ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್‌ನಿಂದಾಗಿ ರಾಜ್ಯದ ಎಲ್ಲೆಡೆ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ ಎಂದು ಜನರು ಪರದಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲೂ ಸಹ ಸಿಲಿಂಡರ್‌ ಪೂರೈಕೆ ಮಾಡುವ ಏಜೆನ್ಸಿಗಳು ಬಾಗಿಲು ಹಾಕಿವೆ. ಇದರಿಂದಾಗಿ ಕಳೆದೆರಡು ದಿನಗಳಿಂದ ಸರಿಯಾದ ರೀತಿಯಲ್ಲಿ ಸಿಲಿಂಡರ್‌ ಪೂರೈಕೆ ಆಗುತ್ತಿಲ್ಲವೆಂದು ಜನರು ನಿತ್ಯ ಗ್ಯಾಸ್ ಏಜೆನ್ಸಿಗಳ ಎದುರು ಕಾಯುತ್ತಿದ್ದಾರೆ. ಒಂದೆಡೆ ಗೃಹೋಪಯೋಗಿ ಸಿಲಿಂಡರ್‌ಗಳಿಗಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ಭಾರತ, ಎಚ್‌ಪಿ, ಇಂಡಿಯನ್ ಗ್ಯಾಸ್‌ ಏಜನ್ಸಿಗಳ ಮುಂದೆ ಕಾದು ಕಾದು ಸುಸ್ತಾಗುತ್ತಿದ್ದಾರೆ. ಮತ್ತೊಂದೆಡೆ ವಾಣಿಜ್ಯ ಬಳಕೆಗೂ ಸಹ ಸಿಲಿಂಡರ್‌ಗಳು ಸರಿಯಾಗಿ ಪೂರೈಕೆ ಆಗದ ಹಿನ್ನೆಲೆ ಹೋಟೆಲ್‌ಗಳಲ್ಲೂ ಪರದಾಟ ಶುರುವಾಗಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಗ್ಯಾಸ್‌ ಏಜೆನ್ಸಿಗಳ ಎದುರು ಜನರ ಕ್ಯೂ:

ನಗರದಲ್ಲಿನ ಬಹುತೇಕ ಗ್ಯಾಸ್‌ ಏಜೆನ್ಸಿಗಳಲ್ಲಿ ಗೃಹೋಪಯೋಗಿ ಸಿಲಿಂಡರ್‌ಗಳ ಕೊರತೆ ಉಂಟಾಗಿದ್ದು, ಗೃಹ ಬಳಕೆ ಗ್ಯಾಸ್ ಸಿಲಿಂಡರಿಗಾಗಿ ಜನರು ಪರದಾಟ ನಡೆಸುತ್ತಿದ್ದಾರೆ. ಕೂಲಿ ಕೆಲಸ ಬಿಟ್ಟು ನಸುಕಿನ ಜಾವದಿಂದಲೇ ಖಾಲಿ ಸಿಲಿಂಡರ್‌ಗಳನ್ನು ಇಟ್ಟುಕೊಂಡು ಸರತಿ ಸಾಲಿನಲ್ಲಿ ನಿಂತು ಜನರು ಕಾದು ಕುಳಿತಿರುವುದು ಕಂಡುಬಂದಿದೆ. ನಗರದ ಸ್ಟೇಷನ್ ರಸ್ತೆಯಲ್ಲಿರುವ ಭಾರತ್ ಗ್ಯಾಸ್ ಏಜನ್ಸಿ ಸೇರಿದಂತೆ ಹಲವಾರು ಕಡೆಗಳಲ್ಲೂ ಇದೇ ದೃಶ್ಯಗಳು ಕಾಣಸಿಗುತ್ತಿವೆ. ಇದೊಂದೇ ಏಜನ್ಸಿ ಬಳಿಗೆ ಸುಮಾರು ಜನರು 200 ರಿಂದ 300 ಜನರು ಸರತಿ ಸಾಲಿನಲ್ಲಿ ಬಿಸಿಲಿನಲ್ಲಿ ಗ್ಯಾಸ್‌ಗಾಗಿ ಕಾದು ನಿಂತಿರುವುದು ಕಂಡುಬಂದಿದೆ.ಎಲ್‌ಪಿಜಿ ಗ್ಯಾಸ್ ಬಳಕೆ ಮಾಡುವ ಆಟೋ ಚಾಲಕರೂ ಪರದಾಟ:

