ಬಿಜೆಪಿ ಸೋಲಿಸಿದ್ದಕ್ಕೆ ಜನತೆಗೆ ಪಶ್ಚಾತ್ತಾಪ: ಶ್ರೀರಾಮುಲು

| Published : Feb 13 2024, 12:46 AM IST

ಸಾರಾಂಶ

ರೈತರಿಗೆ 7 ತಾಸು ಸತತ ವಿದ್ಯುತ್‌ ಪೂರೈಕೆ ಮಾಡುತ್ತೇವೆ ಎಂದು ಭರವಸೆ ಹುಟ್ಟಿಸಿದ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ 4 ತಾಸು ಸತತ ವಿದ್ಯುತ್‌ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ.

ಕೊಟ್ಟೂರು: ರಾಜ್ಯದ ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದೆವು ಎಂದು ಪಶ್ಚಾತ್ತಾಪ ಪಡುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಮತ್ತೆ ಈ ತಪ್ಪು ಪುನರಾವರ್ತನೆಯಾಗಬಾರದೆಂಬ ಕಾರಣಕ್ಕಾಗಿ ರಾಜ್ಯದ 28 ಸ್ಥಾನಗಳಲ್ಲಿ ಗೆಲುವು ತಂದುಕೊಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ಪಟ್ಟಣದ ಬಾಲಾಜಿ ಕನ್ವೆಷನ್‌ ಹಾಲ್‌ನಲ್ಲಿ ದಿ. ಕೆ.ಎಸ್. ಈಶ್ವರಗೌಡ್ರು ಸ್ಮಾರಕ ಟ್ರಸ್ಟ್‌, ಬಿಜೆಪಿ ಘಟಕ ಹಮ್ಮಿಕೊಂಡಿದ್ದ ವಿಜಯನಗರ ಬಿಜೆಪಿ ಜಿಲ್ಲಾಧ್ಯಕ್ಷ ಪಿ. ಚನ್ನಬಸವನಗೌಡರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಜನತೆಗೆ ಉಚಿತ ಕೊಡುಗೆ ನೀಡುತ್ತೇವೆ ಎಂದು ಜಾರಿಗೆ ತಂದ ಗ್ಯಾರಂಟಿಗಳು ಸಂಪೂರ್ಣವಾಗಿ ದಾರಿ ತಪ್ಪಿವೆ. ರೈತರಿಗೆ 7 ತಾಸು ಸತತ ವಿದ್ಯುತ್‌ ಪೂರೈಕೆ ಮಾಡುತ್ತೇವೆ ಎಂದು ಭರವಸೆ ಹುಟ್ಟಿಸಿದ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ 4 ತಾಸು ಸತತ ವಿದ್ಯುತ್‌ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.ಸಂಸದ ವೈ. ದೇವೇಂದ್ರಪ್ಪ ಮಾತನಾಡಿ, ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಯಾರನ್ನೇ ಅಭ್ಯರ್ಥಿಯಾಗಿ ವರಿಷ್ಠರು ಕಣಕ್ಕಿಳಿಸಿದರೂ ಅವರ ಪರ ಪ್ರತಿಯೊಬ್ಬರೂ ಪ್ರಚಾರ ಕೈಗೊಂಡು ಗೆಲ್ಲಿಸುವ ದೀಕ್ಷೆ ತೊಟ್ಟಿದ್ದೇವೆ ಎಂದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ರಾಜ್ಯದ ಕಾಂಗ್ರೆಸ್‌ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಅನ್ನಭಾಗ್ಯ, ಶಕ್ತಿ ಯೋಜನೆ ಮತ್ತಿತರ ಯೋಜನೆಗಳ ಜಾರಿಯಿಂದಾಗಿ ಹಲವು ರೀತಿಯ ತೊಂದರೆಗಳನ್ನು ಜನತೆ ಎದುರಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಜನತೆ ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ ಎಂದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಂಗಾರು ಹನುಮಂತು, ಪಿ. ಚನ್ನಬಸವನಗೌಡ, ಬಲ್ಲಾಹುಣಸಿ ರಾಮಣ್ಣ, ಕೆ.ಎಸ್. ಈಶ್ವರಗೌಡ, ಬಿ.ಸಿ. ಮಹಾಬಲ್ಲೇಶ್ವರ ಮತ್ತಿತರರು ಮಾತನಾಡಿದರು.

ಮುಖಂಡರಾದ ಪಿ.ಎಚ್. ಪಂಪಣ್ಣ, ನಂಜನಗೌಡ, ಬಣವಿಕಲ್ಲ ನಾಗರಾಜ, ವೀರೇಶ್ ಸ್ವಾಮಿ, ಕೆ.ಎಸ್. ಸ್ವರೂಪಾನಂದಗೌಡ, ಕಡ್ಲಿ ವೀರಣ್ಣ, ರಾಮನಾಯ್ಕ, ಸೂರ್ಯಪಾಪಣ್ಣ, ಬೆಣಕಲ್ಲ ಪ್ರಕಾಶ್‌, ಎಚ್. ರೇವಣ್ಣ, ದೀಪಕ್‌ ಸಿಂಗ್‌, ಜಿ. ಸಿದ್ದಯ್ಯ, ಮರಬದ ಕೊಟ್ರೇಶ್‌, ಕೆಂಗರಾಜ, ಜಯಪ್ರಕಾಶ್, ನಾಗರಾಜಗೌಡ, ರಾಜೇಶ್‌ ಕಾರ್ವ ಇದ್ದರು. ಕೊಟ್ಟೂರು ಬಿಜೆಪಿ ಘಟಕದ ಅಧ್ಯಕ್ಷ ಭರಮನಗೌಡ ಪಾಟೀಲ್‌ ಸ್ವಾಗತಿಸಿದರು. ಅರವಿಂದ ಬಸಾಪುರ ನಿರೂಪಿಸಿದರು.