ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಂಡ್ಯ ಲೋಕಸಭೆ ಮತ್ತು ರಾಮನಗರದ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಕಾಂಗ್ರೆಸ್ಸಿನವರ ಕುತಂತ್ರದಿಂದ ಸೋಲುಂಟಾಯಿತು. ಆದರೆ, ಈ ಬಾರಿ ಉಪಚುನಾವಣೆಯಲ್ಲಿ ಚನ್ನಪಟ್ಟಣದ ಜನತೆ ಕುತಂತ್ರಕ್ಕೆ ಮರಳಾಗುವುದಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.ತಾಲೂಕಿನ ಶೀಳನೆರೆ ಹೋಬಳಿಯ ಚಟ್ಟಂಗೆರೆ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಮನೆ ಗೃಹಪ್ರವೇಶಕ್ಕೆ ಆಗಮಿಸಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯಾಗಲಿದೆ ಎಂದರು.
ಉಪ ಚುನಾವಣೆಯಲ್ಲಿ ನಮ್ಮ ವಿರೋಧಿಗಳು ಎಷ್ಟೇ ಕುತಂತ್ರದ ರಾಜಕಾರಣ ಮಾಡಿದರೂ ಚನ್ನಪಟ್ಟಣದ ಜನತೆ ಮತ್ತು ಎನ್‌ಡಿಎ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿಗೆ ವಿಜಯಮಾಲೆ ನೀಡುತ್ತಾರೆ. ವಿರೋಧಿಗಳ ಹೇಳಿಕೆಗಳನ್ನು ನಾನು ಕೂಡ ಗಮನಿಸಿದ್ದೇನೆ. ರಾಜಕಾರಣ ನಿಂತ ನೀರಲ್ಲ. ಅವರ ಹೇಳಿಕೆಗೆ ಚನ್ನಪಟ್ಟಣದ ಜನತೆಯೇ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಇರಲಿಲ್ಲ. ಹೀಗಾಗಿ ಬಿಜೆಪಿಯಲ್ಲಿದ್ದವರನ್ನು ಕನಕಪುರ ಸಹೋದರರು ಕರೆದೊಯ್ದು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅವರ ಕುತಂತ್ರ ಈ ಬಾರಿ ನಡೆಯುವುದಿಲ್ಲ. ಚನ್ನಪಟ್ಟಣ ಜನತೆ ನಿಖಿಲ್‌ಗೆ ಆಶೀರ್ವದಿಸಿ ಕೈಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ರಚನೆಯಾಗಿ ಒಂದೂವರೆ ವರ್ಷ ಕಳೆಯುತ್ತಾ ಬಂದಿದೆ. ಆದರೆ, ರಾಜ್ಯದಲ್ಲಿ ಅಭಿವೃದ್ಧಿಗಾಗಲಿ ಮೂಲ ಸೌಕರ್ಯಗಳಿಗೂ ಅನುದಾನ ಬಿಡುಗಡೆ ಮಾಡಿಲ್ಲ. ಇವರಿಂದ ಜನತೆ ಏನು ಅಭಿವೃದ್ಧಿಯ ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯನ್ನು ನುಂಗಿ ಹಾಕುತ್ತಿವೆ. ಗ್ಯಾರಂಟಿಗಳು ಒಂದೊಂದಾಗಿ ನಿಲ್ಲಲಿವೆ. ಅದಕ್ಕೆ ಪುಷ್ಟಿ ಎಂಬಂತೆ ಈಗಾಗಲೇ ಡಿಸಿಎಂ ಡಿಕೆಶಿ ಶಕ್ತಿ ಯೋಜನೆ ನಿಲ್ಲಿಸುವ ಮುನ್ಸೂಚನೆ ನೀಡಿದ್ದಾರೆ. ಅದೇ ರೀತಿ ಉಳಿದ ಗ್ಯಾರಂಟಿಗಳು ನಿಲ್ಲಲಿವೆ ಎಂದರು.
ಮನ್ಮುಲ್ ನಲ್ಲಿ ನಮ್ಮವರನ್ನು ಗೆಲ್ಲಿಸಿ:ಮಂಡ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಚುನಾವಣೆಗಳು ಮುಂದಿನ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿವೆ. ತಾಲೂಕಿನ ಎರಡು ಸ್ಥಾನಗಳಿಗೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಮತ್ತು ಕಾರ್ಯಕರ್ತ ನಾಟನಹಳ್ಳಿ ಮಹೇಶ್ ಅವರನ್ನು ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳನ್ನಾಗಿ ಪ್ರಕಟಿಸಿದ್ದಾರೆ. ಕಾರ್ಯಕರ್ತರ ತೀರ್ಮಾನಕ್ಕೆ ನನ್ನ ಸಹಮತವಿದೆ ಎಂದರು.
ರೈತರ ಹಿತದೃಷ್ಟಿಯಿಂದ ಮನ್ಮುಲ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ತಾಲೂಕಿನಿಂದ ಶಾಸಕ ಎಚ್.ಟಿ.ಮಂಜು ಮತ್ತು ನಾಟನಹಳ್ಳಿ ಮಹೇಶ್ ಅವರ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.ಇದಕ್ಕೂ ಮುನ್ನ ತಾಲೂಕಿನ ಗಡಿಗ್ರಾಮ ಅಶೋಕನಗರ ಬಳಿ ಶಾಸಕ ಎಚ್.ಟಿ.ಮಂಜು ತಮ್ಮ ಬೆಂಬಲಿಗರೊಂದಿಗೆ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು.
ತಹಸೀಲ್ದಾರ್ ಅಶೋಕ್ ಕುಮಾರ್, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕಿರಾಮ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಶಾಸಕರ ಸಹೋದರ ಎಚ್.ಟಿ.ಲೋಕೇಶ್, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಶೀಳನೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಸ್ವಾಮಿಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಮುಖಂಡರಾದ ಮಹದೇವೇಗೌಡ, ಮರೀಗೌಡ, ಸಚಿನ್ ಕೃಷ್ಣ, ಶಾಸಕರ ಆಪ್ತ ಸಹಾಯಕರಾದ ಅರಳಕುಪ್ಪೆ ಪ್ರತಾಪ್, ಮರಡಹಳ್ಳಿ ಪ್ರದೀಪ್ ಸೇರಿದಂತೆ ಹಲವು ಮುಖಂಡರು ಇದ್ದರು.