ಸಾರಾಂಶ
ಮುಳಗುಂದ: ಪ್ರವಚನ ಬದುಕಿಗೆ ಬೆಳಕು ನೀಡುತ್ತದೆ. ಉತ್ತರ ಕರ್ನಾಟಕದ ಜನರಲ್ಲಿ ಭಕ್ತಿ ಭಾವ ಹೆಚ್ಚು ಎದ್ದು ಕಾಣುತ್ತದೆ. ಈ ಭಕ್ತಿ ಭಾವಕ್ಕೆ ಅವರು ಸಾಕಷ್ಟು ದುಡ್ಡು ಹಾಕಿ ಇಂತಹ ಕಾರ್ಯಕ್ರಮ ನಡೆಸುತ್ತಾರೆ ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ ಹೇಳಿದರು. ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ವಾದಿರಾಜ ರಾಯ್ಕರ ಅವರು ಆಯೋಜಿಸಲಾದ ಸಂಕಷ್ಟಹರ ಗಣಪತಿ ವ್ರತದ ಉದ್ಯಾಪನಾ ಮಹಾಯಾಗದ ಉದ್ಘಾಟನಾ ನೆರವೇರಿಸಿ ಮಾತನಾಡಿ, ಮಹಾಭಾರತ ರಾಮಾಯಣ ಗ್ರಂಥಗಳು ಬದುಕಿಗೆ ಮಾರ್ಗದರ್ಶನ ನೀಡುವ ಮಹಾನ ಗ್ರಂಥಗಳು. ಅವುಗಳ ಆಧಾರಿತ ಪ್ರವಚನ ನಡೆಸಿ ಡಾ. ಪಾವಗಡ ಪ್ರಕಾಶರಾವ್ ಅವರು ಉನ್ನತ ಮಟ್ಟಕ್ಕೇರಿದ ಮಹಾಜ್ಞಾನಿ, ಅವರು ಪ್ರಚಲಿತಪಡಿಸುವ ಪ್ರವಚನ ಅನುಕರಣೀಯವಾದದ್ದು ಎಂದರು.ನೀಲಗುಂದದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ಮಾತನಾಡಿ, ಜ್ಞಾನ ಸಾಧನೆ ಪರಿಶ್ರಮದಿಂದ ಬರುತ್ತದೆ. ಅದೊಂದು ತಪಸ್ಸು, ಅವರ ತಪಸ್ಸಿನ ಫಲ ನಮಗೂ ಪ್ರಾಪ್ತಿಯಾಗುತ್ತದೆ. ಎಲ್ಲ ಧರ್ಮಗಳು ಹಾಗೂ ಗ್ರಂಥಗಳ ಅಧ್ಯಯನ ಮಾಡಿದ ಮಹಾಜ್ಞಾನಿ ಡಾ. ಪಾವಗಡ ಪ್ರಕಾಶರಾವ್ ಅವರು ರಾಯ್ಕರ ಕುಟುಂಬ ಜ್ಞಾನ ಹಂಚುವ ಕೆಲಸಕ್ಕೆ ಕೈ ಹಾಕಿರುವದು ಶ್ಲಾಘನೀಯ. ಉತ್ತಮ ವ್ಯಕ್ತಿಯ ಆಗಮನದಿಂದ ಪಟ್ಟಣದ ಜನತೆಗೆ ಜ್ಞಾನ ಸವಿಯುವ ಅವಕಾಶ ಸಿಕ್ಕಿದೆ ಸದುಪಯೋಗಪಡಿಸಿಕೊಳ್ಳಿ ಎಂದರು.
ಧಾರವಾಡ ಮುರುಘಾಮಠ ಹಾಗೂ ಮುಳಗುಂದ ಗವಿಮಠದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನಾಡು ಕಂಡ ಅದ್ವಿತೀಯ ಪ್ರವಚನಕಾರ. ಇಂದು ಮಹಾಕಾವ್ಯಗಳನ್ನು ಓದುವವರೇ ಇಲ್ಲ. ಒಂದು ಕಾಲದಲ್ಲಾದ ಸೋಮನಾಥ, ಕುಮಾರವ್ಯಾಸ, ಅಕ್ಕಮಹಾದೇವಿ ಹೀಗೆ ಅವರೆಲ್ಲ ನಮ್ಮ ಬದುಕಿಗೆ ದಾರಿ ತೋರಿದವರು. ಅಧ್ಯಾತ್ಮ ಪ್ರವಚನ ಎಂದರೆ ಸತ್ಯದ ಅರಿವು. ಮುನಿಗಳು ವಾಸಿಸಿದ ಈ ಮುನಿಪುರದಲ್ಲಿ ಅದೇ ಸಂಸ್ಕಾರ ಮುಂದುವರೆದಿದೆ. ಮನುಷ್ಯನಲ್ಲಿ ಜ್ಞಾನವಿದ್ದಾಗ ಬದುಕು ಬಂಗಾರ. ಅಧ್ಯಾತ್ಮದಲ್ಲಿ ನಿಮ್ಮನ್ನೂ ತೊಡಗಿಸಿಕೊಳ್ಳಿ ಎಂದರು. ಈ ವೇಳೆ ವಾಯ್.ಎ.ದಂತಿ, ಡಾ. ಎಸ್.ಸಿ. ಚವಡಿ, ಗುರಣ್ಣ ಬಳಗಾನೂರ, ಎಂ.ಡಿ. ಬಟ್ಟೂರ ಇತರರು ಇದ್ದರು. ಸಿದ್ದು.ವೈ.ಕೆ. ಸ್ವಾಗತಿಸಿದರು. ಪ್ರಾ. ಯಳವತ್ತಿ ನಿರೂಪಿಸಿದರು.