ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ನೆಲದಿಂದಲೇ ರೈಲೊಂದು ರಾಜಧಾನಿ ಬೆಂಗಳೂರಿಗೆ ನಿತ್ಯ ಓಡಾಡವಂತಾಗಬೇಕು ಎಂಬ ಇಲ್ಲಿನ ಜನರ ವರ್ಷಗಳ ಬೇಡಿಕೆ ಮಂಗಳವಾರ ಸಾಕಾರಗೊಂಡಿತು.ಅತಿ ವೇಗದ ಅತ್ಯಾಧುನಿಕ ಆಸನ ವ್ಯವಸ್ಥೆಯ ವಂದೇ ಭಾರತ ಸರಣಿಯ ರೈಲು ಕಲಬುರಗಿಯಿಂದಲೇ ಉಗಮವಾಗುವ ಮೂಲಕ ಇತಿಹಾಸ ಸೃಷ್ಟಿಸಿತು. ಕಲಬುರಗಿಯಿಂದ ಕೊನೆಗೂ ರೈಲೊಂದು ಶುರುವಾಯ್ತು ಎಂದು ಇಲ್ಲಿನ ಸಾರ್ವಜನಿಕರು ನಿಲ್ದಾಣದಲ್ಲಿ ಸೇರಿಕೊಂಡು ಕುಣಿದು ಕುಪ್ಪಳಿಸಿದರು, ಅನೇಕರು ಸಂಭ್ರಮದಲ್ಲಿ ಮಿಂದೆದ್ದರು.
ಕೇಸರಿ ಬಣ್ಣದ ವಂದೇ ಭಾರತ ರೈಲು ಕಲಬುರಗಿಯಲ್ಲಿ ಕಂಡಾಗ ಜನ ಹುಚ್ಚೆದ್ದು ಸೆಲ್ಪಿಗೆ ಮುಗಿ ಬಿದದ್ದ ನೋಟಗಳು ಕಂಡವು, ಉದ್ಘಾಟನೆಗೂ ಮುನ್ನವೇ ಜನ ರೈಲಿಗೆ ಘೇರಾವ್ ಹಾಕಿದ್ದಲ್ಲದೆ ಅದರ ಅಂದ- ಚೆಂದ ಮನಲ್ಲೇ ಸವಿದರು. ಅನೇಕರು ಗುಂಪಾಗಿ, ಒಂಟಿಯಾಗಿ ರೈಲಿನೊದಿಗೆ ಸೆಲ್ಫಿ ತೆಗಿಸಿಕೊಳ್ಳುವಲ್ಲಿ ಮಗ್ನರಾಗಿದ್ದರು.ವಂದೇ ಭಾರತ್, ಭಾರತ್ ಮಾತಾಕೀ ಜೈ: ಜನ ನೋಡುತ್ತಿದ್ದಂತೆಯೇ ಕಲಬುರಗಿ–ಬೆಂಗಳೂರು ಮಧ್ಯೆ ವಾರದಲ್ಲಿ ಆರು ದಿನ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವರ್ಚುವಲ್ ಮೂಲಕ ಗುಜರಾತ್‍ನ ಅಹಮದಾಬಾದ್‍ನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಬೆ.9.40ಕ್ಕೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿಸುತ್ತಿದ್ದಂತೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚಲಿಸಲು ಆರಂಭಿಸಿತು. ಈ ವೇಳೆ ನಿಲ್ದಾಣದಲ್ಲಿದ್ದ ಸಾರ್ವಜನಿಕರು, ಕಾರ್ಯಕರ್ತರು ‘ವಂದೇ ಭಾರತ್, ಭಾರತ್ ಮಾತಾಕೀ ಜೈ’ ಎಂದು ಘೋಷಣೆ ಕೂಗಿದರು.
