ಸಾರಾಂಶ
ಲಕ್ಷ್ಮೇಶ್ವರ: ಮುಂಗಾರು ಮಳೆಯ ಅಬ್ಬರ ತಾಲೂಕಿನ ಅನೇಕ ಕಡೆಗಳಲ್ಲಿ ಅವಾಂತರ ಸೃಷ್ಟಿ ಮಾಡಿದ್ದು, ಅನೇಕ ಗ್ರಾಮಗಳ ಭಾನುವಾರ ಸಂಜೆ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ಅನೇಕ ಅನಾಹುತಗಳು ಉಂಟಾಗಿವೆ. ತಾಲೂಕಿನ ಹಲವು ಗ್ರಾಮಸ್ಥರು ಮಳೆಯ ಅಬ್ಬರಕ್ಕೆ ಪರದಾಡುವಂತಾಗಿದೆ.ತಾಲೂಕಿನ ದೊಡ್ಡೂರು, ಉಂಡೇನಹಳ್ಳಿ, ಸೂರಣಗಿ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಸುರಿದ ರಕ್ಕಸ ಮಳೆ ಗ್ರಾಮದಲ್ಲಿ ಭಾರಿ ಅವಾಂತರ ಸೃಷ್ಟಿಸಿದೆ. ಜೋರು ಗಾಳಿಗೆ ಮನೆಗಳ ಛಾವಣಿಗೆ ಹೊದಿಸಿದ್ದ ತಗಡಿನ ಶೀಟ್‌ಗಳು ಹಾರಿ ಹೋಗಿದ್ದು, ಮನೆಯಲ್ಲಿ ನೀರು ತುಂಬಿಕೊಂಡು ಪರದಾಡುವಂತಾಗಿದೆ. ಇದೇ ಗ್ರಾಮದಲ್ಲಿ ಕೆಲ ಮನೆಗಳ ಮೇಲೆ ಗಿಡಗಳು ಉರುಳಿ ಬಿದ್ದು ಮನೆಗಳು ಜಖಂ ಆಗಿರುವ ಘಟನೆ ನಡೆದಿದೆ. ಹಲವು ಮನೆಗಳು ಸಂಪೂರ್ಣ ನೆಲಕಚ್ಚಿದ್ದು, ಇಡೀ ರಾತ್ರಿ ಜನರು ನಿದ್ದೆಯಿಲ್ಲದೆ ಬೇರೆಯವರ ಮನೆಯಲ್ಲಿ ಆಶ್ರಯ ಪಡೆಯುವಂತಾಗಿದ್ದು ದುರಂತಕ್ಕೆ ಸಾಕ್ಷಿಯಾಗಿದೆ. ಮಳೆಯ ಅಬ್ಬರಕ್ಕೆ ಜನತೆ ಬೆಚ್ಚಿಬೀಳುವಂತಾಗಿದೆ. ಗ್ರಾಮದ ನಿಂಗಪ್ಪ ನೀಲಪ್ಪ ರಗಟಿ ಅವರ ಗಿರಣಿ ಮನೆ, ಪರಸಪ್ಪ ಚನಬಸಪ್ಪ ಚಿಂಚಲಿ, ಲಕ್ಷ್ಮವ್ವ ಕುರಿ, ಅನಸವ್ವ ಯಲ್ಲಪ್ಪ ಕೊಂಚಿಗೇರಿ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ದೊಡ್ಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಂಡೇನಹಳ್ಳಿ, ಮುನಿಯನ ತಾಂಡಾ, ಹರದಗಟ್ಟಿ ಗ್ರಾಮಗಳಲ್ಲಿ ಮಳೆ ಅನಾಹುತ ಸೃಷ್ಟಿ ಮಾಡಿದೆ. ಗುಡುಗು ಸಹಿತ ಬಿರುಸು ಗಾಳಿಗೆ ಹತ್ತಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಶೇಖಪ್ಪ ಬಳಗಲಿ ಅವರ ಮನೆಯ ಮೇಲೆ ಗಿಡವು ಮುರಿದು ಬಿದ್ದಿದ್ದು ಬಾರಿ ಅನಾಹುತ ತಪ್ಪಿದಂತಾಗಿದೆ. ಅದರಂತೆ ಸೂರಣಗಿ ಗ್ರಾಮದಲ್ಲೂ ಭಾರೀ ಮಳೆಯಾಗಿದೆ. ಗ್ರಾಮದ ಸೋಮಣ್ಣ ಭೀಮಪ್ಪ ಪೂಜಾರ ಎಂಬುವವರ ಎತ್ತಿಗೆ ಸಿಡಿಲು ಬಡಿದು ಎತ್ತು ಅಸು ನೀಗಿದ ಘಟನೆ ಜರುಗಿದೆ.ಮಳೆಯ ರಭಸಕ್ಕೆ ಅನೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಪರದಾಡಿದ ಘಟನೆ ನಡೆದಿದೆ. ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಜನತೆಗೆ ಮಳೆ ತಂಪು ನೀಡಿದ್ದು. ಗುಡುಗು ಮಿಶ್ರಿತ ಮಳೆಯು ಸುರಿದ ಅಬ್ಬರಕ್ಕೆ ಬಹುತೇಕ ಹೊಲಗಳಲ್ಲಿನ ಬದವುಗಳು ಕಿತ್ತು ಹೋಗಿವೆ ಎನ್ನಲಾಗಿದೆ. ಸೂರಣಗಿ, ಹರದಗಟ್ಟಿ, ದೊಡ್ಡೂರು, ಉಂಡೆನಹಳ್ಳಿ, ಆದರಳ್ಳಿ, ಅಕ್ಕಿಗುಂದ, ಗೊಜನೂರು ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆಯು ಸುರಿದಿದೆ ಎಂದು ತಿಳಿದು ಬಂದಿದೆ. ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನತೆಗೆ ಮಳೆ ತಂಪೆರೆಯು ಜೊತೆಗೆ ಅನೇಕ ಅನಾಹುತಗಳನ್ನು ಸೃಷ್ಟಿ ಮಾಡಿರುವ ಘಟನೆ ನಡೆದಿದೆ.