ಸಾರಾಂಶ
ಶಾರದಾಂಬೆಗೆ ಮಂಗಳವಾರ ಮಹಾಭಿಷೇಕ, ತೆಪ್ಪೋತ್ಸವ
ಕನ್ನಡಪ್ರಭ ವಾರ್ತೆ, ಶೃಂಗೇರಿಶರನ್ನವರಾತ್ರಿ ಮಹೋತ್ಸವ ಮುಗಿದರೂ ಶೃಂಗೇರಿಗೆ ಜನಸಾಗರ ಹರಿದು ಬರುತ್ತಲೇ ಇದೆ. ವೀಕೆಂಡ್ ದಿನವಾದ ಭಾನುವಾರ ಶೃಂಗೇರಿ ಪಟ್ಟಣದಲ್ಲಿ ಜನಜಂಗುಳಿಯೇ ತುಂಬಿತ್ತು. ಕಳೆದೆರೆಡು ದಿನಗಳಿಂದ ಪಟ್ಟಣದೆಲ್ಲೆಡೆ ವಾಹನ ದಟ್ಟಣೆ, ಶೃಂಗೇರಿ ಪಟ್ಟಣ, ಭಾರತೀ ಬೀದಿ, ಬೈಪಾಸ್ ರಸ್ತೆ ಸೇರಿದಂತೆ ಎಲ್ಲೆಡೆ ವಾಹನ ದಟ್ಟಣೆ.
ಮಹಾರಥೋತ್ಸವ ಮುಗಿದು 2 ದಿನಗಳು ಕಳೆದರೂ ಶೃಂಗೇರಿ ಪೀಠದಲ್ಲಿ ಭಕ್ತಗಣ ಗಿಜಿಗಿಡುತ್ತಿದೆ. ಶ್ರೀಮಠದ ಆವರಣ, ಶಾರದಾಂಬಾ ದೇವಾಲಯ, ಬೋಜನಾ ಶಾಲೆ, ನರಸಿಂಹವನ ಎಲ್ಲೆಲ್ಲೂ ಭಕ್ತಗಣವೇ ತುಂಬಿತ್ತು. ಬಸ್ ಗಳಲ್ಲಿ ವಸತಿಗೃಹಗಳಲ್ಲಿ ಫುಲ್ ರಶ್. ಶಾಲೆಗಳಿಗೂ ರಜೆ ಇರುವುದರಿಂದ ಮಕ್ಕಳ ಸಂಖ್ಯೆಯೇ ಹೆಚ್ಚು ಕಂಡು ಬರುತ್ತಿದೆ.ಪಟ್ಟಣದ ಭಾರತೀ ಬೀದಿ ರಸ್ತೆಯ ಇಕ್ಕೆಲಗಳಲ್ಲಿ ನವರಾತ್ರಿಗೆ ಹಾಕಲಾದ ಸಾಲು ಸಾಲು ಅಂಗಡಿಗಳಲ್ಲಿ ಕಳೆದೆರೆಡು ದಿನಗಳಿಂದ ಜನವೋ ಜನ. ಭರ್ಜರಿ ವ್ಯಾಪಾರ. ಕಳೆದೆರೆಡು ದಿನಗಳಿಂದ ಮಳೆ ಇಲ್ಲದೇ ಬಿಸಿಲ ವಾತಾವರಣ ಉಂಟಾಗಿರು ವುದರಿಂದ ಜನ ಸಾಗರ ಹರಿದು ಬರುತ್ತಿರುವುದರಿಂದ ಅಂಗಡಿಗಳು ಕಳೆಕಟ್ಟಿವೆ. ನವರಾತ್ರಿ ಆರಂಭದಿಂದ ನಿರಂತರ ಮಳೆ ಸುರಿಯುತ್ತಿದ್ದರಿಂದ ಅಂಗಡಿ ವ್ಯಾಪಾರಿಗಳು ವ್ಯಾಪಾರವಿಲ್ಲದೇ ಕಂಗೆಟ್ಟಿದ್ದರು. ಈಗ ಮಳೆಯಿಲ್ಲದೇ, ಜನಜಂಗುಳಿ ಇರುವುದರಿಂದ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.
ಮಂಗಳವಾರ ಭೂಮಿ ಹುಣ್ಣಿಮೆಯಂದು ಶಾರದಾಂಬೆ ಮತ್ತೆ ಮಹಾಭಿಷೇಕ ನಡೆಯಲಿದೆ. ನವರಾತ್ರಿ ಅಂಗವಾಗಿ ಮಹಾಭಿ ಷೇಕದ ನಂತರ ಶಾರದೆಗೆ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿದೆ. ಸಂಜೆ ತುಂಗಾನದಿಯಲ್ಲಿ ಶಾರದಾ ತೆಪ್ಪೋತ್ಸವ ನಡೆಯಲಿದ್ದು ಇದರೊಂದಿಗೆ ನವರಾತ್ರಿ ಎಲ್ಲಾ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಳ್ಳುತ್ತದೆ.ಭೂಮಿ ಹುಣ್ಣಿಮೆಗೆ ಸಿದ್ಧತೆ-ಮಂಗಳವಾರ ಭೂಮಿ ಹುಣ್ಣಿಮೆ ದಿನವಾಗಿರುವುದರಿಂದ ತಾಲೂಕಿನೆಲ್ಲೆಡೆ ಭೂಮಿ ಹುಣ್ಣಿಮೆಗೆ ಸಕಲ ಸಿದ್ಧತೆ ಭರದಿಂದ ನಡೆಯುತ್ತಿದೆ. ಹೊಲ, ಗದ್ದೆ, ಜಮೀನುಗಳಿಗೆ ವಿಶೇಷ ಪೂಜೆ ಸಲ್ಲಿಸಬೇಕಾಗಿರುವುದರಿಂದ ಪೂಜೆಗೆ ಅಗತ್ಯ ವಸ್ತುಗಳ ಸಂಗ್ರಹ, ತಯಾರಿಸುವ ಕಾರ್ಯ ಆರಂಭಗೊಂಡಿದೆ.
5 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ಭಾರತಿ ಬೀದಿಯಲ್ಲಿ ಕಂಡುಬಂದ ಜನಜಂಗುಳಿ