ಸಾರಾಂಶ
ಸರ್ಕಾರಿ, ಖಾಸಗಿ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು, ವಿವಿಧ ಖಾಸಗಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದು ಉದ್ಯೋಗಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೇ ನಡೆಯುವ ಮೂಲಕ ಉದ್ಯೋಗಾರ್ಥಿಗಳು ಇದರ ಪ್ರಯೋಜನೆ ಪಡೆಯುವಂತಾಯಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಕೈರಂಗಳ ಪುಣ್ಯಕೋಟಿನಗರ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಶಿಕ್ಷಣ, ಉದ್ಯೋಗ, ಕೃಷಿ ಮೇಳದ ಎರಡನೇ ದಿನವಾದ ಶನಿವಾರ ಹಾಗೂ ಕೊನೆಯ ದಿನವಾದ ಭಾನುವಾರದಂದು ನೂರಾರು ಜನರು ಭೇಟಿ ನೀಡಿದ್ದಾರೆ. ರೈತರು ಕೃಷಿ ಆಸಕ್ತರ ಜೊತೆಗೆ ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಥಿಗಳು ಉತ್ಸಾಹದಿಂದ ಕೃಷಿ ಮೇಳಕ್ಕೆ ಆಗಮಿಸಿದ್ದಾರೆ.ಬೆಳಗ್ಗಿನಿಂದ ಸರ್ಕಾರಿ, ಖಾಸಗಿ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು, ವಿವಿಧ ಖಾಸಗಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದು ಉದ್ಯೋಗಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೇ ನಡೆಯುವ ಮೂಲಕ ಉದ್ಯೋಗಾರ್ಥಿಗಳು ಇದರ ಪ್ರಯೋಜನೆ ಪಡೆಯುವಂತಾಯಿತು.ಗ್ರಾಮೀಣ ಭಾಗದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಸಮ್ಮೇಳನಕ್ಕೆ ಭೇಟಿ ನೀಡುವುದರೊಂದಿಗೆ ತಜ್ಞರನ್ನು ಸಂಪರ್ಕಿಸಿ ಮಾಹಿತಿಗಳನ್ನು ಪಡೆದುಕೊಂಡರು. ಅಲ್ಲದೆ ಬರುವ ವಿದ್ಯಾರ್ಥಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ಯಾವುದೇ ಗೊಂದಲಗಳಾಗದಂತೆ ಮೇಳ ನಡೆಯುವ ಮೈದಾನ ಪ್ರವೇಶದಲ್ಲಿಯೇ ಹೆಲ್ಪ್ ಡೆಸ್ಕ್ ಗಳನ್ನು ಅಳವಡಿಸಲಾಗಿತ್ತು.ಗಮನ ಸೆಳೆದ ಆಕರ್ಷಕ ಸ್ಟಾಲ್ ಗಳು:ಮಹಿಳೆಯರ ಗಮನ ಸೆಳೆಯಲು ಮಗ್ಗ, ಹ್ಯಾಂಡ್ ಲೂಮ್ ರೀತಿಯ ಸಾರಿಯ ಮಳಿಗೆಗಳು ವಿಶೇಷವಾಗಿ ಗಮನ ಸೆಳೆಯಿತು. ಹಲಸಿನ ಹಣ್ಣಿನಿಂದ ಮಾಡಿದ ರುಚಿ ರುಚಿಯಾದ ಮನೆ ಹೋಳಿಗೆ , ವಿವಿಧ ರೀತಿಯಾದ ಐಸ್ ಕ್ರೀಂ ಸ್ಟಾಲ್, ಮಕ್ಕಳಿಗಾಗಿ ಆಕರ್ಷಕ ಮನೋರಂಜನಾ ಆಟಗಳು ವಿಶೇಷವಾಗಿ ಗಮನ ಸೆಳೆಯಿತು.ಕೃಷಿಗೆ ಸಂಬಂಧಿಸಿದ ಆಧುನಿಕ ಯಂತ್ರೋಪಕರಣಗಳು, ಅನೇಕ ಬಗೆಯ ಬಟ್ಟೆ ಮಳಿಗೆಗಳು, ಸಾವಯವ ರಸಗೊಬ್ಬರ ಮಳಿಗೆಗಳು, ತರಕಾರಿ ಬೀಜಗಳು, ಗೃಹ ಉಪಯೋಗಿ ವಸ್ತುಗಳು, ಅನೇಕ ಬಗೆಯ ನರ್ಸರಿ ಗಿಡಗಳ ಮಳಿಗೆಗಳು ಸೇರಿದಂತೆ ಕೃಷಿ, ಆಹಾರ, ವಿವಿಧ ಇಲೆಕ್ಟ್ರಾನಿಕ್ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಲ್ಲಿ ಕಳೆದ ಎರಡು ದಿನಗಳಲ್ಲಿ ಅದರಲ್ಲೂ ಸಂಜೆಯ ವೇಳೆಗೆ ಜನರು ತುಂಬಿದ್ದರು. ಅಚ್ಚುಕಟ್ಟಾಗಿ ಸ್ಟಾಲ್ ಗಳ ವ್ಯವಸ್ಥೆ ಮಾಡಿರುವುದರಿಂದ ಬಂದಿರುವ ಗ್ರಾಹಕರಿಗೂ ಅನುಕೂಲವನ್ನು ಒದಗಿಸಿಕೊಟ್ಟಿತ್ತು.
ಸಾಂಸ್ಕೃತಿಕ ವೇದಿಕೆಯಲ್ಲಿ ನಯನ ಗೌರಿ ಸೇರಾಜೆ ಮತ್ತು ಬಳಗದವರಿಂದ ಗಾನ ವೈವಿಧ್ಯ ಹಾಗೂ ಮಂಜುಳಾ ಜಿ.ರಾವ್ ಅವರಿಂದ ಭೂ ಕೈಲಾಸ ನಡೆಯಿತು.ಭಾನುವಾರದಂದು ನೃತ್ಯ ಸಂಭ್ರಮ ಹಾಗೂ ಶಾಂಭವಿ ವಿಲಾಸ ಯಕ್ಷಗಾನ ಪ್ರದರ್ಶನ ನಡೆಯಿತು.