ಅವಳಿ ನಗರದ ರಸ್ತೆಗಳಲ್ಲಿ ಈಗ ಪಾದಚಾರಿಗಳಿಗೆ ಬೀದಿ ನಾಯಿಗಳದ್ದೇ ಭಯ ಪ್ರಾರಂಭವಾಗಿದೆ.
35 ವಾರ್ಡ್‌ಗಳಲ್ಲೂ ಹಿಂಡುಹಿಂಡಾಗಿ ಬೀಡುಬಿಟ್ಟ ಶ್ವಾನಗಳು, ಪಾದಚಾರಿಗಳು, ವಾಹನ ಸವಾರರ ಮೇಲೆ ನಿತ್ಯ ದಾಳಿ,
ಬೆಳಗಿನ ವಾಕಿಂಗ್ ಗೆ ಕೋಲು ಕಡ್ಡಾಯ, ನಾಯಿ ಬೆನ್ನಟ್ಟಿ ಕೈ, ಕಾಲು ಮುರಿದುಕೊಂಡ ದ್ವಿಚಕ್ರ ಸವಾರರು, ಆಸ್ಪತ್ರೆ ಅಲೆದಾಟ, ಹೆಚ್ಚಿನ ಆರ್ಥಿಕ ಹೊರೆಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗಗದಗ-ಬೆಟಗೇರಿ ಅವಳಿ ನಗರದ ರಸ್ತೆಗಳಲ್ಲಿ ಈಗ ಪಾದಚಾರಿಗಳಿಗೆ ಬೀದಿ ನಾಯಿಗಳದ್ದೇ ಭಯ ಪ್ರಾರಂಭವಾಗಿದೆ. ರಸ್ತೆಯ ತುಂಬಾ ಬೀದಿ ನಾಯಿಗಳು ಒಟ್ಟಾಗಿ ಹಿಂಡುಗಟ್ಟಿ ಓಡಾಡುತ್ತಿದ್ದು, ಅವಳಿ ನಗರದ 35 ವಾರ್ಡ್‌ಗಳಲ್ಲೂ ಬೀದಿ ನಾಯಿಗಳ ಉಪಟಳ ಮಿತಿಮೀರಿದ್ದು, ಮಕ್ಕಳು, ವೃದ್ಧರು ಮನೆಯಿಂದ ಹೊರಬರಲು ಕೂಡ ಭಯ ಪಡುವಂತಾಗಿದೆ.
ನಗರದ ಮಹಾತ್ಮಾ ಗಾಂಧಿ ವೃತ್ತ, ಹಳೆಯ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ ಹಾಗೂ ಚಿಕನ್ ಮಾರ್ಕೆಟ್‌ಗಳಂತಹ ಜನನಿಬಿಡ ಪ್ರದೇಶಗಳಲ್ಲಿರುವ ಶ್ವಾನಗಳ ಗುಂಪನ್ನು ಗಮನಿಸಿದರೆ ಸಾಕು ಸಹಜವಾಗಿಯೇ ಎಂತವರಿಗೂ ಭಯ ಹುಟ್ಟುತ್ತದೆ. ಮಕ್ಕಳು ಮನೆಯಿಂದ ಸಮೀಪದ ದಿನಸಿ ಅಂಗಡಿಗಳಿಗೆ ತೆರಳಲೂ ಅಂಜುತ್ತಿದ್ದು, ಮಕ್ಕಳ ಮೇಲೂ ದಾಳಿ ನಡೆದಿರುವ ಉದಾಹರಣೆಗಳಿವೆ. ಮುಂಜಾನೆ ವಾಯುವಿಹಾರಕ್ಕೆ ತೆರಳುವ ಹಿರಿಯ ನಾಗರಿಕರು ಕೈಯಲ್ಲಿ ಕೋಲು ಹಿಡಿದುಕೊಂಡೇ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.ಕೈಯಲ್ಲಿ ಬಡಿಗೆ ಇಲ್ಲದಿದ್ದರೆ ನಾಯಿಗಳ ಹಿಂಡಿನಿಂದ ಪಾರಾಗುವುದು ಅಸಾಧ್ಯ ಎನ್ನುವಂತಹ ಭಯದ ವಾತಾವರಣ ಸೃಷ್ಟಿಯಾಗಿದೆ. ತಡರಾತ್ರಿ ದೂರದ ಊರುಗಳಿಂದ ಹೊಸ ಬಸ್ ನಿಲ್ದಾಣಕ್ಕೆ ಬಂದು ಮನೆಗಳತ್ತ ಹೆಜ್ಜೆ ಹಾಕುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ಹೊಸ ಬಸ್ ನಿಲ್ದಾಣದ ಸಮೀಪದಲ್ಲಿರುವ ಎಗ್ ರೈಸ್, ಚಿಕನ್ ಅಂಗಡಿಗಳಿಂದ ಹೊರ ಹಾಕುವ ತ್ಯಾಜ್ಯಗಳನ್ನು ತಿನ್ನಲು ಬರುವ ಅಪಾರ ಸಂಖ್ಯೆಯ ನಾಯಿಗಳು ಅಲ್ಲಿಯೇ ಬೀಡು ಬಿಟ್ಟಿದ್ದು ರಾತ್ರಿ ವೇಳೆ ನಡೆಯುತ್ತಿರುವ ಬೀದಿ ನಾಯಿಗಳ ದಾಳಿಗೆ ಜನರು ತತ್ತರಿಸಿದ್ದಾರೆ.
