ಸಾರಾಂಶ
ನಿಂತುಕೊಂಡೇ ಕಾರ್ಯಕ್ರಮ ವೀಕ್ಷಿಸಿದ ನೂರಾರು ಮಂದಿ । ‘ನಮ್ಮೂರ ಕನ್ನಡ ಹಬ್ಬ’ದಲ್ಲಿ ಸಂಗೀತ ರಸದೌತಣ । ಶಾಸಕ ದಂಪತಿಯಿಂದ ರ್‍ಯಾಣಪ್ ವಾಕ್
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಸರ್ಕಾರಿ ಎಂ.ಜಿ.ಎಸ್.ವಿ ಕಾಲೇಜು ಮೈದಾನದಲ್ಲಿ ಎಚ್. ಕೃಷ್ಣಸ್ವಾಮಿ ಮೆಮೋರಿಯಲ್ ಟ್ರಸ್ಟ್ ಹಾಗೂ ರೋಟರಿ ಮಿಡ್ ಟೌನ್ ವತಿಯಿಂದ ಕೊಳ್ಳೇಗಾಲದಲ್ಲಿ ಹಮ್ಮಿಕೊಂಡಿದ್ದ ‘ನಮ್ಮೂರ ಕನ್ನಡ ಹಬ್ಬ’ ಅರ್ಜುನ್ ಜನ್ಯ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೇಕ್ಷಕರು ಅರ್ಜುನ್ ಜನ್ಯ ಮತ್ತು ಸಂಗಡಿಗರ ಸಂಗೀತಕ್ಕೆ ತಲೆದೂಗಿದರು.
ಎಚ್.ಕೆ. ಟ್ರಸ್ಟ್, ರೋಟರಿ ಮಿಡ್ ಟೌನ್ ಅಯೋಜಿಸಿದ್ದ ಕನ್ನಡ ಹಬ್ಬ ಕಾರ್ಯಕ್ರಮದ ಅಂಗವಾಗಿ ಶನಿವಾರ ರಾತ್ರಿ ಅರ್ಜುನ್ ಜನ್ಯ ಮತ್ತು ಸಂಗಡಿಗರಿಂದ ಸಂಗೀತ ಸಂಜೆ, ಮ್ಯೂಜಿಕಲ್ ರಸಮಂಜರಿ ಅಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೊನೆ ತನಕ ಹಾಜರಿದ್ದ ಪ್ರೇಕ್ಷಕರು, ಕನ್ನಡ ಸಿನಿ ರಸಿಕರು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಅನುರಾಧ ಭಟ್, ಇಂದು ನಾಗರಾಜು, ಜಸ್ಕರನ್ ಸಿಂಗ್, ಸುನೀಲ್ ಗುಜಗೊಂಡ, ವ್ಯಾಸರಾಜ್ ಸೇರಿದಂತೆ ಇನ್ನಿತರ ಗಾಯಕರ ಗಾನಸುಧೆಗೆ ಕುಣಿದು ಕುಪ್ಪಳಿಸಿ ರಂಜಿಸಿದರು, ಕಾರ್ಯಕ್ರಮಕ್ಕೆ ಆಗಮಿಸಲು ಪ್ರೇಕ್ಷಕರಿಗೆ ಆಯೋಜಕರು ಪಾಸ್‌ಗಳ ವ್ಯವಸ್ಥೆ ಕಲ್ಪಿಸಿದ್ಜರೂ ಸಹ ನಿರೀಕ್ಷೆಗೂ ಮೀರಿ ಪ್ರೇಕ್ಷಕರು ಆಗಮಿಸಿದ್ದರಿಂದ ಪಾಸ್‌ಗಳಿದ್ದರೂ ಸೀಟ್ ಸಿಗದೆ ನೂರಾರು ಮಂದಿ ನಿಂತುಕೊಂಡೇ ಕಾರ್ಯಕ್ರಮ ವೀಕ್ಷಿಸಿದರು. ಜನರ ನಿಯಂತ್ರಣವೇ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.ಒಟ್ಟಾರೆ ಸಂಗೀತ ರಸ ಸಂಜೆಯಲ್ಲಿ ಪಾಲ್ಗೊಂಡಿದ್ದ ಪ್ರೇಕ್ಷಕರು ಹಲವು ಗಂಟೆಗಳ ಕಾದು ಕುಳಿತು ಸಂಭ್ರಮಿಸಿದರು. ಈ ವೇಳೆ ಪೊಲೀಸ್ ಇಲಾಖೆಯ ಮಹೇಶ್ ಸೇರಿದಂತೆ ಅನೇಕರನ್ನು ಕಾರ್ಯಕ್ರಮದಲ್ಲಿ ಗೌರವಿಸುವ ಮೂಲಕ ಪೊಲೀಸರನ್ನು ಸನ್ಮಾನಿಸಲಾಯಿತು.
