ಪಂಚ ಗ್ಯಾರಂಟಿ ಯೋಜನೆಗಳಿಂದ ಜನತೆಗೆ ಅನುಕೂಲ: ಶಾಸಕ ಎಚ್.ವೈ. ಮೇಟಿ

| Published : Mar 11 2024, 01:15 AM IST

ಸಾರಾಂಶ

ಕಮತಗಿ ಪಟ್ಟಣದಲ್ಲಿನ ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟಪದಲ್ಲಿ ನಗರಾಭಿವೃದ್ಧಿ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಬಾಗಲಕೋಟೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ನಿರ್ಮಾಣದ ಕಾಮಗಾರಿಯ ಆದೇಶ ಪತ್ರವನ್ನು ಶಾಸಕ ಎಚ್.ವೈ. ಮೇಟಿ ವಿತರಿಸಿದರು.

ಕನ್ನಡಪ್ರಭ ವಾರ್ತೆ ಕಮತಗಿ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು, ಯುವಕರು ಸೇರಿದಂತೆ ನಾಡಿನ ಜನತೆಗೆ ಸಾಕಷ್ಟು ಅನಕೂಲವಾಗಿವೆ ಎಂದು ಶಾಸಕ ಎಚ್.ವೈ. ಮೇಟಿ ಹೇಳಿದರು.

ಪಟ್ಟಣದಲ್ಲಿನ ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟಪದಲ್ಲಿ ನಗರಾಭಿವೃದ್ಧಿ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಬಾಗಲಕೋಟೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ನಿರ್ಮಾಣದ ಕಾಮಗಾರಿಯ ಆದೇಶ ಪತ್ರ ವಿತರಿಸಿ ಮಾತನಾಡಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ವತಿಯಿಂದ ವಾಜಪೇಯಿ ವಸತಿ ಯೋಜನೆಯ ಅಡಿಯಲ್ಲಿ ಪಟ್ಟಣದಲ್ಲಿ ಒಟ್ಟು 145 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಮನೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹ 1.20 ಲಕ್ಷ ಹಾಗೂ ಕೇಂದ್ರ ಸರ್ಕಾರ ₹ 1.50 ಲಕ್ಷ ಸೇರಿ ಒಟ್ಟು ₹ 2.70 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು ಬಹಳಷ್ಟು ಅನಕೂಲವಾಗಿದ್ದು, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸಕಾರದ ಪಂಚ ಗ್ಯಾರಂಟಿಗಳಿಂದ ಮಹಿಳೆಯರಿಗೆ,ಯುವಕರಿಗೆ ಬಹಳಷ್ಟು ಅನಕೂಲವಾಗಿದೆ, ಈ ಯೋಜನೆಗಳ ಋಣ ತೀರಿಸಬೇಕಾದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಪಟ್ಟಣದಲ್ಲಿನ ಬಸ್‌ ನಿಲ್ದಾಣದಿಂದ ಕ್ರಾಸ್‌ವರೆಗಿನ ದ್ವೀಪಥ ರಸ್ತೆ ಸುಧಾರಣೆಗೆ ₹ 1.40ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ಹಂತಹಂತವಾಗಿ ಇತರ ಕಾಮಗಾರಿ ಮಾಡಲಾಗುವುದು ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಗ್ಯಾರಂಟಿ ಯೋಜನೆಗಳಿಂದ ಬಡ ಜನರು, ಮಹಿಳೆಯರು, ಯುವಕರಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು.

ಹುನಗುಂದ ತಹಸೀಲ್ದಾರ ನಿಂಗಪ್ಪ ಬಿರಾದಾರ, ಕಾಂಗ್ರೆಸ್ ಮುಖಂಡರಾದ ಎಸ್.ಎಸ್. ಮಂಕಣಿ, ಹುಚ್ಚಪ್ಪ ಸಿಂಹಾಸನ, ಪಪಂ ಸದಸ್ಯರಾದ ರಮೇಶ ಜಮಖಂಡಿ, ಬಸವರಾಜ ಕುಂಬಳಾವತಿ, ಗುರುಲಿಂಗಪ್ಪ ಪಾಟೀಲ, ದೇವಿಪ್ರಸಾದ ನಿಂಬಲಗುಂದಿ, ಲಕ್ಷ್ಮಣ ಮಾದರ, ಚಂದು ಕುರಿ, ಹುಚ್ಚವ್ವ ಹಗೇದಾಳ, ನಂದಾ ದ್ಯಾಮಣ್ಣವರ, ನೇತ್ರಾವತಿ ನಿಂಬಲಗುಂದಿ, ಮಂಜುಳಾ ಮುರಾಳ, ಮುಖಂಡರಾದ ರಮೇಶ ಲಮಾಣಿ, ಎನ್.ಎಲ್. ತಹಸೀಲ್ದಾರ, ಗಂಗಪ್ಪ ಭೂತಲ, ಪರಸಪ್ಪ ಜಗ್ಗಲ, ಲಕ್ಷ್ಮಣ ದ್ಯಾಮಣ್ಣವರ, ಪಪಂ ಮುಖ್ಯಾಧಿಕಾರಿ ಎಫ್.ಎನ್. ಹುಲ್ಲಿಕೇರಿ ಹಾಗೂ ಸಿಬ್ಬಂದಿ, ಫಲಾನುಭವಿಗಳು ಇದ್ದರು.