- ಹೆಗ್ಗೋಠಾರ ಗ್ರಾಮದ ಜನರ ವಿಶಿಷ್ಠ ರೀತಿಯ ಶಿವರಾತ್ರಿ ಆಚರಣೆ । 35 ಕಿ.ಮೀ. ಪಾದಯಾತ್ರೆ ನಡೆಸಿ ಅಭಿಷೇಕ ಮಾಡುವ ಗ್ರಾಮಸ್ಥರು
---ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶಿವರಾತ್ರಿಯನ್ನು ಎಲ್ಲೆಡೆ ಶಿವನಿಗೆ ನಾನಾ ರೀತಿಯ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಹಲವೆಡೆ ವಿಶಿಷ್ಟ ರೀತಿಯಲ್ಲಿ ಶಿವರಾತ್ರಿ ಆಚರಿಸಲಾಗುತ್ತದೆ.ಅದೇ ರೀತಿ 35 ಕಿ.ಮೀ. ದೂರದಿಂದ ಬರಿಗಾಲಿನಲ್ಲಿ ಕಪಿಲಾ ನದಿ ಜಲವನ್ನು ಹೊತ್ತು ತಂದು ಶಿವನಿಗೆ ಅಭಿಷೇಕ ಮಾಡಿ ವಿಭಿನ್ನ ರೀತಿಯಲ್ಲಿ ಶಿವರಾತ್ರಿ ಆಚರಿಸುವ ಪದ್ಧತಿಯು ಚಾಮರಾಜನಗರದ ಹೆಗ್ಗೋಠಾರ ಗ್ರಾಮದಲ್ಲಿ ತಲ-ತಲಾಂತರಗಳಿಂದ ನಡೆದಕೊಂಡು ಬಂದಿದೆ. ಹೀಗೆ ಪ್ರತಿ ವರ್ಷ ಮಾಡಿದರೆ ಗ್ರಾಮಕ್ಕೆ ಶ್ರೇಯಸ್ಸು ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ.
ಹೀಗೆ ತಲೆ ಮೇಲೆ ಬಿಂದಿಗೆಗಳನ್ನು ದೂರದ ಕಪಿಲಾ ನದಿಯಿಂದ ಬರಿಗಾಲಲ್ಲಿ ಪವಿತ್ರ ಜಲ ತರುತ್ತಿದ್ದಾರೆ. ಹೀಗೆ ತಂದ ಜಲದಿಂದಲೇ ಶಿವಲಿಂಗಕ್ಕೆ ಅಭಿಷೇಕ ಮಾಡಿ ಗ್ರಾಮಸ್ಥರು ಮಹಾ ಶಿವರಾತ್ರಿ ಆಚರಿಸುತ್ತಾರೆ. ಹೆಗ್ಗೋಠಾರ ಗ್ರಾಮದ ಕೆಲವರು ಪ್ರತಿ ವರ್ಷ ಮಹಾ ಶಿವರಾತ್ರಿಯ ದಿನ ಸೂರ್ಯೋದಯದ ವೇಳೆಗೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಆಲಂಬಳ್ಳಿ ಬಳಿ ಹರಿಯುವ ಕಪಿಲಾ ನದಿಗೆ ತೆರಳುತ್ತಾರೆ. ಕಪಿಲೆಗೆ ಪೂಜೆ ಸಲ್ಲಿಸಿ ತಾವು ತಂದಿರುವ ಬಿಂದಿಗೆಗಳಲ್ಲಿ ಕಪಿಲಾ ನದಿಯ ನೀರನ್ನು ತುಂಬಿ ಬರಿಗಾಲಿನಲ್ಲಿ ಕಾಲ್ನಡಿಗೆ ಮೂಲಕ ಕಪಿಲಾ ಜಲ ಹೊತ್ತು ತರುತ್ತಾರೆ. ಹೀಗೆ ತರುವ ಕಪಿಲಾ ಜಲದಿಂದಲೇ ಗ್ರಾಮದ ಸಿದ್ದರಾಮೇಶ್ವರನಿಗೆ ಅಭಿಷೇಕ ಮಾಡುತ್ತಾರೆ. ಸಿದ್ದರಾಮೇಶ್ವರನಿಗೆ ಐದು ಬಾರಿ ಕಪಿಲಾ ಜಲದಿಂದ ಅಭಿಷೇಕ ಮಾಡುವ ಮೂಲಕ ಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.
ಸುಮಾರು 1,000ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಈ ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಸಿದ್ದರಾಮೇಶ್ವರ ದೇವಾಲಯದಲ್ಲಿ ಈ ರೀತಿಯ ವಿಶಿಷ್ಠ ರೀತಿಯ ಆಚರಣೆಯನ್ನು ಗ್ರಾಮಸ್ಥರು ರೂಢಿಸಿಕೊಂಡಿದ್ದಾರೆ.
ಕಪಿಲಾ ಜಲದಿಂದ ಸಿದ್ದರಾಮೇಶ್ವರನಿಗೆ ಅಭಿಷೇಕ ಮಾಡಿದ ನೀರನ್ನು ಗ್ರಾಮದ ಪ್ರತಿ ಮನೆಗೂ ಕೊಂಡೊಯ್ದು ಅಭಿಷೇಕದ ನೀರಿಗೆ ಪೂಜೆ ಸಲ್ಲಿಸಿ ಶಿವರಾತ್ರಿ ಆಚರಿಸುತ್ತಾರೆ. ನೂರಾರು ವರ್ಷಗಳಿಂದ ಹಿಂದಿನ ಪೀಳಿಗೆಯವರು ಅನುಸರಿಸಿಕೊಂಡು ಬಂದಿರುವ ಕ್ರಮವನ್ನೆ ಈಗಿನ ಪೀಳಿಗೆಯವರು ಮುಂದುವರಿಸಿಕೊಂಡು ಹೋಗುತ್ತಾ ಶಿವರಾತ್ರಿಯನ್ನು ನಿಷ್ಠೆಯಿಂದ ಆಚರಿಸಿಕೊಂಡು ಹೋಗುತ್ತಿದ್ದಾರೆ.---
15ಸಿಎಚ್ಎನ್18