ಸಾರಾಂಶ
ಶಿವಮೂರ್ತಿ ಇಟಗಿ
ಯಲಬುರ್ಗಾ:ಮಹಾ ಶಿವರಾತ್ರಿಯಿಂದಲೇ ಪ್ರಾರಂಭಗೊಂಡಿರುವ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಜನರನ್ನು ಹೈರಾಣಾಗಿಸಿದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ತಂಪುಪಾನೀಯಗಳತ್ತ ಮುಖ ಮಾಡಿದ್ದಾರೆ. ಜತೆಗೆ ಪಟ್ಟಣದಲ್ಲಿ ಸಂಘ-ಸಂಸ್ಥೆಗಳು ಅಲ್ಲಲ್ಲಿ ಅರವಟ್ಟಿಗೆ ಸ್ಥಾಪಿಸಿ ಜನರ ದಾಹ ತೀರಿಸುತ್ತಿವೆ.
ಮಡಿಕೆಗೂ ಡಿಮ್ಯಾಂಡ್:ಬಿಸಿಲಿನ ಝಳದಿಂದ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟ ನೀರು ಬಿಸಿಯಾಗುತ್ತಿದೆ. ಇದರಿಂದ ಜನರು ಬಡವರ ಫ್ರಿಜ್ ಎಂದೇ ಕರೆಸಿಕೊಳ್ಳುವ ಮಡಿಕೆಗಳತ್ತ ಮುಖ ಮಾಡಿದ್ದಾರೆ. ಪಟ್ಟಣದಲ್ಲಿ ಹುಡುಕಿಕೊಂಡು ಹೋಗಿ ಮಣ್ಣಿನ ಮಡಿಕೆ ತಂದು ಅದರಲ್ಲಿ ನೀರು ಸಂಗ್ರಹಿಸಿ ಕುಡಿಯುತ್ತಿದ್ದಾರೆ. ಇದರಿಂದ ಕುಂಬಾರರಿಗೂ ಭರ್ಜರಿ ವ್ಯಾಪಾರವಾಗುತ್ತಿದೆ. ಸಣ್ಣ ಮಡಿಕೆ ₹ 150ರಿಂದ ₹ 200, ದೊಡ್ಡ ಮಡಿಕೆಗೆ ₹ 200ರಿಂದ ₹ 300 ವರೆಗೂ ಮಾರಾಟವಾಗುತ್ತಿವೆ. ಮಾರುಕಟ್ಟೆಯಲ್ಲಿ ದರ ಹೆಚ್ಚಳವಿದ್ದರೂ ಸಹ ಜನರು ದೇಹವನ್ನು ತಂಪಾಗಿಸಿಕೊಳ್ಳಲು ಖರೀದಿಗೆ ಮುಗಿಬಿದ್ದಿದ್ದಾರೆ.
ಅರವಟ್ಟಿಗೆ ಸ್ಥಾಪನೆ:ಬೇಸಿಗೆಯಿಂದ ಅಂತರ್ಜಲವೂ ಕುಸಿತವಾಗಿದ್ದು ನೀರಿನ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಹೋಟೆಲ್‌ಗೆ ನೀರು ಕುಡಿಯಲು ಹೋದರೆ ನೀಡುತ್ತಿಲ್ಲ. ಏನಾದರೂ ತಿನ್ನಲು ತೆಗೆದುಕೊಂಡರೆ ನೀರು ಎಂದು ನೇರವಾಗಿಯೇ ಹೇಳುತ್ತಿದ್ದಾರೆ. ಹೀಗಾಗಿ ರಸ್ತೆಯಲ್ಲಿ ಸಂಚರಿಸುವ ಜನರ ದಾಹ ತೀರಿಸುವಲ್ಲಿ ಕೆಲ ಸಂಘ-ಸಂಸ್ಥೆಗಳು ಮುಂದಾಗಿವೆ. ಯಲಬುರ್ಗಾದ ಜೆಸ್ಕಾಂ ನೌಕರರು ಹಾಗೂ ವಿದ್ಯುತ್ ಗುತ್ತಿಗೆದಾರರ ಸಂಘದ ಆಶ್ರಯದಲ್ಲಿ ಜೆಸ್ಕಾಂ ಕಚೇರಿ ಆವರಣದಲ್ಲಿ ಅರವಟ್ಟಿಗೆ ಸ್ಥಾಪಿಸಲಾಗಿದೆ. ಕಚೇರಿಗೆ ಆಗಮಿಸುವ ಹಾಗೂ ದಾರಿಹೋಕರಿಗೆ ಅನುಕೂಲವಾಗಿದೆ.