ಸಾಲೂರು ಮಠದ ಪೂಜ್ಯ ಡಾ.ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಎಚ್.ಕೆ. ಟ್ರಸ್ಟ್‌ನ ಅಧ್ಯಕ್ಷೆ ಪ್ರೇಮಲತಾ ಕೃಷ್ಣಸ್ವಾಮಿ, ಡಿವೈಎಸ್ಪಿ ಎಚ್‌ಕೆ. ಮಹಾನಂದ್‚ ರೋಟರಿ ಮಿಡ್ ಟೌನ್ ಅಧ್ಯಕ್ಷ ಎಸ್.ಲೋಕೇಶ್, ಕಾರ್ಯದರ್ಶಿ ಎಂ.ಪ್ರಕಾಶ್, ಶಿವಾನಂದ್‚ ಪ್ರವೀಣ್ ಕುಮಾರ್‚ ನಟರಾಜ್‚ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ‚ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್‚ ಉಪಾಧ್ಯಕ್ಷ ಎ.ಪಿ. ಶಂಕರ್‚ ಮಾಜಿ ಉಪಾಧ್ಯಕ್ಷ ಜೆ.ಹರ್ಷ ಪಾಲ್ಗೊಂಡಿದ್ದರು.ಹಲೋ ಕೊಳ್ಳೇಗಾಲ ಎಂದ ಅರ್ಜುನ್ ಜನ್ಯ, ಶಾಸಕ ದಂಪತಿ ರ್‍ಯಾಂಪ್ ವಾಕ್:
ಕೊಳ್ಳೇಗಾಲ: ಹಲೋ ಕೊಳ್ಳೇಗಾಲ ಎಂದು ಕೈಬೀಸಿ ಅರ್ಜುನ್ ಜನ್ಯ ಅವರು ಹೇಳುತ್ತಿದ್ದಂತೆ ಹಾಜರಿದ್ದ ಅಸಂಖ್ಯಾತ ಪ್ರೇಕ್ಷಕರು ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಪತ್ನಿ ಮಂಜುಳಾ ಕೖಷ್ಣಮೂರ್ತಿ ದಂಪತಿ ವೇದಿಕೆಯಲ್ಲಿ ರ್‍ಯಾಂಪ್ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಸಂಭ್ರಮಿಸಿದರು.ಶಾಸಕರು ತಮ್ಮ ಪತ್ನಿ ಜತೆ ಕೈಹಿಡಿದು ನಡೆಯುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ಶಾಸಕರನ್ನು ಹುರಿದುಂಬಿಸಿದ ಘಟನೆಗೆ ವೇದಿಕೆ ಸಾಕ್ಷಿಯಾಯಿತು. ಇದೇ ವೇಳೆ ನಿರೂಪಕಿ ಅನುಶ್ರೀ ಸಹ ಶಾಸಕರು ಮದುವೆಯಾಗಿ 33 ವರುಷಗಳಾದರೂ ಸಹ ನವ ದಂಪತಿಯಂತೆ ಅನ್ಯೋನ್ಯತೆಯ ಜೀವನ ನಡೆಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಕೃಷ್ಣಮೂರ್ತಿ, ಇದೊಂದು ಅರ್ಥಪೂರ್ಣ ಕನ್ನಡದ ಕಾರ್ಯಕ್ರಮ ಎಂದರಲ್ಲದೆ ರಾಜ್ಯೋತ್ಸವ ಆಚರಣೆ ಹಿನ್ನೆಲೆ ಸಂಗೀತ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ತಂಡದ ಹಾಡಿಗೆ ಕೊಳ್ಳೇಗಾಲ ಜನ ಕುಣಿದು, ಕುಪ್ಪಳಿಸಿ ಆನಂದಿಸಿದ್ದಾರೆ. ಎಚ್.ಕೆ. ಮಹಾನಂದ್, ಪ್ರವೀಣ್ , ಹರ್ಷ ಸ್ನೇಹಿತರಿಗೆ ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.ಆರಕ್ಷಕರು, ಸೈನಿಕರು ಹಾಗೂ ರೈತರಿಂದ ದೇಶ ಶಾಂತಿಯುತವಾಗಿದೆ, ಸಮೃದ್ಧಿ ಹಾಗೂ ಸುರಕ್ಷಿತವಾಗಿರಲಿದೆ. ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಆರಕ್ಷಕರಿಗೆ ನಮನ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಹೆಮ್ಮೆಯ ಸಂಗತಿ.
ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಾಲೂರು ಬೃಹನ್ಮಠಾಧ್ಯಕ್ಷ. ಮ.ಬೆಟ್ಟ