಷ್ಟಿಸಲಾದ ಕಪ್ಪು ಚಿರತೆ ಎಂದು ತಿಳಿದು ನಿಟ್ಟುಸಿರು.ಒಂದು ಎಐ ಫೋಟೋ ಸೃಷ್ಟಿಸಿದ ಅವಾಂತರದಿಂದ ಪಟ್ಟಣದ ಜನರನ್ನು ಕೆಲ ಗಂಟೆಗಳ ಕಾಲ ಭಯದ ವಾತಾವರಣದಲ್ಲಿರುವಂತೆ ಮಾಡಿತ್ತು. ಎಐ ಫೋಟೋ ಹಾವಳಿಯಿಂದ ಜನರ ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೆಸ್ತುಬಿದ್ದಿದ್ದು ಸುಳ್ಳಲ್ಲ.
ಮಳವಳ್ಳಿ ಪಟ್ಟಣದ ತೋಟಗಾರಿಕೆ ಇಲಾಖೆ ಪಕ್ಕದಲ್ಲಿ ಕಪ್ಪು ಚಿರತೆ ಪ್ರತ್ಯಕ್ಷವಾಗಿರುವ ಕುರಿತು ವದಂತಿ ಹರಡಿತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಕಪ್ಪು ಚಿರತೆ ಇರುವ ದೃಶ್ಯದ ಫೋಟೋ ಪ್ರಮುಖ ಕಾರಣವಾಗಿತ್ತು. ಮೇಲ್ನೋಟಕ್ಕೆ ಎಐನಿಂದ ಈ ಫೋಟೋವನ್ನು ಎಡಿಟ್ ಮಾಡಿ ತೋಟಗಾರಿಕೆ ಇಲಾಖೆ ಪಕ್ಕದಲ್ಲಿ ಕಂಡಂತೆ ಸೃಷ್ಟಿಸಲಾಗಿತ್ತು. ಇದೇ ಫೋಟೋವನ್ನು ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು. ಕೆಲವೇ ಗಂಟೆಗಳಲ್ಲಿ ಈ ಫೋಟೋ ಪಟ್ಟಣದಾದ್ಯಂತ ವೈರಲ್ ಆಗಿದೆ.ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಕಪ್ಪು ಚಿರತೆ ಫೋಟೋ ನೋಡಿ ಪಟ್ಟಣದ ಜನರಲ್ಲಿ ಆತಂಕ ಸೃಷ್ಟಿಯಾಯಿತು. ಎಲ್ಲರೂ ಆ ಫೋಟೋ ನೋಡಿ ಭಯಗೊಂಡರು. ತೋಟಗಾರಿಕೆ ಇಲಾಖೆ ಸುತ್ತಮುತ್ತಲ ಜನರು ಅರಣ್ಯ ಇಲಾಖೆಗೆ ಸುದ್ದಿಮುಟ್ಟಿಸಿದರು. ವಿಚಿತ್ರವೆಂದರೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಕಪ್ಪು ಚಿರತೆ ಫೋಟೋವನ್ನೂ ಅರಣ್ಯ ಇಲಾಖೆ ಅಧಿಕಾರಿಗಳೂ ನಿಜವೆಂದು ನಂಬಿದರು. ಕಪ್ಪು ಚಿರತೆ ಈ ಭಾಗದಲ್ಲಿ ಕಂಡುಬರುವುದಿಲ್ಲ ಎಂದು ಕೆಲ ಅಧಿಕಾರಿಗಳು ಹೇಳಿದರೂ ಜನರು ನಂಬಲಿಲ್ಲ. ಚಿರತೆ ಸೆರೆ ಹಿಡಿಯುವುದಕ್ಕೆ ಜನರಿಂದ ಒತ್ತಡ ಹೆಚ್ಚಾಯಿತಲ್ಲದೆ, ಅಧಿಕಾರಿಗಳ ವಿರುದ್ಧ ಜನರೂ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು.
ಜನರು ಆತಂಕಗೊಂಡಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೈಸೂರಿನ ಚಿರತೆ ಸೆರೆ ಕಾರ್ಯಪಡೆಗೆ ಸುದ್ದಿ ಮುಟ್ಟಿಸಿ ಅವರನ್ನು ಸ್ಥಳಕ್ಕೆ ಕರೆಸಿದರು. ಕಾರ್ಯಪಡೆ ತಂಡ ಡ್ರೋನ್ ಮೂಲಕ ತೋಟಗಾರಿಕೆ ಇಲಾಖೆ ಸುತ್ತಮುತ್ತಲ ಪ್ರದೇಶದಲ್ಲಿ ಕಪ್ಪುಚಿರತೆಗಾಗಿ ಶೋಧ ಕಾರ್ಯ ನಡೆಸಿದರು. ಎಲ್ಲಿಯೂ ಕಪ್ಪು ಚಿರತೆ ಪತ್ತೆಯಾಗಲಿಲ್ಲ. ಜನರ ಆಕ್ರೋಶವನ್ನೂ ಎದುರಿಸಲಾಗದೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಪ್ರತ್ಯಕ್ಷವಾದ ಸ್ಥಳದಲ್ಲಿ ಬೋನ್ ಇಟ್ಟು ಜನರನ್ನು ಸಮಾಧಾನಪಡಿಸಿದರು.
ಡ್ರೋನ್ ತಪಾಸಣೆಯಿಂದ ಕಪ್ಪು ಚಿರತೆ ಕಂಡುಬರಲಿಲ್ಲವಾದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಫೋಟೋವನ್ನು ಚಿರತೆ ಸೆರೆ ಕಾರ್ಯಪಡೆ ತಂಡ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿತು. ಕೊನೆಗೆ ಇದು ಎಐ ಬಳಸಿ ಸೃಷ್ಟಿಸಲಾಗಿರುವ ಫೋಟೋ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ವರದಿ ಕೊಟ್ಟು ಮೈಸೂರು ಕಡೆಗೆ ತೆರಳಿತು.
ಕಪ್ಪು ಚಿರತೆ ಪ್ರತ್ಯಕ್ಷವಾಗಿರುವುದನ್ನು ಕಂಡು ದಿಗಿಲುಗೊಂಡಿದ್ದ ಜನರು ಸಮಾಧಾನದ ನಿಟ್ಟುಸಿರು ಬಿಟ್ಟರು. ಚಿರತೆ ಸೆರೆಗೆ ಬೋನಿನೊಂದಿಗೆ ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳೂ ಕೂಡ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ಕಚೇರಿ ಕಡೆಗೆ ತೆರಳಿದರು. ಸಾಮಾಜಿಕ ಜಾಲ ತಾಣದಲ್ಲಿ ಫೋಟೋ ಹರಿಯಬಿಟ್ಟು ಭಯ, ಆತಂಕ ಸೃಷ್ಟಿಸಿದ ಕಿಡಿಗೇಡಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.