ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ತಾಲೂಕಿನ ಹಳದೂರ ಗ್ರಾಮದ ಅಭಿವೃದ್ಧಿಗೆ ಅಲ್ಲಿನ ಗ್ರಾಪಂ ಪಿಡಿಒ ಗ್ರಾಮಸ್ಥರೊಂದಿಗೆ ಸ್ಪಂದಿಸುತ್ತಿಲ್ಲ. ಸರ್ವಾಧಿಕಾರಿ ಧೋರಣೆ ವ್ಯಕ್ತ ಪಡಿಸುತ್ತಿದ್ದಾರೆ. ಇದೇ ಧೋರಣೆ ಮುಂದುವರಿಸಿದರೆ ಗ್ರಾಮದ ಜನರೊಂದಿಗೆ ಪಂಚಾಯಿತಿ ಎದುರುಗಡೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹಳದೂರ ಗ್ರಾಮದ ಮುಖಂಡರು ಎಚ್ಚರಿಸಿದ್ದಾರೆ.

ಗುರುವಾರ ಸುದ್ದಿಗೊಷ್ಠಿಯಲ್ಲಿ ಹಳದೂರ ಗ್ರಾಪಂ ಮಾಜಿ ಸದಸ್ಯ ಶಿವು ಚೊಳಚಗುಡ್ಡ ಮಾತನಾಡಿ, ನಮ್ಮ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಅವುಗಳಿಗೆ ಅಲ್ಲಿನ ಪಿಡಿಒ ಸ್ಪಂದಿಸುತ್ತಿಲ್ಲ. ಗ್ರಾಮಸ್ಥರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಇಲ್ಲಿನ ಕೂಲಿಕಾರರಿಗೆ ಎನ್.ಎಂ.ಆರ್. ಯೋಜನೆಯಡಿ ಕೆಲಸ ನೀಡುತ್ತಿಲ್ಲ. ಗ್ರಾಮದಲ್ಲಿ ತೆರೆದ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದರೂ ಅವುಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಬಸವ ವಸತಿ ಯೋಜನೆಯಡಿ ಮನೆ ಕಟ್ಟಿಸಿಕೊಂಡವರಿಗೆ ಕೊನೆ ಬಿಲ್ ಕೊಡದೇ ಫಲಾನುಭವಿಗಳಿಗೆ ಅಲೆದಾಡಿಸುತ್ತಿದ್ದಾರೆ. ಗ್ರಾಮದ ಕಸ ವಿಲೇವಾರಿ ಘಟಕ ಅಪೂರ್ಣವಾಗಿದ್ದರೂ ಅದನ್ನು ಉದ್ಘಾಟಿಸಿದ್ದಾರೆ ಎಂದು ಆರೋಪಿಸಿದರು.

ಹುಲಗಪ್ಪ ಚಲವಾದಿ ಮಾತನಾಡಿ, ಪಿಡಿಒ ಅವರು ಗ್ರಾಪಂ ವ್ಯಾಪ್ತಿಯ ಇಂಜನವಾರಿ ಗ್ರಾಮದಲ್ಲಿ ಹಾಕಿಕೊಂಡ ತೆರೆದ ಚರಂಡಿ ಕಾಮಗಾರಿ ಇನ್ನೂ ಪೂರ್ಣ ಮಾಡುತ್ತಿಲ್ಲ. ಗ್ರಾಪಂದಲ್ಲಿನ ಡಿಜಿಟಲ್ ಗ್ರಂಥಾಲಯದ ಇಂಟರ್ನೆಟ್ ಸಂಪರ್ಕ ಕೊಡಿಸುತ್ತಿಲ್ಲ. ಪಂಚಾಯಿತಿಯಲ್ಲಿ ಸಿಬ್ಬಂದಿ ವಿವರದ ಬೋರ್ಡ ಹಾಕಿಲ್ಲ. ಗ್ರಾಮದಲ್ಲಿ ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಬಿಡುತ್ತಿಲ್ಲ. ಕುಡಿಯುವ ನೀರಿಗಾಗಿ ಬೋರವೇಲ್ ಕೊರೆಸಿದ್ದಾರೆ. ಆದರೆ, ಅವುಗಳಿಗೆ ಮೋಟರ್ ಅಳವಡಿಸುತ್ತಿಲ್ಲ ಎಂದು ಆರೋಪಿಸಿದರು.

ರಾಮಣ್ಣ ಚಲವಾದಿ ಮಾತನಾಡಿ, ಕಳೆದ 2 ವರ್ಷಗಳಿಂದ ಹಳದೂರ ಗ್ರಾಮದ ನಂ.1 ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿ ಇಲ್ಲ. ಹೀಗಾಗಿ ಮಕ್ಕಳು ಶಿಕ್ಷಣ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ತಾಲೂಕು ಶಿಶು ಅಭಿವೃದ್ಧಿ ಇಲಾಖೆಯ ಸಿಡಿಪಿಒ ಅವರ ಗಮನಕ್ಕೆ ತಂದರೂ ಅವರೂ ಸ್ಪಂದಿಸುತ್ತಿಲ್ಲ, ಗ್ರಾಪಂದಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಗುತ್ತಿಗೆ ನೌಕರರನ್ನೂ ತೆಗೆದುಕೊಳ್ಳುತ್ತಿಲ್ಲ, ಜೆಜಿಎಂ ಯೋಜನೆಯಡಿ ಗ್ರಾಮದಲ್ಲಿ ಮನೆ ಮನೆಗಳಿಗೆ ಕುಡಿಯುವ ನೀರಿನ ನಲ್ಲಿಗಳನ್ನು ಅಳವಡಿಸಿದ್ದಾರೆ. ಆದರೆ, ವರ್ಷಗಳೇ ಕಳೆದರೂ ನಲ್ಲಿಗಳಿಗೆ ನೀರು ಬರುತ್ತಿಲ್ಲ ಎಂದು ಆರೋಪಿಸಿದರು.


ಸುಮಾರು ಸಲ ಶಾಸಕರನ್ನು ದೂರವಾಣಿ ಮೂಲಕ ಗ್ರಾಮದ ಈ ಎಲ್ಲ ಸಮಸ್ಯೆಗಳ ಬಗ್ಗೆ ತಿಳಿಸಲು ಸಂಪರ್ಕಕ್ಕೆ ಪ್ರಯತ್ನಿಸಿದಾಗಲೂ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ವಾರದಲ್ಲಿ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಪಿಡಿಒ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧ ಮತ್ತು ಗ್ರಾಮದ ಸಮಸ್ಯೆಗಳ ನಿವಾರಣೆಗೆ ಗ್ರಾಪಂ ಕಚೇರಿ ಎದುರುಗಡೆ ಗ್ರಾಮದ ಜನರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಪಂ ಮಾಜಿ ಸದಸ್ಯ ಶಿವು ಚೊಳಚಗುಡ್ಡ, ಹುಲಗಪ್ಪ ಚಲವಾದಿ, ರಾಮಣ್ಣ ಚಲವಾದಿ, ಲಕ್ಕಪ್ಪ ಮಾದರ ಹಾಗೂ ಮೌಲಾಸಾಬ ಸಾಧನಿ ಎಚ್ಚರಿಸಿದ್ದಾರೆ.