ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ವಿರಳ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ 2013ರಲ್ಲಿ ಸ್ಥಾಪನೆಯಾದ ವಿರಳ ರೋಗಿಗಳ ಕ್ಷೇಮಾಭಿವೃದ್ಧಿ ಸಂಸ್ಥೆ-ಭಾರತ (ಒಆರ್‌ಡಿಐ) 2016ರಿಂದ ಪ್ರತಿ ವರ್ಷ ರೇಸ್ ಫಾರ್ 7 ಅಭಿಯಾನ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಆಯೋಜಿಸುತ್ತಿದೆ ಎಂದು ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಅಧ್ಯಕ್ಷ ಡಾ.ಸುರೇಶ ಹನಗವಾಡಿ ತಿಳಿಸಿದರು.ನಗರದಲ್ಲಿ ಭಾನುವಾರ ಹಿಮೋಫಿಲಿಯಾ ಸೊಸೈಟಿ ಹಮ್ಮಿಕೊಂಡಿದ್ದ ವಿರಳ ರೋಗಗಳ ದಿನಾಚರಣೆ-2024ರ ಅಂಗವಾಗಿ ಒಂದು ದೇಶ ಒಂದು ದಿನ ವಿರಳ ರೋಗಿಗಳಿಗಾಗಿ ಜೊತೆಯಾಗೋಣ ಬನ್ನಿ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ರೇಸ್ ಫಾರ್ 7 ಶೀರ್ಷಿಕೆಯ 7 ಕಿಮೀ ಮ್ಯಾರಥಾನ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ದೇಶದ 15 ಪ್ರಮುಖ ನಗರಗಳಲ್ಲಿ ವಿರಳ ರೋಗಗಳ ದಿನಾಚರಣೆ ಅಂಗವಾಗಿ ರೇಸ್ ಫಾರ್ 7 ಶೀರ್ಷಿಕೆಯಡಿ 7 ಕಿಮೀ ಮ್ಯಾರಥಾನ್ ಓಟ-ನಡಿಗೆ ಹಮ್ಮಿಕೊಂಡಿದ್ದು, ವಿರಳ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಫೆಬ್ರವರಿ ಕೊನೆಯ ದಿನ ಬೇರೆ ಬೇರೆ ದಿನಗಳಂದು ಪ್ರಮುಖ ನಗರಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯದ ಬಗ್ಗೆ ಕಾಳಜಿ ಇರಲಿ:ಜಾಥಾ ಉದ್ಘಾಟಿಸಿದ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್‌ನ ದೀಪಾ ಶಿವಕುಮಾರ ಮಾತನಾಡಿ, ವಿರಳ ರೋಗಿಗಳು ಗುಣಮಟ್ಟದ ಚಿಕಿತ್ಸೆ ಪಡೆದು, ಬೇಗ ಗುಣಮುಖರಾಗಬೇಕು. ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳಾಗುತ್ತಿವೆ. ವೈದ್ಯಕೀಯ ಸಂಶೋಧನೆಗಳು ಹಿಂದಿಂಗಿಂತಲೂ ಈಗ ಮುನ್ನಡೆ ಸಾಧಿಸುತ್ತಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ತೋರಬೇಕಾದ ಅನಿವಾರ್ಯತೆ ಇದೆ. ಮುಂದಿನ ದಿನಗಳಲ್ಲಿ ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ಎಂ.ಬಿ.ನಾಗೇಂದ್ರಪ್ಪ ಮಾತನಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಷಣ್ಮುಖಪ್ಪ, ಜೆಜೆಎಂ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಮೂಗನಗೌಡ, ಅಶ್ವಿನಿ ಆಯುರ್ವೇದಿಕ್ ಕಾಲೇಜಿನ ಮುಖ್ಯಸ್ಥರಾದ ಡಾ.ಮೃತ್ಯುಂಜಯ ಹಿರೇಮಠ, ಹಿಮೋಫಿಲಿಯಾ ಸೊಸೈಟಿ ಉಪಾಧ್ಯಕ್ಷ ಡಾ.ಬಿ.ಟಿ.ಅಚ್ಯುತ್, ನಿವೃತ್ತ ಪೊಲೀಸ್ ಅಧೀಕ್ಷಕ ರವಿನಾರಾಯಣ, ಡಾ.ಸೌಜನ್ಯಾ ಇತರರಿದ್ದರು.ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಿತು. 150ಕ್ಕೂ ಹೆಚ್ಚು ಜನರು ಜಾಥಾದಲ್ಲಿದ್ದರು. ಜೆಜೆಎಂ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗ, ಪೆಥಾಲಜಿ ವಿಭಾಗದ ವೈದ್ಯಕೀಯ ವಿದ್ಯಾರ್ಥಿಗಳು, ಅಶ್ವಿನಿ ಆಯುರ್ವೇದಿಕ್ ಕಾಲೇಜಿನ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ಸಾರ್ವಜನಿಕರು, ರೋಗಿಗಳು, ಪಾಲಕರು, ಸಂಸ್ಥೆ ಸಿಬ್ಬಂದಿ ಇದ್ದರು.
ಭರವಸೆ ಮೂಡಿಸುವ ಪ್ರಯತ್ನವಿರಳ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಮ್ಯಾರಥಾನ್ ಮುಖ್ಯ ಉದ್ದೇಶವಾಗಿದೆ. ವೈದ್ಯಕೀಯ ಸೌಲಭ್ಯಗಳ ಅಭಿವೃದ್ಧಿ, ವೈಜ್ಞಾನಿಕ ಲೋಕದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳ ಪ್ರೋತ್ಸಾಹಗಳಿಗೋಸ್ಕರ ಅನೇಕ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರತಿ ವರ್ಷ ಹಿಮೋಫಿಲಿಯಾ ಸೊಸೈಟಿ ದಾವಣಗೆರೆಯಲ್ಲೂ ಜಾಥಾ ನಡೆಸಿ ವಿರಳ ರೋಗಗಳ ಬಗ್ಗೆ ಜಾಗೃತಿ ಮೂಡಿಸುತ್ತಾ, ವಿರಳ ರೋಗಿಗಳ ಜೊತೆಗೆ ನಾವು ಇದ್ದೇವೆಂಬ ಭರವಸೆ ಮೂಡಿಸುವ ಪ್ರಯತ್ನವಾಗಿದೆ.
ಡಾ.ಸುರೇಶ ಹನಗವಾಡಿ, ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