ಜನರ ತೊಂದರೆಗೆ ಮೋದಿ ಪರಿಹಾರ: ಇದೇ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲೇ ನಡೆದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಕಲಬುರಗಿ ಸಂಸದ ಡಾ. ಉಮೇಶ ಜಾಧವ್, ಮೋದಿಯವರು ಸಾಮಾನ್ಯ ಜನರ ಸಮಸ್ಯೆ ಅರಿತು ಇದೀಗ ಕಲಬುರಗಿ- ಬೆಂಗಳೂರು ಮಧ್ಯ ವಿಶೇಷ ರೈಲು ಹಾಗೂ ವಂದೇ ಭಾರತ್ ರೈಲು ಕೊಟ್ಟಿದ್ದಾರೆಂದರು. ಸ್ವಾತಂತ್ರ್ಯದ ಬಳಿಕ ಕಲಬುರಗಿ-ಬೆಂಗಳೂರು ನಡುವೆ ನೇರ ರೈಲು ಹಾಗೂ ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿವೆ. ಹೀಗಾಗಿ ಜಿಲ್ಲೆಯ ಜನರ ನಿತ್ಯದ ಬದುಕಲ್ಲಿ ಸಾಕಷ್ಟು ಬದಲಾವಣೆ ತರಲಿದ್ದು, ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದರು.ಜಿಲ್ಲೆಯ ಹಲವು ನಿಲ್ದಾಣಗಳ ಮೇಲ್ದರ್ಜೆ: ವಾಡಿ, ಶಹಾಬಾದ್ ಹಾಗೂ ಗಾಣಗಾಪುರ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಾಗಿ 300 ಕೋಟಿ ರು. ಅನುದಾನ ನಿಗದಿ ಪಡಿಸಲಾಗಿದೆ. ನಿಲೂರ ಮೇಲ್ಸೇತುವೆ ಮೇಲ್ದರ್ಜೆಗೆ ಏರಿಸಲಾಗಿದೆ. ಜಿಲ್ಲೆಯಲ್ಲಿ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ಪಿಎಂ ಮಿತ್ರ ಯೋಜನೆಯ ಜವಳಿ ಪಾರ್ಕ್ ಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿ ಕೇಂದ್ರಕ್ಕೆ ಕಳುಹಿಸಿದ್ದು, ತಾಂತ್ರಿಕ ಸಮಸ್ಯೆಗಳು ಇತ್ಯಾರ್ಥಗೊಂಡಿವೆ. ಶೀಘ್ರವೇ ಆರಂಭವಾಗಲಿದೆ.
1500 ಕೋಟಿ ರು. ವೆಚ್ಚದಲ್ಲಿ ಜಿಲ್ಲೆಗೆ 71ಕೀಮಿ ಉದ್ದದ ಭಾರತ ಮಾಲಾ ಯೋಜನೆಯಡಿ ಸೂರತ್-ಚೆನೈ ಹೈವೇ ಕಾರಿಡಾರ್ ರಸ್ತೆಯ ಕೆಲಸ ಶುರುವಾಗಿದೆ. 110 ಗ್ರಾಮಗಳಿಗೆ 24/7 ಶುದ್ಧ ಕುಡಿವ ನೀರಿನ ಸೌಲಭ್ಯ, ಬೆಣ್ಣೆತೋರಾ, ಬೆಡಸೂರ ಕೆಲಸಗಳು ನಡೆಯುತ್ತಿವೆ ಎಂದರು.ಈ ವೇಳೆ ಶಾಸಕರಾದ ಬಸವರಾಜ ಮತ್ತಿಮಡು, ಅವಿನಾಶ್ ಜಾಧವ್, ಮೇಯರ್ ವಿಶಾಲ್ ದರ್ಗಿ, ಉಪ ಮೇಯರ್ ಶಿವಾನಂದ್ ಪಿಸ್ತಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಚೇತನ್.ಆರ್, ಎಸ್ಪಿ ಅಕ್ಷಯ್ ಹಾಕೆ, ಪಾಲಿಕೆ ಆಯುಕ್ತ ಭುವನೇಶ್ ದೇವಿದಾಸ್ ಪಾಟೀಲ್, ಸೊಲ್ಲಾಪುರ್ ರೈಲ್ವೆ ವಿಭಾಗದ ವ್ಯವಸ್ಥಾಪಕ ನೀರಜ್ ಕುಮಾರ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಬಾಲರಾಜ್ ಗುತ್ತೇದಾರ್, ಗುವಿವಿ ಕುಲಪತಿ ದಯಾನಂದ್ ಅಗಸರ, ಸಿಂಡಿಕೇಟ್ ಸದಸ್ಯ ರಾಘವೇಂದ್ರ ರಟಕಲ್ ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))