ಹಾಸನಾಂಬೆ ದರ್ಶನಕ್ಕೆ ನಿನ್ನೆಯೂ ಜನಸಾಗರ

| N/A | Published : Oct 21 2025, 01:00 AM IST

ಸಾರಾಂಶ

ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರಸಿದ್ಧ ಹಾಸನಾಂಬ ಜಾತ್ರಾ ಮಹೋತ್ಸವದ 11ನೇ ದಿನವಾದ ಸೋಮವಾರ ದೇಗುಲಕ್ಕೆ ಭಕ್ತಸಾಗರ ಹರಿದು ಬಂದಿದ್ದು, ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ರಾಜಕಾರಣಿಗಳು, ಚಲನಚಿತ್ರರಂಗದ ಗಣ್ಯರು ಸಹ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

  ಹಾಸನ :  ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರಸಿದ್ಧ ಹಾಸನಾಂಬ ಜಾತ್ರಾ ಮಹೋತ್ಸವದ 11ನೇ ದಿನವಾದ ಸೋಮವಾರ ದೇಗುಲಕ್ಕೆ ಭಕ್ತಸಾಗರ ಹರಿದು ಬಂದಿದ್ದು, ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ರಾಜಕಾರಣಿಗಳು, ಚಲನಚಿತ್ರರಂಗದ ಗಣ್ಯರು ಸಹ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸೋಮವಾರ ಧರ್ಮದರ್ಶನ ಸರತಿ ಸಾಲುಗಳು ಭರ್ತಿಯಾಗಿದ್ದು, ₹1000 ಹಾಗೂ ₹300 ಟೀಕೆಟ್‌ ವಿಶೇಷ ಸರತಿ ಸಾಲುಗಳೂ ಸಹ ರಶ್ ಆಗಿದ್ದವು. ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರೂ ಹಾಸನಾಂಬೆ ದರ್ಶನ ಪಡೆದರು

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಈ ಬಾರಿ ಹಾಸನಾಂಬೆ ದರ್ಶನಕ್ಕೆ ಜಿಲ್ಲಾಡಳಿತ ಹಾಗೂ ಸಚಿವ ಕೃಷ್ಣಬೈರೇಗೌಡ ಕೈಗೊಂಡ ಕ್ರಮಗಳು ಉತ್ತಮವಾಗಿವೆ. ವಿಐಪಿಗಳಿಗೆ ಅತ್ಯಂತ ವ್ಯವಸ್ಥಿತವಾಗಿ ದರ್ಶನ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ, ಅಧಿಕಾರಿಗಳು, ಸರ್ಕಾರ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಇದೇ ರೀತಿಯ ವ್ಯವಸ್ಥೆಯನ್ನು ಮುಂದಿನ ವರ್ಷಗಳಲ್ಲಿಯೂ ಮುಂದುವರಿಸಬೇಕು ಎಂದರು.

ನಟ ವಿಜಯರಾಘವೇಂದ್ರ ಹಾಗೂ ನಿರ್ಮಾಪಕ ಸಾ.ರಾ.ಗೋವಿಂದು ಅವರು ದೇವಿಯ ದರ್ಶನ ಪಡೆದ ಬಳಿಕ ದರ್ಬಾರ್ ಗಣಪತಿ, ಸಿದ್ದೇಶ್ವರಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯರಾಘವೇಂದ್ರ, ಎಲ್ಲರೂ ದೇವಿಯ ಆಶೀರ್ವಾದದಿಂದ ಆರೋಗ್ಯ, ಸುಖ, ಶಾಂತಿ ಹಾಗೂ ಸಮೃದ್ಧ ಜೀವನ ಹೊಂದಲಿ ಎಂದು ಪ್ರಾರ್ಥನೆ ಮಾಡಿದೆವು. ಇದೊಂದು ವಿಶಿಷ್ಟ ಹಾಗೂ ಆಧ್ಯಾತ್ಮಿಕ ಅನುಭವ. ಹಾಸನಾಂಬೆ ದೇವಿಯ ದರ್ಶನ ಪಡೆಯುವುದು ನಮ್ಮ ಭಾಗ್ಯ. ದೂರದೂರಿನಿಂದ ಸಾವಿರಾರು ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುತ್ತಿದ್ದಾರೆ. ದೇವಾಲಯದ ಆಡಳಿತ ಮಂಡಳಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದು, ಎಲ್ಲರಿಗೂ ದರ್ಶನಕ್ಕೆ ಅವಕಾಶ ದೊರೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Read more Articles on