ಭಟ್ಕಳದಲ್ಲಿ ಬಗೆಬಗೆಯ ಹಲಸಿನ ಖಾದ್ಯ ಸವಿದ ಜನರು

| Published : Jul 20 2025, 01:15 AM IST

ಭಟ್ಕಳದಲ್ಲಿ ಬಗೆಬಗೆಯ ಹಲಸಿನ ಖಾದ್ಯ ಸವಿದ ಜನರು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಹಲಸು ಮೇಳ ನಡೆಯುತ್ತಿರುವುದರಿಂದ ಇದು ಜನಾಕರ್ಷಣೆಗೊಳಗಾಗಿದೆ.

ಭಟ್ಕಳ: ಪಟ್ಟಣದ ಮಾರುತಿ ನಗರದ ರಾಘವೇಂದ್ರ ಮಠದ ಸಭಾಭವನದಲ್ಲಿ ಸ್ಪಂದನಾ ಚಾರಿಟೇಬಲ್ ಟ್ರಸ್ಟ್‌ ಮತ್ತು ರಂಜನ್‌ ಇಂಡೇನ್ ಎಜೆನ್ಸಿ ಸಹಯೋಗದಲ್ಲಿ ನಡೆಯುತ್ತಿರುವ ಹಲಸು ಮತ್ತು ಹಣ್ಣಿನ ಮೇಳಕ್ಕೆ ತಾಲೂಕಿನ ಮೂಲೆ ಮೂಲೆಗಳಿಂದಲೂ ಜನರು ಆಗಮಿಸುತ್ತಿದ್ದು, ಮೇಳ ಯಶಸ್ಸಿನತ್ತ ಸಾಗಿದೆ.

ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಹಲಸು ಮೇಳ ನಡೆಯುತ್ತಿರುವುದರಿಂದ ಇದು ಜನಾಕರ್ಷಣೆಗೊಳಗಾಗಿದೆ. ಮೇಳದಲ್ಲಿ ಕೆಂಪು ಹಲಸು, ಚಂದ್ರ ಹಲಸು ಸೇರಿದಂತೆ ಹಲಸಿನ ಖಾದ್ಯಗಳಾದ ಹೋಳಿಗೆ, ಹಲಸಿನ ಜಿಲೇಬಿ, ಸಾಟ್, ಕಡಬು, ಮುಳ್ಕ, ಕೇಸರಿ ಬಾತ್, ಪಾಯಸ ಹಪ್ಪಳ, ಚಿಪ್ಸ್, ಹಲಸಿನ ಉಪ್ಪಿನಕಾಯಿ, ಮಿಲ್ಕ್ ಶೇಕ್, ಐಸ್ ಕ್ರೀಂ, ಪತ್ರೊಡೆ, ಹಲಸಿನ ಕಬಾಬ್, ವಿವಿಧ ಬಗೆಯ ಮಾವಿನ ಹಣ್ಣುಗಳು, ಮಾವಿನ ಸಾಟ್, ಉಪ್ಪಿನಕಾಯಿ, ನರ್ಸರಿ ತರಕಾರಿ ಗಡ್ಡೆ, ಬೀಜಗಳು, ಆಯುರ್ವೇದ ಉತ್ಪನ್ನಗಳು, ಖಾದಿ ಬಟ್ಟೆಗಳು, ಸ್ವದೇಶಿ ಬಟ್ಟೆಗಳು, ವಿವಿಧ ಜಾತಿಯ ಹೂವಿನ ಗಿಡಗಳು, ಸಸ್ಯಗಳು, ಹಲಸಿನ ಗಿಡ, ಗೃಹ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ನಡೆಯಿತು.

ಮೇಳದಲ್ಲಿ ಕೆಂಪು ಹಲಸು ಮತ್ತು ಚಂದ್ರ ಬೊಕ್ಕೆ ಹಲಸಿನ ಹಣ್ಣು ಭಾರೀ ಗಮನ ಸೆಳೆಯಿತು. ಇದರ ಸೊಳೆ ತೆಗೆದು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡಿದ್ದರಿಂದ ಹೆಚ್ಚಿನವರು ಖರೀಧಿಸಿ ರುಚಿ ಸವಿದರು.

ಮೇಳದ ಎರಡನೇ ದಿನವಾದ ಶನಿವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ಜನರು ತಂಡೋಪ ತಂಡವಾಗಿ ಬಂದಿದ್ದಾರೆ. ಸಂಜೆ ಮೇಳದ ನಡೆಯುವ ಒಳಾಂಗಣದಲ್ಲಿ ಜನರು ಕಿಕ್ಕಿರಿದು ಸೇರಿದ್ದರಿಂದ ನೂರಾರು ಜನರು ಹೊರಗೆ ಕಾಯುವಂತಾಯಿತು. ಮೇಳದಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಜನರು ಹಲಸಿನ ಖಾದ್ಯ ಸವಿಯುವುದರ ಜತೆಗೆ ಸ್ಟಾಲ್ ಗಳಿಗೆ ಭೇಟಿ ನೀಡಿ ಉತ್ಪನ್ನಗಳನ್ನು ವೀಕ್ಷಿಸಿ ಖರೀದಿಸಿದ್ದು ಕಂಡು ಬಂತು.

ಮೇಳದ ಹೊರಭಾಗದಲ್ಲಿ ಆಕರ್ಷಕ ರೀತಿಯಲ್ಲಿ ಸೆಲ್ಫಿ ಕೌಂಟರ್ ಮಾಡಲಾಗಿದೆ. ಮೇಳಕ್ಕೆ ಬಂದವರು ತಮ್ಮ ಪೊಟೋ ಕ್ಲಿಕ್ಕಿಸಿಕೊಂಡು ಸ್ಟೇಟಸ್ ನಲ್ಲಿ ಹಾಕಿಕೊಂಡರು. ಭಾನುವಾರ ರಾತ್ರಿವರೆಗೆ ಮೇಳ ನಡೆಯಲಿದೆ. ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದೆ. ಮೇಳದ ಆಯೋಜಕ ಗಣೇಶ ಶೆಟ್ಟಿಯವರು ಮೇಳಕ್ಕೆ ಆಗಮಿಸಿದ ಜನರಿಗೆ ಹಲಸಿನ ಮೇಳದ ಉದ್ದೇಶ ಮತ್ತು ಪ್ರದರ್ಶನ ಮತ್ತು ಮಾರಾಟದ ಬಗ್ಗೆ ತಿಳಿಸಿದ್ದರು. ಅಲ್ಲದೇ ಭಟ್ಕಳದಲ್ಲಿ ಪ್ರಪ್ರಥಮ ಬಾರಿಗೆ ನಡೆದ ಹಲಸಿನ ಮೇಳಕ್ಕೆ ಜನರು ಉತ್ತಮವಾಗಿ ಸ್ಪಂದಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಮುಂದಿನ ವರ್ಷ 4 ಅಥವಾ 5 ದಿನಗಳ ವರೆಗೆ ಹಲಸಿನ ಮೇಳ ನಡೆಸುವ ಬಗ್ಗೆ ತಿಳಿಸಿದರು.