ಜಾತಿ ಪ್ರತಿಷ್ಠೆ ಮತ್ತು ಪಕ್ಷ ರಾಜಕಾರಣವನ್ನು ತೊರೆದು ಹಿಂದುಳಿದವರು ಒಗ್ಗೂಡಬೇಕು. ರಾಜಕೀಯವಾಗಿ ನಿರ್ಣಾಯಕವಾದ ಶಕ್ತಿಯಾದಾಗ ಮಾತ್ರ ಈ ಸಮುದಾಯಗಳಿಗೆ ನ್ಯಾಯ ಸಿಗಲು ಸಾಧ್ಯ. ಆದ್ದರಿಂದ ಹಿಂದುಳಿದವರು ಜಾತಿ ಮತ್ತು ಪಕ್ಷದ ಎಲ್ಲೆಯನ್ನು ಮೀರಿ ಒಂದಾಗಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಹಿಂದುಳಿದ ವರ್ಗಗಳು ಸಂವಿಧಾನದ ಪ್ರಜ್ಞೆಯನ್ನು ಹೊಂದಿ ಪ್ರಶ್ನಿಸುವ, ಹೋರಾಡುವ ಮತ್ತು ಸಾಮಾಜಿಕವಾಗಿ ಸ್ಪಂದಿಸುವ ನಾಯಕತ್ವದ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಹೇಳಿದರು.ತಾಲೂಕಿನ ಸಾತನೂರು ಗ್ರಾಮದ ಬೀರೇಶ್ವರ ದೇವಾಲಯದ ಆವರಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ನಡೆದ ಅರಸು ಜನ್ಮ ದಿನಾಚರಣೆ ಮತ್ತು ನಾಯಕತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಗೂ ಸಾಮರ್ಥ್ಯ ಮತ್ತು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಸಮಾಜಮುಖಿಯಾಗಿ ಬೆಳೆಸಿಕೊಂಡಾಗ ಸಾರ್ಥಕತೆಯನ್ನು ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ವಿವಿಧ ಹಿಂದುಳಿದ ಸಮುದಾಯದ ಮುಖಂಡರು ಚಿಂತಿಸಬೇಕು ಎಂದರು.ಜಾತಿ ಪ್ರತಿಷ್ಠೆ ಮತ್ತು ಪಕ್ಷ ರಾಜಕಾರಣವನ್ನು ತೊರೆದು ಹಿಂದುಳಿದವರು ಒಗ್ಗೂಡಬೇಕು. ರಾಜಕೀಯವಾಗಿ ನಿರ್ಣಾಯಕವಾದ ಶಕ್ತಿಯಾದಾಗ ಮಾತ್ರ ಈ ಸಮುದಾಯಗಳಿಗೆ ನ್ಯಾಯ ಸಿಗಲು ಸಾಧ್ಯ. ಆದ್ದರಿಂದ ಹಿಂದುಳಿದವರು ಜಾತಿ ಮತ್ತು ಪಕ್ಷದ ಎಲ್ಲೆಯನ್ನು ಮೀರಿ ಒಂದಾಗಬೇಕು ಎಂದು ಸಲಹೆ ನೀಡಿದರು.
ಅಹಿಂದ ಮುಖಂಡ ಸಾತನೂರು ಕೃಷ್ಣ ಮಾತನಾಡಿ, ಗ್ರಾಮ ಮಟ್ಟದಲ್ಲಿ ಹಿಂದುಳಿದ ಸಮಾಜಗಳು ಸಾಮರಸ್ಯದಿಂದ ಬಾಳುವುದರ ಮೂಲಕ ಸಮಾಜಕ್ಕೆ ಸಂದೇಶವನ್ನು ನೀಡಲು ಸಾಧ್ಯ. ಪ್ರತಿ ತಿಂಗಳು ಪ್ರತಿ ಮಾಸಕ್ಕೆ ಒಮ್ಮ ಎಲ್ಲ ಸಮುದಾಯಗಳು ಒಟ್ಟಿಗೇ ಸೇರಿ ಚರ್ಚಿಸುವುದರ ಮೂಲಕ ಪರಸ್ಪರ ಇರುವ ಅಸಮಾಧಾನಗಳನ್ನು ಹೋಗಲಾಡಿಸಿಕೊಳ್ಳಬಹುದು ಎಂದರು.ನಿವೃತ್ತ ಪೊಲೀಸ್ ಅಧಿಕಾರಿ ರಮೇಶ್ ಮಾತನಾಡಿ, ಹಿಂದುಳಿದ ಸಮಾಜಗಳು ಸಾಮಾಜಿಕ ಜಾಲತಾಣವನ್ನು ಪರಸ್ಪರ ವಿಶ್ವಾಸಕ್ಕಾಗಿ ಬಳಸಿಕೊಳ್ಳಬೇಕು. ಜಾತಿಯೊಳಗಿನ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಂಡು ಒಟ್ಟಾಗಿ ಸಾಗಬೇಕು ಎಂದರು.
ವಿವಿಧ ಹಿಂದುಳಿದ ಸಮುದಾಯದ ಮುಖಂಡರಾದ ಶಿವರಾಂ, ಸ್ವಾಮಿ, ದೊಡ್ಡಚೆನ್ನಯ್ಯ, ನರಸಪ್ಪ ಹೆಗಡೆ, ನರಸಯ್ಯ, ಅಪ್ಪಾಡಿ ಕೃಷ್ಣ, ಗಿರಿಯಪ್ಪ, ಕುಮಾರ್, ಚಿಕ್ಕಗವಿಯಯ್ಯ, ಲಂಕೇಶ್, ಸಾತನೂರು ಮಧು, ಡಿ.ರಮೇಶ್, ಎನ್.ದೊಡ್ಡಯ್ಯ, ಎಂ.ಎಸ್.ರಾಜಣ್ಣ, ಹೊಸಹಳ್ಳಿ ಆನಂದ್ ಇತರರಿದ್ದರು.