ಕಳ್ಳರ ಹಾವಳಿಗೆ ಕಂಗಾಲಾದ ಜನತೆ

| Published : Feb 18 2025, 12:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ದರೋಡೆಕೋರರ ಅಟ್ಟಹಾಸಕ್ಕೆ ಓರ್ವ ಬಲಿಯಾಗಿದ್ದರೂ ಗಡಿ ಜಿಲ್ಲೆ ವಿಜಯಪುರದಲ್ಲಿ ಕಳ್ಳರು ಹಾಗೂ ದರೋಡೆಕೋರರ ಹಾವಳಿ ನಿಲ್ಲುತ್ತಿಲ್ಲ. ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ ನಾವು ರಂಗೋಲಿ ಕೆಳಗೆ ನುಗ್ಗುತ್ತೇವೆ ಎನ್ನುತ್ತಿದ್ದಾರೆ ದರೋಡೆಕೋರರು. ಖಾಕಿಗಳಿಗೆ ನಿರಂತರವಾಗಿ ಚಳ್ಳೆಹಣ್ಣು ತಿನ್ನಿಸುತ್ತಿರುವ ಅಂತರಾಜ್ಯದ ಕಳ್ಳರು, ನಿತ್ಯ ಹಾವಳಿಯನ್ನು ಮುಂದುವರಿಸಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ದರೋಡೆಕೋರರ ಅಟ್ಟಹಾಸಕ್ಕೆ ಓರ್ವ ಬಲಿಯಾಗಿದ್ದರೂ ಗಡಿ ಜಿಲ್ಲೆ ವಿಜಯಪುರದಲ್ಲಿ ಕಳ್ಳರು ಹಾಗೂ ದರೋಡೆಕೋರರ ಹಾವಳಿ ನಿಲ್ಲುತ್ತಿಲ್ಲ. ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ ನಾವು ರಂಗೋಲಿ ಕೆಳಗೆ ನುಗ್ಗುತ್ತೇವೆ ಎನ್ನುತ್ತಿದ್ದಾರೆ ದರೋಡೆಕೋರರು. ಖಾಕಿಗಳಿಗೆ ನಿರಂತರವಾಗಿ ಚಳ್ಳೆಹಣ್ಣು ತಿನ್ನಿಸುತ್ತಿರುವ ಅಂತರಾಜ್ಯದ ಕಳ್ಳರು, ನಿತ್ಯ ಹಾವಳಿಯನ್ನು ಮುಂದುವರಿಸಿದ್ದಾರೆ.

ಕಳೆದ ಜ.15ರ ಮಧ್ಯರಾತ್ರಿ ಮಹಾರಾಷ್ಟ್ರದ ದರೋಡೆಕೋರರ ತಂಡವೊಂದು ನಗರದ ಜೈನಾಪುರ ಲೇಔಟ್‌ನ ನಿವಾಸಿ ಸಂತೋಷ ಕನ್ನಾಳರ ಮನೆಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿ ಅವರನ್ನು ಮಹಡಿಯಿಂದ ಕೆಳಕ್ಕೆ ನೂಕಿ ಪರಾರಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ 20 ದಿನಗಳ ಬಳಿಕ ಫೆ.4ರಂದು ಮೃತಪಟ್ಟರು. ಇಷ್ಟಾದರೂ ಪೊಲೀಸರು ಎಷ್ಟೇ ಅಲರ್ಟ್‌ ಆಗಿದ್ದರೂ ಕಳ್ಳರ ಹಾವಳಿ ಮಾತ್ರ ನಿಂತಿಲ್ಲ.

