ಕಾನೂನು, ಸುವ್ಯವಸ್ಥೆಗಾಗಿ ಪೊಲೀಸರೊಂದಿಗೆ ಜನರು ಕೈ ಜೋಡಿಸಿ: ಎಸ್‌ಪಿ ಉಮಾ

| Published : Feb 02 2024, 01:02 AM IST

ಕಾನೂನು, ಸುವ್ಯವಸ್ಥೆಗಾಗಿ ಪೊಲೀಸರೊಂದಿಗೆ ಜನರು ಕೈ ಜೋಡಿಸಿ: ಎಸ್‌ಪಿ ಉಮಾ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ದಲಿತರ ಸಭೆ ನಡೆಸಲು ಹೆಚ್ಚು ಒತ್ತು ನೀಡುತ್ತಿದ್ದಾರೆ. ಸಭೆಯಲ್ಲಿ ನಿಮ್ಮ ಕುಂದು ಕೊರತೆಗಳ ತಿಳಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಪೊಲೀಸ್ ಠಾಣೆಗಳಲ್ಲಿ ಸರಿಯಾದ ಸ್ಪಂದನೆ ಸಿಗದಿದ್ದರೆ ಇಲಾಖೆಯಿಂದ ನಿಮ್ಮ ಬಳಿ ಬಂದು, ಇಂತಹ ಸಭೆಗಳ ನಡೆಸಿದಾಗ ನಿಮ್ಮ ಸಮಸ್ಯೆ ಬಗ್ಗೆ ನೇರವಾಗಿ, ಮುಕ್ತವಾಗಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳಲು ಅವಕಾಶವಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪೊಲೀಸ್ ಅಂದರೆ ಭಯವಲ್ಲ, ಭರವಸೆಯೆಂಬುದು ಅರಿತು, ಇಲಾಖೆ ನೆರವು, ಸಹಾಯ ಪಡೆಯುವ ಮೂಲಕ ಶಾಂತಿ, ಸೌಹಾರ್ದತೆ, ಕಾನೂನು, ಸುವ್ಯವಸ್ಥೆ ಕಾಪಾಡಲು ಜನತೆಯೂ ಇಲಾಖೆ ಜೊತೆಗೆ ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸಲಹೆ ನೀಡಿದರು.

ಇಲ್ಲಿನ ಗಾಂಧಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೌರ ಕಾರ್ಮಿಕರ ವಸತಿ ಗೃಹದ ಆವರಣದಲ್ಲಿ ಇಲಾಖೆಯಿಂದ ಹಮ್ಮಿಕೊಂಡಿದ್ದ ದಲಿತರ ಸಭೆ ಉದ್ಘಾಟಿಸಿ ಮಾತನಾಡಿ ಪರಿಶಿಷ್ಟರ ಸಭೆಗಳ ನಡೆಸಿ ದಲಿತ ಸಮುದಾಯದ ಕುಂದು ಕೊರತೆಗಳ ಆಲಿಸುವುದು, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ದಲಿತರ ಸಭೆ ನಡೆಸಲು ಹೆಚ್ಚು ಒತ್ತು ನೀಡುತ್ತಿದ್ದಾರೆ. ಸಭೆಯಲ್ಲಿ ನಿಮ್ಮ ಕುಂದು ಕೊರತೆಗಳ ತಿಳಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಪೊಲೀಸ್ ಠಾಣೆಗಳಲ್ಲಿ ಸರಿಯಾದ ಸ್ಪಂದನೆ ಸಿಗದಿದ್ದರೆ ಇಲಾಖೆಯಿಂದ ನಿಮ್ಮ ಬಳಿ ಬಂದು, ಇಂತಹ ಸಭೆಗಳ ನಡೆಸಿದಾಗ ನಿಮ್ಮ ಸಮಸ್ಯೆ ಬಗ್ಗೆ ನೇರವಾಗಿ, ಮುಕ್ತವಾಗಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ದಲಿತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು. ಪರಿಶಿಷ್ಟ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರವೂ ಸಾಕಷ್ಟು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ದಲಿತ ಸಮುದಾಯವು ಮೌಢ್ಯ, ಆಚರಣೆಗಳಿಂದ ಮೊದಲು ಹೊರ ಬರಬೇಕು ಎಂದು ತಿಳಿಸಿದರು.

ಅಪ್ರಾಪ್ತ ಮಕ್ಕಳಿಗೆ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧ. ಯಾರೇ ಆಗಲಿ ಕಾನೂನಿಗೆ ವಿರುದ್ಧವಾಗಿ ಚಿಕ್ಕ ವಯಸ್ಸಿಗೆ ಮಕ್ಕಳಿಗೆ ಮದುವೆ ಮಾಡಬಾರದು. ಮದುವೆ ಮಾಡುವ ಬದಲು, ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣ ವಂಚಿತ ಚಿಕ್ಕ ಚಿಕ್ಕ ಮಕ್ಕಳು ಇಂದಿನ ದಿನಮಾನಗಳಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕದ ಸಂಗತಿ. ಅಪರಾಧ, ಕಾನೂನು ಬಾಹಿರ ಕೃತ್ಯಗಳಲ್ಲೂ ಭಾಗಿಯಾಗಿ, ತಮ್ಮ ಭವಿಷ್ಯ, ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಬಾರದೆಂದರೆ ಶಿಕ್ಷಣ‍ವೊಂದೇ ದಾರಿ. ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಕಿವಿಮಾತು ಹೇಳಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ವೃತ್ತ ನಿರೀಕ್ಷಕರಾದ ಬಾಲಚಂದ್ರ ನಾಯ್ಕ, ಗುರುಬಸವರಾಜ, ಪ್ರಭಾವತಿ ಶೇತಸನದಿ, ಸುನಿಲಕುಮಾರ, ಪಿಎಸ್ಐಗಳಾದ ಅಂಜಿನಪ್ಪ, ಪುಷ್ಪಲತಾ, ಶಮೀಮ್ ಉನ್ನೀಸಾ, ದಲಿತ ಮುಖಂಡರಾದ ಸೋಮಲಾಪುರ ಹನುಮಂತಪ್ಪ, ಎಲ್.ಎಂ.ಎಚ್.ಸಾಗರ್, ಉಚ್ಚೆಂಗೆಪ್ಪ, ಮಂಜುನಾಥ ಸೇರಿದಂತೆ ದಲಿತ ಮುಖಂಡರು, ಪೌರ ಕಾರ್ಮಿಕರು ಇದ್ದರು.

..

ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಪೊಲೀಸ್ ಗಸ್ತು ಸಿಬ್ಬಂದಿ ಇದ್ದು, ಆ ಸಿಬ್ಬಂದಿ ಬಳಿ ತಮ್ಮ ಅಹವಾಲು ತಿಳಿಸಬಹುದು. ನಿಮ್ಮ ಅಕ್ಕಪಕ್ಕ ಯಾವುದೇ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದರೆ ತಕ್ಷಣವೇ ಬೀಟ್ ಸಿಬ್ಬಂದಿ ಅಥ‍ವಾ ಸ್ಥಳೀಯ ಠಾಣೆಗೆ ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿದರೆ, ಕೆಲವೇ ನಿಮಿಷಗಳಲ್ಲಿ ನಮ್ಮ ಅಧಿಕಾರಿ, ಸಿಬ್ಬಂದಿ ಸ್ಥಳದಲ್ಲಿ ಹಾಜರಿರುತ್ತಾರೆ.

ಉಮಾ ಪ್ರಶಾಂತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

..........