ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಗ, ದ್ವೇಷ ಮರೆತು ಗ್ರಾಮದಲ್ಲಿ ಪರಸ್ಪರರು ಒಂದಾಗಿ ಬಾಳಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.ತಮ್ಮ ಸ್ವಗ್ರಾಮ, ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಸೋಮವಾರ ರಾತ್ರಿ ಏರ್ಪಡಿಸಿದ್ದ ಧರ್ಮರಾಯಸ್ವಾಮಿಯ ಕರಗಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮದಲ್ಲಿ ಯಾರಿಗೂ ಧರ್ಮ,ಜಾತಿ,ಕೀಳು, ಮೇಲು ಎಂಬ ಭಾವನೆ ಬರಬಾರದು, ಎಲ್ಲರೂ ಒಂದೇ ಎಂಬ ಬ್ರಾತೃತ್ವದಲ್ಲಿ ಬಾಳಬೇಕೆಂದು ಹಿರಿಯರು ಜಾತ್ರೆ ,ಕರಗ, ಮದುವೆ, ಮುಂಜಿ, ಹಬ್ಬ, ಹರಿದಿನಗಳ ಆಚರಿಸುತ್ತಿದ್ದರೆಂದು ಹೇಳಿದರು.
ಹಿಂದೆ ಗ್ರಾಮಗಳಲ್ಲಿ ಯಾವುದೇ ಕೆಲಸವನ್ನಾದರೂ ಎಲ್ಲರೂ ಒಗ್ಗೂಡಿ ಮಾಡುತ್ತಿದ್ದರು. ರಾಜಕಾರಣ ಬಂದ ನಂತರ ಕೆಲ ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಮನೆ, ಮನಗಳಲ್ಲಿ ಪರಸ್ಪರ ದ್ವೇಷದ ವಿಷಬೀಜ ಬಿತ್ತಿದ್ದು, ಇದರಿಂದ ಅಣ್ಣ - ತಮ್ಮಂದಿರು,ಅಕ್ಕ - ತಂಗಿಯರು, ತಂದೆ - ಮಕ್ಕಳು ಅಲ್ಲದೇ ಸತಿ - ಪತಿಗಳಾದವರೂ ಬೇರೆಯಾಗುತ್ತಿದ್ದಾರೆ ಹಾಗೂ ಒಬ್ಬರನ್ನೊಬ್ಬರು ಕೊಲೆ ಮಾಡುವವರೆಗೆ ಹೋಗಿದ್ದಾರೆಂದು ವಿಷಾಧಿಸಿದರು.ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನ ಪ್ರಸಿದ್ಧ ನುಡಿಯು ಸಾರ್ವಕಾಲಿಕ ಮೌಲ್ಯವೇ ಆಗಿದೆ. ಧರ್ಮಕ್ಕೊಂದು ಕಾವ್ಯ, ರಾಜಕಾರಣಕ್ಕೊಂದು ಕಾವ್ಯವನ್ನು ಕಟ್ಟಿಕೊಟ್ಟ ಪಂಪ, ಧರ್ಮ ಮತ್ತು ರಾಜಕಾರಣಗಳನ್ನು ಬೆರೆಸಬಾರದೆಂಬ ಆದರ್ಶವನ್ನು ತನ್ನ ಕಾವ್ಯಾಭಿವ್ಯಕ್ತಿಯ ವಿಂಗಡನೆಯ ವಿಧಾನದಲ್ಲೇ ಅನುಷ್ಠಾನಕ್ಕೆ ತಂದಿದ್ದಾನೆ, ಧರ್ಮರಾಯನ ಕರಗದಿಂದ ಕ್ಷೇತ್ರ, ನಾಡು ಮತ್ತು ದೇಶದಲ್ಲಿ ಉತ್ತಮ ಮಳೆ - ಬೆಳೆಯಾಗಲಿ, ಶಾಂತಿ, ನೆಮ್ಮದಿ ನೆಲೆಸಲಿ ಎಂದು ಹೇಳಿದರು.
ರಾತ್ರಿ 10 ಗಂಟೆಗೆ ಕರಗದ ಪೂಜಾರಿ ಬಾಲಾಜಿಯವರು ದೇವಾಲಯದಲ್ಲಿ ಕರಗವನ್ನು ಹೊತ್ತು ವೀರಕುಮಾರರೊಂದಿಗೆ ಸಾಗಿ ಬಂದರು. ಸಂತೆ ಮೈದಾನದಲ್ಲಿ ವಾದ್ಯಗೋಷ್ಠಿಯು ಸೇರಿದ್ದ ಜನಸಮೂಹವನ್ನು ರಂಜಿಸಿತು. ಕೆಂಪು ವಸ್ತ್ರಗಳನ್ನು ಧರಿಸಿಕೊಂಡಿದ್ದ ವೀರಕುಮಾರರು, ಕೈಗಳಲ್ಲಿ ಕತ್ತಿಗಳನ್ನು ಹಿಡಿದು ಅಲಗು ಸೇವೆ ನಡೆಸಿಕೊಟ್ಟರು.ಗ್ರಾಮದ ಪ್ರಮುಖ ಬೀದಿಗಳಿಗೆ ತೆರಳಿದ ಕರಗಕ್ಕೆ ಜನರು ರಸ್ತೆಗಳಲ್ಲಿ ನೀರು ಹಾಕಿ ರಂಗೋಲಿ ಬಿಡಿಸಿ, ಭಕ್ತಿಯಿಂದ ಪೂಜೆ ಸಲ್ಲಿಸಿದರು. ಮಂಗಳವಾರ ಬೆಳಿಗ್ಗೆ 11.30 ರ ಸುಮಾರಿಗೆ ಪುನಃ ದೇವಾಲಯಕ್ಕೆ ಕರಗವನ್ನು ವಾಪಸ್ ತಂದರು.
ಕರಗ ಮಹೋತ್ಸವದ ಅಂಗವಾಗಿ ಗ್ರಾಮದ ಎಲ್ಲ ದೇವಾಲಯಗಳು, ಪ್ರಮುಖ ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಹೂವಿನ ಕರಗ ಮಹೋತ್ಸವದ ಅಂಗವಾಗಿ ವಾದ್ಯಗೋಷ್ಠಿಯನ್ನು ಆಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಸಂದ್ಕಗಿರಿ ಸ್ವಾಮೀಜಿ, ಮುಖಂಡರಾದ ಎಸ್.ಪಿ.ಶ್ರೀನಿವಾಸ್, ಜೋಳದ ರಾಮಕೃಷ್ಣ, ವಿಜಯ್ ಕುಮಾರ್,ರಾಮಿರೆಡ್ಡಿ, ಕುಪೇಂದ್ರ ಮಂಡಿಕಲ್ಲು, ಆರೂರು ಜಗದೀಶ್, ಮುನಿರೆಡ್ಡಿ, ಜಯರಾಜು, ರಾಮಸ್ವಾಮಿ, ವೀರಯ್ಯ, ಊರಿನ ಪ್ರಮುಖ ಮುಖಂಡರು ಹಾಗೂ ಮತ್ತಿತರರು ಇದ್ದರು.