ಇನ್ನೊಂದೆಡೆ ನಗರದಲ್ಲಿ ಆಟೋ ಗ್ಯಾಸ್ ಸಪ್ಲೈ ಕೂಡ ಸಂಪೂರ್ಣ ಬಂದ್ ಆಗಿದ್ದು, ಆಟೋ ಎಲ್‌ಪಿಜಿ ಗ್ಯಾಸ್‌ಗಾಗಿ ಆಟೋ ಚಾಲಕರು ಸಹ ಪರದಾಟ ನಡೆಸುತ್ತಿದ್ಧಾರೆ. ಬ್ಯಾರಿಕೇಡ್ ಹಾಕಲಾಗಿದ್ದು, ಆಟೋ ಎಲ್‌ಪಿಜಿ ಬಂಕ್‌ಗಳು ಬಂದ್ ಆಗಿವೆ. ಗುಜರಾತ ಹಾಗೂ ಮುಂಬೈನಿಂದ ಬರಬೇಕಿದ್ದ ಸ್ಟಾಕ್ ಬಂದಿಲ್ಲವಾದ್ದರಿಂದ ಈ ಸಮಸ್ಯೆ ತಲೆದೂರಿದೆ. ಕತಾರ್‌, ದುಬೈ ದೇಶಗಳಿಂದ ಬರುವ ಎಲ್‌ಪಿಜಿ ಯುದ್ಧದ ಹಿನ್ನೆಲೆ ಸಾಕಷ್ಟು ಪೂರೈಕೆಯಾಗುತ್ತಿಲ್ಲ. ನಗರದಲ್ಲಿ ಸುಮಾರು 5 ಸಾವಿರ ಎಲ್‌ಪಿಜಿ ಗ್ಯಾಸ್ ಹೊಂದಿರುವ ಆಟೋಗಳು ಇವೆ. ಎಲ್ಲರೂ ಎಲ್‌ಪಿಜಿ ತುಂಬಿಸಿಕೊಳ್ಳಲು ಕಿಲೋಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.ಯಾರೂ ಗೊಂದಲ ಸೃಷ್ಟಿಸಬೇಡಿ:

ಯುದ್ದದ ಹಿನ್ನೆಲೆ ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ಸಮಸ್ಯೆಯಾಗಿದೆ ಎಂದು ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಸೃಷ್ಠಿಸಿರುವುದರಿಂದ ಜನರು ಭಯಭೀತರಾಗಿದ್ದಾರೆ. ನಿತ್ಯ ಬರುವಂತೆ ಎಲ್ಲ ಏಜನ್ಸಿಗಳಿಗೂ ಒಂದೊಂದು ಲಾರಿ ಸಿಲಿಂಡರ್‌ಗಳು ಬರುತ್ತಿವೆ. ಆದರೆ ನಮಗೆ ಗ್ಯಾಸ್‌ ಸಿಗುತ್ತದೋ ಇಲ್ಲವೋ ಎಂದು ಎಲ್ಲ ಜನರು ಒಂದೇ ದಿನ ಬಂದು ಮುಗಿಬಿದ್ದಿದ್ದರಿಂದ ಈ ರೀತಿ ತೊಂದರೆಯಾಗಿದೆ. ಯಾರೂ ಕೂಡ ಒಮ್ಮೆಲೆ ಮನೆಯಲ್ಲಿರುವ ಎಲ್ಲ ಸಿಲಿಂಡರ್‌ಗಳನ್ನು ತುಂಬಿಸಿಕೊಳ್ಳಲು ಹಾತೊರೆಯಬಾರದು. ಗ್ಯಾಸ್‌ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲವೆಂದು ಏಜನ್ಸಿಗಳು ಮನವಿ ಮಾಡುತ್ತಿವೆ.

