ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ನಮ್ಮ ತಾಲೂಕು ಮೊದಲು ಹೇಗಿತ್ತು ಈಗ ಮೂರ್ನಾಲ್ಕು ತಿಂಗಳಲ್ಲಿ ಹೇಗಾಗಿದೆ ಎಂದು ಜನ ಯೋಚನೆ ಮಾಡುತ್ತಿದ್ದಾರೆ. ಅವರ ಮೇಲೆ ನಾವು ಆರೋಪ ಮಾಡುತ್ತಿಲ್ಲ. ಜನ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.ಕತ್ತಿಗಳು ಗೂಂಡಾಗಿರಿ ಮಾಡುತ್ತಿದ್ದಾರೆಂಬ ಸತೀಶ್ ಹೇಳಿಕೆಗೆ ಹುಕ್ಕೇರಿ ತಾಲೂಕಿನ ಹೆಬ್ಬಾಳದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ಹೊರಗಿನವರು ಯಾರು? ಒಳಗಿವರು ಯಾರು ಎನ್ನುವುದು ಮಾಧ್ಯಮದವರಿಗೆ ಗೊತ್ತಿರುತ್ತದೆ. ನಮ್ಮ ತಾಲೂಕಿನ ಜನತೆಗೆ ಗೊತ್ತಿರುತ್ತೆ ಎಂದರು.ಎ.ಬಿ.ಪಾಟೀಲ್ ಡಮ್ಮಿ ಎಂಬ ಸಚಿವ ಸತೀಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ಡಮ್ಮಿ ನಾವಲ್ಲ, ನಾವು ಡ್ಯಾಡಿ ಇದ್ದೇವೆ ಅಂತ ಅವರಿಗೆ ಸೆ.28ನೇ ತಾರೀಕಿನ ನಂತರ ತೋರಿಸುತ್ತೇವೆ.ಎಂದ ಅವರು, ಕಾರ್ಖಾನೆಯಲ್ಲಿ ಲಾಂಗ್ ಹಿಡಿದು ತಿರುಗಾಡಿದ ವಿಚಾರವಾಗಿ, ಅದು ಸ್ವಾಭಾವಿಕ ಸಂಗತಿ. ಸೆ.24 ರಂದು ಉಮೇಶ್ ಕತ್ತಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದೆ. ಅಲ್ಲಿ ಶಿಂಧಿ ಗಿಡಗಳಿವೆ. ಅದನ್ನು ಸ್ವಚ್ಛ ಮಾಡಬೇಕಿತ್ತು. ಹೀಗಾಗಿ ಲಾಂಗ್ ಹಿಡಿದು ಬಂದಿದ್ದರು. ಅದನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅದರ ಕುರಿತು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.ರಮೇಶ್ ಕತ್ತಿ ರಾಜ್ಯದಲ್ಲಿಯೇ ಉತ್ತಮ ಭಾಷಣಕಾರ ಎಂಬ ಸಚಿವರ ಹೇಳಿಕೆಗೆ, ನನ್ನ ಹೊಗಳಿದ್ದಕ್ಕೆ ಅವರಿಗೆ ಥ್ಯಾಂಕ್ಸ್ (ಧನ್ಯವಾದಗಳನ್ನು) ಹೇಳುತ್ತೇನೆ ಎಂದ ಅವರು, ನಮ್ಮ ಸ್ವಾಭಿಮಾನಿ ಪೆನಲ್‌ನ ಸದಸ್ಯರನ್ನು ಎರಡು ದಿನಗಳಲ್ಲಿ ಘೋ಼ಷಣೆ ಮಾಡುತ್ತೇವೆ. ಯಾರು ಬರುತ್ತಾರೋ, ನಾವು ದೇವರ ರೀತಿಯಲ್ಲಿ ಒಳಗೆ ಕರೆದುಕೊಳ್ಳುತ್ತೇವೆ. ದಿವಂಗತ ಉಮೇಶ್ ಕತ್ತಿಯವರು ಇಲ್ಲದ ಗ್ಯಾಪ್ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.