ಹಲವರಿಗೆ ಗಾಯ:ವಿಶೇಷವಾಗಿ ಕೆಲಸಕ್ಕೆ ತೆರಳುವ ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿನಿಯರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ನಾಯಿಗಳು ಏಕಾಏಕಿ ಎರಗುತ್ತಿವೆ. ಗಾಬರಿಯಲ್ಲಿ ನಿಯಂತ್ರಣ ತಪ್ಪಿ ಬಿದ್ದು ಕೈ, ಕಾಲು ಮುರಿದುಕೊಳ್ಳುತ್ತಿದ್ದಾರೆ. ನಾಯಿ ಕಡಿತಕ್ಕೊಳಗಾದವರು ತಕ್ಷಣವೇ ರೇಬೀಸ್ ನಿರೋಧಕ ಲಸಿಕೆ ಹಾಗೂ ಗಾಯ ತೀವ್ರವಾಗಿದ್ದಲ್ಲಿ ದುಬಾರಿ ಇಮ್ಯುನೊಗ್ಲಾಬ್ಯುಲಿನ್ ಚುಚ್ಚುಮದ್ದು ಪಡೆಯಬೇಕಿದೆ. ಗಾಯದ ನೋವು, ಸೋಂಕಿನ ಭೀತಿ ಒಂದೆಡೆಯಾದರೆ, ದಿನಗೂಲಿ ನೌಕರರು ಹಾಗೂ ಮಧ್ಯಮ ವರ್ಗದ ಜನರಿಗೆ ಚಿಕಿತ್ಸಾ ವೆಚ್ಚ, ಸಾರಿಗೆ ವೆಚ್ಚ ಮತ್ತು ಕೆಲಸದ ದಿನಗಳು ಕೈತಪ್ಪಿ ಸಾವಿರಾರು ರುಪಾಯಿಗಳ ಆರ್ಥಿಕ ಹೊರೆ ಉಂಟಾಗುತ್ತಿದೆ.
ಕಾನೂನು ಹೇಳುವುದು ಏನು?:ಕೇಂದ್ರ ಸರ್ಕಾರದ ಪ್ರಾಣಿ ಹಿಂಸೆ ತಡೆ ಕಾಯ್ದೆ-1960 ಹಾಗೂ ಪ್ರಾಣಿ ಜನನ ನಿಯಂತ್ರಣ ನಿಯಮಗಳು-2023ರ ಅನ್ವಯ ಬೀದಿ ನಾಯಿಗಳನ್ನು ಕೊಲ್ಲುವಂತಿಲ್ಲ ಅಥವಾ ಅವು ವಾಸಿಸುವ ಮೂಲ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸುವಂತಿಲ್ಲ. ಸ್ಥಳೀಯ ಸಂಸ್ಥೆಗಳು ನಾಯಿಗಳನ್ನು ಹಿಡಿದು, ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ, ರೇಬೀಸ್ ಲಸಿಕೆ ಹಾಕಿ ಪುನಃ ಅದೇ ಜಾಗದಲ್ಲಿ ಬಿಡುವುದು ಮಾತ್ರ ಕಾನೂನುಬದ್ಧ ಪರಿಹಾರ. ಆದರೆ, ಅವಳಿ ನಗರದಲ್ಲಿ ಈ ಸಂತಾನಹರಣ ಪ್ರಕ್ರಿಯೆ ನಿರಂತರವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯದೆ ಇರುವುದರಿಂದ ನಾಯಿಗಳ ಸಂಖ್ಯೆ ಮಿತಿಮೀರಿ ಬೆಳೆಯುತ್ತಿದೆ.ಬೆಳಿಗ್ಗೆ ವಾಕಿಂಗ್ ಹೋಗುವಾಗ ಅಥವಾ ಮಕ್ಕಳು ಶಾಲೆಗೆ ತೆರಳುವಾಗ ಬೀದಿ ನಾಯಿಗಳು ಒಟ್ಟಾಗಿ ದಾಳಿ ಮಾಡುತ್ತಿವೆ. ನಾಯಿಗಳ ದಾಳಿಗೆ ಬೆದರಿ ದ್ವಿಚಕ್ರ ವಾಹನ ಸವಾರರು ಕೆಳಗೆ ಬಿದ್ದು ಕೈ, ಕಾಲು ಮುರಿದುಕೊಳ್ಳುತ್ತಿದ್ದಾರೆ. ವಯೋವೃದ್ಧರು ಮನೆಯಿಂದ ಆಚೆ ಬರಲು ಆಗುತ್ತಿಲ್ಲ. ಬೆಳಗಿನ ವೇಳೆ ವಾಯು ವಿಹಾರಕ್ಕೆ ತೆರಳಿದರಂತೂ ದಾಳಿ ಖಂಡಿತ ಎನ್ನುತ್ತಾರೆ ಪುಟ್ಟರಾಜ ನಗರದ ನಿವಾಸಿ ಬಸವಣ್ಣಯ್ಯಶಾಸ್ತ್ರಿ ಹಿರೇಮಠ.ಅವಳಿ ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಈಗಾಗಲೇ ವಿಶೇಷ ಗಮನ ನೀಡಲಾಗಿದೆ. ನಿಯಮಾನುಸಾರ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ಲಸಿಕಾ ಅಭಿಯಾನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಂ ಪವಾರ.