----------

ಕಳೆದೆರಡು ದಿನಗಳಿಂದ ಗ್ಯಾಸ್‌ ಸಿಲಿಂಡರ್‌ಗಾಗಿ ಅಲೆದಾಡುತ್ತಿದ್ದೇವೆ. ದಿನಕ್ಕೆ ಒಂದು ಲೋಡ್‌ ಮಾತ್ರ ಸಿಲಿಂಡರ್‌ಗಳು ಬರುತ್ತಿದ್ದು, ನಮಗೆ ಸಿಗುತ್ತಿಲ್ಲ. ಇದ್ದಬದ್ದ ಕೆಲಸವನ್ನೆಲ್ಲ ಬಿಟ್ಟುಬಂದು ಇಲ್ಲಿ ಕಾಯುವಂತಾಗಿದೆ. ನಾವು ಎಷ್ಟೊತ್ತು ಕಾದು ಕುಳಿತರೂ ಏಜನ್ಸಿಗಳು ಮಾತ್ರ ಬಾಗಿಲು ತೆಗೆಯುತ್ತಿಲ್ಲ. ಕೇಳಿದರೆ ನೋ ಸ್ಟಾಕ್ ಎಂದು ಹೇಳಿ ಕಳಿಸುತ್ತಿದ್ದಾರೆ. ಇನ್ನು ಮೊದಲು ಆನಲೈನ್‌ನಲ್ಲಿ ಬುಕ್ ಮಾಡುತ್ತಿದ್ದ ನಾವು ಈಗ ಆನಲೈನ್‌ನಲ್ಲಿ ಸಿಲಿಂಡರ್‌ ಬುಕ್ ಮಾಡಿದರೂ ಆಗುತ್ತಿಲ್ಲ. ಸರ್ಕಾರ ತಕ್ಷಣ ಇದಕ್ಕೆ ಪರಿಹಾರ ಹುಡುಕಬೇಕಿದೆ.

-ಭಾರತಿ ಬುರಣಾಪುರ, ಕಾದು ಕುಳಿತಿರುವ ಗ್ರಾಹಕರು.----------ನಿತ್ಯದ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಿಲ್ಲ. ಜನ್ರು ಗ್ಯಾಸ್ ಸಿಲಿಂಡರ್‌ ಸಿಗುತ್ತಿಲ್ಲ. ತಪ್ಪು ಕಲ್ಪನೆಯಿಂದ ಹೆಚ್ಚುವರಿಯಾಗಿ ಬಂದು ಕುಳಿತಿದ್ದಾರೆ. ನಾವು ದಿನಕ್ಕೆ 500 ಸಿಲಿಂಡರ್‌ ಸರಬರಾಜು ಮಾಡುತ್ತಿದ್ದೆವು. ಈಗ ದಿನಕ್ಕೆ ಸಾವಿರಾರು ಜನರು ಬರುತ್ತಿರುವುದರಿಂದ ಪೂರೈಕೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಡೊಮೆಸ್ಟಿಕ್‌ ಸಿಲಿಂಡರ್‌ಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕಮರ್ಶಿಯಲ್‌ ಸಿಲಿಂಡರ್‌ಗಳಲ್ಲಿ ಮಾತ್ರ ಸ್ವಲ್ಪ ವ್ಯತ್ಯಯವಾಗಿದೆ. ಹಾಗಾಗಿ ಯಾರೂ ಕೂಡ ಆತಂಕಕ್ಕೆ ಒಳಗಾಗುವುದು ಅಥವಾ ಗಾಳಿಮಾತು ನಂಬಿ ಸಿಲಿಂಡರ್‌ಗಾಗಿ ಪರದಾಡುವುದು ಬೇಡ.

-ಮಹಮ್ಮದಲಿ,

ಏಜನ್ಸಿ ಮ್ಯಾನೇಜರ್‌.