ಹೆಬ್ಬಾಳದಲ್ಲಿ ರಮೇಶ್ ಕತ್ತಿ ಭಾಷಣ ಮಾಡಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ಹಳ್ಳಿಗೆ ಹೋಗಿ ಜನರನ್ನು ಕೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೂ ನಮ್ಮ ಜನ ಅವರ ಕೈಗೆ ಸಿಗುತ್ತಿಲ್ಲ. ಇದು ಸ್ವಾಭಿಮಾನದ ತಾಲೂಕು ಎಂದು ಅವರು ತಿಳಿದುಕೊಳ್ಳಬೇಕು. ನಮ್ಮಣ್ಣ (ಉಮೇಶ ಕತ್ತಿ) ತೀರಿ ಹೋದ ಬಳಿಕ ಆಟ ಹೂಡಬೇಕು ಎಂದು ಅವರು ವಿಚಾರ ಮಾಡಿರಬಹುದು ಎಂದರು.ದುಡ್ಡು ಕೊಟ್ಟು ಕೆಲವು ನಿರ್ದೇಶಕರು ಹೋದರು ಅಂತ ಹೇಳಿದರು. ಹುಕ್ಕೇರಿ ತಾಲೂಕಿಗೆ ಪ್ರವೇಶ ಹೊಡಿಬೇಕು ಅಂತ ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ಅವರಿಗೆ ಗೊತ್ತಿರಲಿ, ಹುಕ್ಕೇರಿ ತಾಲೂಕಿನ ಜನ ಪ್ರಬುದ್ಧರು. ನಮ್ಮಲ್ಲಿರುವ ಯಾವ ಸದಸ್ಯರೂ ಅವರ ಜೊತೆ ಕೈಜೋಡಿಸಿಲ್ಲ. ಕೆಲವು ಕಾರ್ಯಕ್ರಮದಲ್ಲಿ ಸತೀಶ್ ವಿಭೂತಿ ಹಚ್ಚಿಕೊಂಡು ಬಂದಿದ್ದರು. ಇದು ದುರುಂಡೇಶ್ವರನ ನಾಡು ಕಮಲವ್ವಾಯಿ ನಾಡು, ಹೊಳೆಮ್ಮನ ಬೀಡು. ಈ ನೆಲದ ಮೇಲೆ ಕಾಲಿಟ್ಟವರಿಗೆ ವಿಭೂತಿ, ಟೋಪಿ, ಭಂಡಾರ, ಜನಿವಾರ ಎಲ್ಲವನ್ನೂ ಸಹ ಕಲಿಸುತ್ತೆ. ಪ್ರಸಂಗ ಬಂದರೆ ಕಾವಿಯನ್ನೂ ಹಾಕಿಕೊಳ್ಳಲು ಹಚ್ಚುತ್ತೆ ಎಂದು ಸಚಿವ ಸತೀಶ್‌ಗೆ ಟಾಂಗ್ ನೀಡಿದರು.ನಿನ್ನೆ ಒಂದು ಪೋಸ್ಟ್ ನೋಡಿದೆ. ಎಜಿಎಂನಲ್ಲಿ ಒಂದು ಸರ್ವಸಾಧಾರಣ ಸಭೆ ಕರೆಯಲಾಗಿದೆ. ಇನ್ನೂ ಎಲ್ಲರೂ ಹೊರಗಿದ್ದರೂ ಸಹಿತ ಅಪ್ಪಣ್ಣಗೌಡರ ಫೋಟೊ ಅಲ್ಲಿ ಮಾಯವಾಗಿದೆ. ಮೊನ್ನೆ ಮೊನ್ನೆ ಬಂದವರ ಎಲ್ಲರ ಫೋಟೊ ಇದೆ. ಇನ್ನೂ ಒಳಗೆ ಹೋಗಿಲ್ಲ. ಈಗಲೇ ಈ ಪರಿಸ್ಥಿತಿ ಇದೆ. ಅಲ್ಲಿ ಅಪ್ಪಣ್ಣಗೌಡರ ಫೋಟೊ, ಬಸಗೌಡರ ಫೋಟೊ ಹಾಗೂ ನಮ್ಮ ಹೃದಯವೂ ಅಲ್ಲೆ ಇದೆ. ಅವರು ಒಳಗೆ ಬಂದಿದ್ದೆ ಆದರೆ ಮರಳಿ ಚುನಾವಣೆ ಮಾಡಿ ಅದನ್ನು ಮರಳಿ ಪಡೆಯೋಣ. ಯಾವುದೇ ಕಾರಣಕ್ಕೂ ಹೀರಾ ಶುಗರ್ ಬಿಟ್ಟು ಕೊಡಲ್ಲ ಎಂದು ಗುಡುಗಿದರು.ಕೆಲವು ಕಾರ್ಯಕ್ರಮದಲ್ಲಿ ಸತೀಶ್ ವಿಭೂತಿ ಹಚ್ಚಿಕೊಂಡು ಬಂದಿದ್ದರು. ಇದು ದುರುಂಡೇಶ್ವರನ ನಾಡು ಕಮಲವ್ವಾಯಿ ನಾಡು, ಹೊಳೆಮ್ಮನ ಬೀಡು. ಈ ನೆಲದ ಮೇಲೆ ಕಾಲಿಟ್ಟವರಿಗೆ ವಿಭೂತಿ, ಟೋಪಿ, ಭಂಡಾರ, ಜನಿವಾರ ಎಲ್ಲವನ್ನೂ ಸಹ ಕಲಿಸುತ್ತೆ. ಪ್ರಸಂಗ ಬಂದರೆ ಕಾವಿಯನ್ನೂ ಹಾಕಿಕೊಳ್ಳಲು ಹಚ್ಚುತ್ತೆ
- ರಮೇಶ ಕತ್ತಿ, ಮಾಜಿ ಸಂಸದರು.