ಮತ್ತೆ ಶುರುವಾಗಿದೆ ಹಾವಳಿ:

ಕಳೆದ ತಿಂಗಳು ಓರ್ವನನ್ನು ಬಲಿ ಪಡೆದ ಕಳ್ಳರು, ದರೋಡೆಕೋರರ ಹಾವಳಿ ಮತ್ತೆ ಶುರುವಾಗಿದೆ. ಭಾನುವಾರ ತಡರಾತ್ರಿ ತಾಲೂಕಿನ ಮಹಲ್ ಐನಾಪುರ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಬೈಕ್ ಮೇಲೆ ಓಡಾಡುತ್ತಿರುವುದು ಕಂಡು ಬಂದಿದೆ. ಅಲ್ಲದೇ, ಸಂಶಯ ಬಂದು ಸ್ಥಳೀಯರು ವಿಚಾರಿಸುತ್ತಿದ್ದಂತೆ AP-21 BZ0880 ಸಂಖ್ಯೆಯ ಬೈಕ್ ಹಾಗೂ ಚಾಕು, ಚೂರಿ ಸೇರಿದಂತೆ ಇತರೆ ಮಾರಕಾಸ್ತ್ರಗಳನ್ನು ಬಿಟ್ಟು ಕಳ್ಳರು ಎಸ್ಕೇಪ್ ಆಗಿದ್ದಾರೆ. ಸ್ಥಳೀಯರಿಗೆ ತಪ್ಪು ಮಾಹಿತಿ ನೀಡಿದ ಬಳಿಕ ಕಳ್ಳರೆಂದು ಹಿಡಿಯಲು ಬೆನ್ನಟ್ಟಿದಾಗ ಅವರ ಕೈಗೆ ಸಿಗದೆ ಕಳ್ಳರು ಪರಾರಿಯಾಗಿದ್ದಾರೆ. ಆಂಧ್ರ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿರುವ ಮೂರರಿಂದ ನಾಲ್ಕು ಬೈಕ್‌ಗಳಲ್ಲಿ ಕಳ್ಳರು ಓಡಾಡುತ್ತಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಎತ್ತಿನ ಬಂಡಿ ಕದ್ದಿದ್ದರು

ತಾಲೂಕಿನ ರಂಭಾಪುರದಲ್ಲಿ ಫೆ.6ರಂದು ರಾತ್ರಿ ಊರಲ್ಲಿ ನುಗ್ಗಿದ ಇಬ್ಬರು ಕಳ್ಳರು ಈರನಗೌಡ ಪಾಟೀಲ ಎಂಬುವರಿಗೆ ಸೇರಿದ ಎರಡು ಎತ್ತುಗಳು ಹಾಗೂ ಎತ್ತಿನ ಬಂಡಿಯನ್ನು ಕದ್ದೊಯ್ಯುತ್ತಿದ್ದರು. ಈ ವೇಳೆ ಗ್ರಾಮದ ಕೆಲವರು ಪ್ರಶ್ನಿಸಿದಾಗ ಬಿಟ್ಟು ಓಡಿ ಹೋಗಿದ್ದಾರೆ. ಗ್ರಾಮಸ್ಥರೆಲ್ಲ ಸೇರಿ ಇಬ್ಬರೂ ಕಳ್ಳರನ್ನು ಹಿಡಿದು ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಮತ್ತು ಇನ್ನೊಂದು ಘಟನೆಯಲ್ಲಿ ನಗರದ ಆಲಕುಂಟೆ ನಗರದಲ್ಲಿ ಫೆಬ್ರುವರಿ 9ರಂದು ತಡರಾತ್ರಿ ಕಳ್ಳರು ಹೋಗುತ್ತಿದ್ದ ವೇಳೆ ಸ್ಥಳೀಯರು ಅವರನ್ನು ಹಿಡಿಯಲು ಯತ್ನಿಸಿದ್ದರು. ಆಗ ಚಪ್ಪಲಿಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು.

