ನದಿ ಪಾತ್ರದ ಜನತೆ ಸುರಕ್ಷಿತ ಸ್ಥಳಕ್ಕೆ ತೆರಳಿ

| Published : Aug 01 2024, 12:15 AM IST

ಸಾರಾಂಶ

ಬುಧವಾರ ಬೆಳಗ್ಗೆ ಹೆಚ್ಚುವರಿಯಾಗಿ 20 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗಿದೆ

ನರಗುಂದ: ಮಲಪ್ರಭಾ ನದಿ ಮೇಲ್ಭಾಗದ ಕಣಕುಂಬಿ, ಜಾಂಬೋಟಿ ಸೇರಿದಂತೆ ಇತರೆ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ 20 ಸಾವಿರ ಕ್ಯುಸೆಕ್‌ ಗಿಂತ ಅಧಿಕ ಪ್ರಮಾಣದ ನೀರು ನದಿಗೆ ನಿತ್ಯ ಬರುತ್ತಿದ್ದು, ಈಗಾಗಲೇ ನದಿಯಲ್ಲಿ 2076 ಅಡಿ ನೀರು ಸಂಗ್ರಹವಾಗಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಅವರು ಬುಧವಾರ ತಾಲೂಕಿನ ಮಲಪ್ರಭಾ ನದಿ ದಡದಲ್ಲಿನ ಲಕಮಾಪುರ, ಕೊಣ್ಣೂರ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಮಂಗಳವಾರ ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಲಪ್ರಭಾ ನದಿಯ ಒಳ ಹರಿವು ನೋಡಿಕೊಂಡು ಹಂತ ಹಂತವಾಗಿ ನೀರು ಬಿಡಬೇಕೆಂದು ತಿಳಿಸಿದ್ದೇನೆ. ನದಿಯಿಂದ 12 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದ್ದು, ಬುಧವಾರ ಬೆಳಗ್ಗೆ ಹೆಚ್ಚುವರಿಯಾಗಿ 20 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗಿದೆ. ನದಿ ದಡದಲ್ಲಿನ ಗ್ರಾಮಗಳ ಜನರು ಮುಂಜಾಗೃತಾ ಕ್ರಮ ವಹಿಸಬೇಕು ಎಂದರು.

ಲಕಮಾಪುರ, ಮೆಣಸಗಿ, ಹೊಳೆಆಲೂರ ಹಾಗೂ ಆಚಾರಕೊಪ್ಪ ಗ್ರಾಮಗಳಿಗೆ ತೆರಳಿ ಸುರಕ್ಷಿತವಾಗಿರುವಂತೆ ತಿಳಿಸಲಾಗಿದೆ. ಇದೇ ಸಂದರ್ಭದಲ್ಲಿ ಕೊಣ್ಣೂರ ಹಳೇ ನಿಲ್ದಾಣ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕೆಟ್ಟು ಹೋಗಿದ್ದಲ್ಲದೇ ಅಪಘಾತ ವಲಯ ಆಗಿದೆ ಎಂದು ಸಾರ್ವಜನಿಕರಿಂದ ಬಂದ ಆರೋಪದ ಹಿನ್ನೆಲೆಯಲ್ಲಿ ಶಾಸಕರು ಮೇಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ರಸ್ತೆ ಸರಿಪಡಿಸುವಂತೆ ಸೂಚಿಸಿದರು.

ಕೊಣ್ಣೂರ ಬಸ್ ನಿಲ್ದಾಣದಲ್ಲಿ ಕುಡಿವ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲದೇ ಹಾಳು ಬಿದ್ದಿದೆ. ಪ್ರವಾಹ ಬಂದರೆ ಬಸ್ ನಿಲ್ದಾಣದಲ್ಲಿ ನೀರು ನಿಲ್ಲುತ್ತದೆ. ಇಂತಹ ಅವ್ಯವಸ್ಥೆ ಸರಿಪಡಿಸಬೇಕೆಂದು ಗ್ರಾಪಂ ಸದಸ್ಯರು ಶಾಸಕರಲ್ಲಿ ಮನವಿ ಸಲ್ಲಿಸಿದರು.

ತಹಸೀಲ್ದಾರ್‌ ಶ್ರೀಶೈಲ ತಳವಾರ ಮಾತನಾಡಿ, ತಾಲೂಕಿನ ಮಲಪ್ರಭಾ ಹಾಗೂ ಬೆಣ್ಣಿಹಳ್ಳದ ದಡದಲ್ಲಿನ ಭೂಮಿಗಳಲ್ಲಿ ರೈತರು ಬಿತ್ತನೆ ಮಾಡಿರುವ ಹೆಸರು, ಸೂರ್ಯಕಾಂತಿ, ಹತ್ತಿ, ಮೆಕ್ಕೆಜೋಳ, ಇರುಳಿ ಸೇರಿದಂತೆ ಸಧ್ಯ ಬೆಳೆದು ನಿಂತಿರುವ ಬೆಳೆಗಳನ್ನು ಡ್ರೋಣ ಕ್ಯಾಮೇರಾ ಮೂಲಕ ಸಮೀಕ್ಷೆ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸಿದ್ದವ್ವ ಕಳಸನ್ನವರ, ಉಮೇಶಗೌಡ ಪಾಟೀಲ, ಕೊಟ್ರೇಶ ಕೊಟ್ರಶೆಟ್ಟರ್‌, ನಿಂಗಪ್ಪ ಸೋಮಾಪೂರ, ಬಿ.ಬಿ.ಐನಾಪೂರ, ನೇತಾಜಿಗೌಡ ಕೆಂಪನಗೌಡ್ರ, ಸಾಲಿಗೌಡ್ರ, ಪರಪ್ಪ ಸಾಹುಕಾರ, ಶಿವಾನಂದ ಮುತ್ತವಾಡ, ತಾಪಂ ಇಓ ಎಸ್.ಕೆ.ಇನಾಮದಾರ, ಸಂತೋಷ ಹಂಚಿನಾಳ, ಸಿದ್ದೇಶ ಹೂಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.