ಕೃಷಿ ಚಟುವಟಿಕೆಗೆ ಹಿನ್ನಡೆ:ಬೆಳಗ್ಗೆ 9 ಗಂಟೆ ಆಗುತ್ತಿದ್ದಂತೆ ಬಿಸಿಲಿನ ಪ್ರಖರತೆ ಹೆಚ್ಚಳವಾಗಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕೃಷಿ ಕಾರ್ಮಿಕರು ಸಹ ಕೆಲಸಕ್ಕೆ ಸಿಗುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದ್ದು ರೈತರೇ ಬೆಳಗಿನ ಜಾವ ಬೇಗ ಎದ್ದು ಹೊಲಕ್ಕೆ ತೆರಳಿ ಹತ್ತು ಗಂಟೆ ಒಳಗೆ ಮನೆಗೆ ಹಿಂದಿರುಗುತ್ತಿದ್ದಾರೆ.
ತಂಪುಪಾನೀಯ ಮೊರೆ:ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ಕಬ್ಬಿನ ಹಾಲು, ಕಲ್ಲಂಗಡಿ, ಜ್ಯೂಸ್, ಲಿಂಬೆಹಣ್ಣಿನ ಶರಬತ್ತು ಸೇರಿದಂತೆ ವಿವಿಧ ತಂಪುಪಾನೀಯಗಳ ಮೊರೆ ಹೋಗಿದ್ದಾರೆ. ಇದರಿಂದ ಹಣ್ಣಿನ ವ್ಯಾಪಾರವು ಭರ್ಜರಿಯಾಗಿ ನಡೆಯುತ್ತಿದೆ.
ಬಿಸಿಲ ಝಳದಿಂದ ಮನೆಯಿಂದ ಆಚೆ ಹೋಗಲು ಆಗುತ್ತಿಲ್ಲ. ಮನೆಯಲ್ಲಿದ್ದರೂ ಸೆಕೆ ತಾಳಲು ಆಗುತ್ತಿಲ್ಲ. ಪ್ಯಾನ್ ಹಚ್ಚಿಕೊಳ್ಳಲು ಪದೇ ಪದೇ ವಿದ್ಯುತ್ ಕೈಕೊಡುತ್ತಿದೆ. ತಂಪುಪಾನೀಯಗಳ ಮೊರೆ ಹೋದರೂ ಸೆಖೆಯಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಾರ್ವಜನಿಕರು ಹೇಳಿದ್ದಾರೆ.ಬಿಸಿಲಿನ ಪ್ರಖರತೆ ಹೆಚ್ಚಳವಾಗಿದ್ದು ಕಾರ್ಮಿಕರು ಸಿಗದೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಕಾರ್ಮಿಕರು ಬಂದರೂ ಹತ್ತು ಗಂಟೆ ಒಳಗಾಗಿಯೇ ಅವರನ್ನು ಮನೆಗೆ ಬಿಡಬೇಕು. ಇದರಿಂದ ರೈತರಿಗೆ ಆರ್ಥಿಕ ಹೊರೆಯೊಂದಿಗೆ ಕೆಲಸವೂ ವಿಳಂಬವಾಗುತ್ತಿದೆ ಎಂದು ಪ್ರಗತಿಪರ ರೈತ ವೀರನಗೌಡ ಬನ್ನಪ್ಪಗೌಡ್ರ ಹೇಳಿದರು.