ಹೀಗೆ ನಿತ್ಯ ಒಂದಲ್ಲ ಒಂದುಕಡೆ ಕಳ್ಳತನ ಅಥವಾ ಕಳ್ಳತನ ಯತ್ನದ ಘಟನೆಗಳು ಜರುಗುತ್ತಲೇ ಇವೆ. ಕಳ್ಳರ ಕಾಟಕ್ಕೆ ಬೇಸತ್ತ ಜನತೆ ಕೆಲವುಕಡೆ ತಾವೇ ರಾತ್ರಿ ಗಸ್ತು ಮಾಡುತ್ತಿದ್ದಾರೆ. ಕಳ್ಳರ ಬಲೆಗೆ ಪೊಲೀಸರು ಸಾಕಷ್ಟು ಕ್ರಮ ಕೈಗೊಂಡಿದ್ದರೂ ಪ್ರಯೋಜನವಾಗುತ್ತಿಲ್ಲ. ರಾತ್ರಿ ವೇಳೆ ಇನ್ನಷ್ಟು ಬೀಟ್ ಹೆಚ್ಚಿಸಬೇಕು. ಹಾಗೂ ಸ್ವಯಂಪ್ರೇರಿತವಾಗಿ ಪೊಲೀಸರು ಇಂತಹವರ ಬಂಧನಕ್ಕೆ ಜಾಲ ಬೀಸಬೇಕು ಎಂದು ನಗರದ ಜನತೆ ಆಗ್ರಹಿಸಿದ್ದಾರೆ.----------

*ಕೋಟ್

ದರೋಡೆಕೋರರು ಅಲ್ಲಲ್ಲಿ ಬಂದಿದ್ದಾರೆಂದು ನಾವೇ ರಾತ್ರಿ ಗಸ್ತು ನಡೆಸುತ್ತೇವೆ. ಇಷ್ಟರ ಮಧ್ಯೆ ನಿನ್ನೆ ಮಧ್ಯರಾತ್ರಿ ಐನಾಪೂರ ಗ್ರಾಮಕ್ಕೆ ಕಳ್ಳರ ಗ್ಯಾಂಗ್ ವೊಂದು ನುಗ್ಗಿತ್ತು. ಈ ವೇಳೆ ನಾವೆಲ್ಲರೂ ಕೂಡಿ ಖದೀಮರ ಬೆನ್ನು ಬಿದ್ದಾಗ ಎಲ್ಲರೂ ಯಾರ ಕೈಗೂ ಸಿಗದೇ ಪರಾರಿಯಾಗಿದ್ಧಾರೆ. ಬೈಕ್ ಪರಿಶೀಲನೆ ಮಾಡಿದಾಗ ಚಾಕೂ, ಚೂರಿ ಸೇರಿದಂತೆ ಇತರೆ ಮಾರಕಾಸ್ತ್ರಗಳು ಇರೋದು ಕಂಡು ಬಂದಿದೆ. ಪೊಲೀಸರು ಜನತೆಗೆ ರಕ್ಷಣೆ ಕೊಡಬೇಕು.

ಧರೆಪ್ಪ ಅರ್ಧಾವೂರ, ಐನಾಪೂರ ನಿವಾಸಿ.

ಕೋಟ್:

ಈಗಾಗಲೇ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಬಂದಿದ್ದ ಕಳ್ಳರ ಹೆಡೆಮುರಿ ಕಟ್ಟಲಾಗಿದೆ. ಆದರೂ ಸಹ ಕೆಲ ಸ್ಥಳೀಯ ಕಳ್ಳರು ಹಾಗೂ ಬೇರೆ ರಾಜ್ಯದವರು ಅಲ್ಲಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿರುವುದು ಕಂಡುಬಂದಿದೆ. ರಾತ್ರಿ ವೇಳೆಯಲ್ಲಿ ಪೊಲೀಸರು ನಿರಂತರ ಗಸ್ತು ತಿರುಗುವಂತೆ ವ್ಯವಸ್ಥೆ ಮಾಡಲಾಗಿದೆ. ನಾಕಾಬಂದಿ ಹಾಕಲಾಗಿದೆ. ಆದರೂ ಜನರು ತಮ್ಮ ಸೂಕ್ತ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