ನನ್ನ ಅಭಿವೃದ್ಧಿ ಕಾರ್ಯಗಳು ಜನರಿಗೆ ಗೊತ್ತಿವೆ: ಪಿ.ಸಿ.ಗದ್ದಿಗೌಡರ

| Published : May 06 2024, 12:32 AM IST

ಸಾರಾಂಶ

ನನ್ನ ಅಭಿವೃದ್ಧಿ ಕಾರ್ಯಗಳು ಜನರಿಗೆ ಗೊತ್ತಿವೆ. ಅದನ್ನು ಕಾಂಗ್ರೆಸ್‌ನವರಿಗೆ ಹೇಳುವ ಅಗತ್ಯ ನನಗಿಲ್ಲ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಕೆರೂರನನ್ನ ಅಭಿವೃದ್ಧಿ ಕಾರ್ಯಗಳು ಜನರಿಗೆ ಗೊತ್ತಿವೆ. ಅದನ್ನು ಕಾಂಗ್ರೆಸ್‌ನವರಿಗೆ ಹೇಳುವ ಅಗತ್ಯ ನನಗಿಲ್ಲ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಭಾನುವಾರ ಬಿಜೆಪಿ ಕಾರ್ಯಕರ್ತರೊಂದಿಗೆ ಪಟ್ಟಣದ ಬನಶಂಕರಿ ಹಾಗೂ ಶ್ರೀರಾಚೋಟೇಶ್ವರ ದರ್ಶನ ಪಡೆದು ಪತ್ರಕರ್ತರೊಂದಿಗೆ ಮಾತನಾಡಿದರು. ನಾನು ಅಭಿವೃದ್ಧಿ ಮಾಡಿರದಿದ್ದರೆ ಭೇಟಿ ನೀಡುವ ಪ್ರತಿ ಗ್ರಾಮ, ಪಟ್ಟಣ, ನಗರಗಳಲ್ಲಿ ಜನ ಏಕೆ ಸೇರುತ್ತಿದ್ದರು ಎಂದು ಪ್ರಶ್ನಿಸಿದ ಅವರು, ಜನ ನನ್ನ ಅಭಿವೃದ್ಧಿ ಕಾರ್ಯ ಗುರುತಿಸಿದ್ದಾರೆ. ಬೇರೆ ಪಕ್ಷದಿಂದ ನನ್ನ ಸ್ನೇಹ ಬಯಸಿ ವಲಸೆ ಬರುತ್ತಿರುವುದು ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದರು.

ಮೋದಿ ವಿಶ್ವನಾಯಕ: ಪ್ರಧಾನಿ ನರೇಂದ್ರ ಮೋದಿ ದೇಶದ ಸಾರ್ವಭೌಮತೆ, ಭದ್ರತೆಯ ಜೊತೆಗೆ ದೇಶದ ನಾಗರಿಕರ ಹಿತ ದೃಷ್ಟಿಯಿಂದ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸರ್ವಜನಾಂಗದ ಅಭಿವೃದ್ಧಿ, ದೇಶ-ವಿದೇಶಗಳ ಸ್ನೇಹ ಅಭಿವೃದ್ಧಿ ಅವರ ಗುರಿಯಾಗಿದೆ. ಅವರ ಆಡಳಿತವನ್ನು ದೇಶದ ನಾಗರಿಕರು ಒಪ್ಪಿಕೊಂಡಿದ್ದಾರೆ. ವಿದೇಶಗಳು ಸಹ ಮೋದಿಯವರ ಸ್ನೇಹ ಬೆಳೆಸಲು ಮುಂದೆ ಬರುತ್ತಿದ್ದಾರೆ. ಮೋದಿ ಜಗತ್ತು ಕಂಡ ವಿಶ್ವನಾಯಕರಾಗಿದ್ದಾರೆ. ಅವರು ಮತ್ತೆ ಪ್ರಧಾನಿಯಾಗುವುದು ಇಂದಿನ ಅಗತ್ಯವಾಗಿದ್ದು, ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿದರು.

ಬಿಜೆಪಿ ಧುರೀಣರಾದ ಎನ್‌.ಬಿ. ಬನ್ನೂರ, ಪ.ಪಂ.ಮಾಜಿ ಉಪಾಧ್ಯಕ್ಷರಾದ ವಿಜಯಕುಮಾರ ಐಹೊಳ್ಳಿ, ಸಿದ್ದು ಕೊಣ್ಣೂರ, ಪರಶುರಾಮ ಮಲ್ಲಾಡದ, ಪೀತಾಂಬರೆಪ್ಪ ಹವೇಲಿ, ಶರಣು ಸಜ್ಜನ, ಕಾಂತೇಶ ವಿಜಾಪೂರ, ಅರುಣ ಕಟ್ಟಿಮನಿ, ರಾಚಪ್ಪ ಶೆಟ್ಟರ, ಜಯಶ್ರೀ ದಾಸಮನಿ, ಮಾರುತಿ ಮುಗಳಿ, ಸಂದೀಪ ತುಳಸಿಗೇರಿ, ಕಾರ್ತಿಕ ಕೊಣ್ಣೂರ, ಪ್ರೇಮಕುಮಾರ ದಡಿ ಸೇರಿದಂತೆ ಹಲವಾರು ನಾಯಕರಿದ್ದರು.