ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
‘ಹಂತಹಂತವಾಗಿ ಕೋಲಾರ ವಿಧಾನಸಭೆ ಕ್ಷೇತ್ರ ಅಭಿವೃದ್ಧಿಗೊಳಿಸುತ್ತಾ ಜನಸ್ನೇಹಿ ಆಡಳಿತ ನೀಡುವುದು ನನ್ನ ಗುರಿ’ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮ ಸರ್ಕಾರ ಬಂದು ಎಂಟು ತಿಂಗಳಾಗಿದ್ದು, ಐದೂ ಗ್ಯಾರಂಟಿ ಜಾರಿಗೆ ತರಲಾಗಿದೆ. ಇದರಿಂದ ಬಡವರಿಗೆ ಬಹಳ ನೆರವಾಗಿದೆ. ಮುಂಬರುವ ಲೋಕಸಭೆ ಚುನಾವಣೆ ಎದುರಿಸಲು ಸ್ಫೂರ್ತಿ ತುಂಬಿದೆ. ಕೋಲಾರ ಲೋಕಸಭೆ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಹೆಚ್ಚು ಸ್ಥಾನ ಗೆಲ್ಲಲಿದೆ. ಈವರೆಗಿನ ಕೆಲಸಗಳು ನನಗೆ ಶೇ ೧೦೦ರಷ್ಟು ಖುಷಿ ನೀಡಿವೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗುವುದು’ ಎಂದರು.
ರಸ್ತೆಗಳ ಅಭಿವೃದ್ಧಿಗೆ ಆದ್ಯತೆ‘ನಗರ ಹಾಗೂ ಗ್ರಾಮಾಂತರದ ಭಾಗದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಮಾಲೂರು ರಸ್ತೆಯಲ್ಲಿ ಎಪಿಎಂಸಿಯಿಂದ ಕೋಲಾರ ತಾಲ್ಲೂಕಿನ ಗಡಿ ಪ್ರದೇಶದವರೆಗೆ ಡಾಂಬರೀಕರಣ ಮಾಡಲಾಗಿದೆ. ಎಪಿಎಂಸಿ ಬಳಿ ಮೋರಿವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದೆ. ಟೇಕಲ್ ರಸ್ತೆಗೂ ಡಾಂಬರೀಕರಣ ನಡೆದಿದೆ’ ಎಂದು ನುಡಿದರು.
‘ಕೋಲಾರ-ಬೆಂಗಳೂರು ರಸ್ತೆಯಿಂದ ತೇರಹಳ್ಳಿ ಬೆಟ್ಟದ ರಸ್ತೆಯನ್ನು ೩.೬೦ ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬಹಳ ವರ್ಷಗಳಿಂದ ಈ ರಸ್ತೆ ಅಭಿವೃದ್ಧಿ ಕಂಡಿರಲಿಲ್ಲ. ಕೋಲಾರಮ್ಮ, ಸೋಮೇಶ್ವರ ದೇಗುಲದ ಸುತ್ತಮುತ್ತಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಇಡೀ ಕೋಲಾರ ತಾಲ್ಲೂಕು ಅಭಿವೃದ್ಧಿಪಡಿಸಲು ಈಗಾಗಲೇ ಯೋಜನೆ ಹಾಕಿಕೊಂಡಿದ್ದು, ಇನ್ನು ಆರು ತಿಂಗಳಲ್ಲಿ ಗೊತ್ತಾಗಲಿದೆ’ ಎಂದು ಹೇಳಿದರು.ದ್ರೌಪದಾಂಬ ಮಂದಿರ ಅಭಿವೃದ್ಧಿ
ಕಾರಂಜಿ ಕಟ್ಟೆಯ ದ್ರೌಪದಾಂಬ ದೇವಾಲಯದ ಬಳಿ ಖಾದ್ರಿಪುರ ರಸ್ತೆ ಅಭಿವೃದ್ಧಿಯನ್ನು ೩೦ ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ನಗರದ ಎಲ್ಲಾ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಯುಜಿಡಿ ಸಮಸ್ಯೆ ಸಮಸ್ಯೆ ಸರಿಪಡಿಸಿ, ಬೀದಿ ದೀಪ ಕಲ್ಪಿಸಿ ನಗರದಲ್ಲಿನ ಸೌಲಭ್ಯ ಕಲ್ಪಿಸಲಾಗುವುದು ಎಂದರು.‘ಮೆಕ್ಕೆ ವೃತ್ತದ ಬಳಿ ಮಿನಿ ವಿಧಾನಸೌಧ ಪಕ್ಕ ನಗರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ೭.೮೩ ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ತಲೆ ಎತ್ತಲಿದೆ.ಇದು ಬಹಳ ವರ್ಷಗಳ ಕನಸು’ ಎಂದು ನುಡಿದರು.
ಮನೆ ಮನೆಗೆ ನಲ್ಲಿ ನೀರು‘ತಾಲ್ಲೂಕಿನಲ್ಲಿ ವಿವಿಧೆಡೆ ಜಲಜೀವನ ಮಿಷನ್ (ಜೆಜೆಎಂ) ಟೆಂಡರ್ ಆಗಿ ಕೆಲಸ ಶುರುವಾಗಿದೆ. ಇಡೀ ಜಿಲ್ಲೆಯಲ್ಲಿ ನಮ್ಮ ತಾಲ್ಲೂಕಿನಲ್ಲಿ ಮಾತ್ರ ಟೆಂಡರ್ ಆಗಿದೆ. ಕ್ಯಾಲನೂರು ಭಾಗದಲ್ಲಿಯೇ ಸುಮಾರು ೬ ಕೋಟಿ ರೂ. ಟೆಂಡರ್ ಆಗಿದೆ’ ಎಂದು ಮಾಹಿತಿ ನೀಡಿದರು.
‘ಪ್ರಮುಖವಾಗಿ ಯರಗೋಳ್ ಜಲಾಶಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದು, ಕೋಲಾರಕ್ಕೂ ನೀರು ಬರಲಿದೆ. ಈಗಾಗಲೇ ಪರೀಕ್ಷಾರ್ಥ ಪ್ರಯೋಗ ನಡೆದಿದೆ’ ಎಂದರು.