ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜನಪದರ ಕೊಡುಗೆ ಅಪಾರವಿದೆ ಎಂದು ಸಾಹಿತಿ, ಸಂಸ್ಕೃತ ವಿದ್ವಾನ್, ಕಗ್ಗದ ಪರಿಣಿತ ಜಿ.ಎಸ್.ನಟೇಶ್ ಹೇಳಿದರು.ಶಿವಮೊಗ್ಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡ ಬಳಗ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕ್ಷೇತ್ರಿಯ ಕಾರ್ಯಾಲಯ ವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅನಕ್ಷರಸ್ಥರಾದ ಜಾನಪದರು ಸಾಮಾಜಿಕ ಪ್ರಜ್ಞೆಯುಳ್ಳ ಸಾಹಿತ್ಯ ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಪ್ರತಿಯೊಬ್ಬರು ಮನೆಗಳಲ್ಲಿ ಕನ್ನಡವನ್ನು ಮಾತನಾಡುವ ಮೂಲಕ ಹಾಗೂ ಮಕ್ಕಳಿಗೆ ಕನ್ನಡ ಹೇಳಿಕೊಡುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕು. ಕನ್ನಡವನ್ನು ಓದಿ, ಬರೆದು, ವಿದ್ವಾತ್ ಪಡೆದವರೆಲ್ಲ ಕನ್ಮಡವನ್ನು ಬೆಳೆಸಿಲ್ಲ. ಅಕ್ಷರ ಜ್ಞಾನವೇ ಇಲ್ಲದವರು ಕನ್ನಡ ಉಳಿಸಿ ಬೆಳೆಸಿದವರು ಎಂದರೆ ತಪ್ಪಾಗಲಾರದು ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಯುವ ಜನರಲ್ಲಿ ಓದುವ ಮತ್ತು ಬರೆಯುವ ಹವ್ಯಾಸ ಕಡಿಮೆಯಾಗಿ, ಮೊಬೈಲ್, ಇಂಟರ್‌ನೆಟ್ ಸರ್ಚಿಂಗ್, ಚಾಟಿಂಗ್‌ನಲ್ಲಿ ಅತೀ ಹೆಚ್ಚಿನ ಸಮಯ ವ್ಯರ್ತ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇಂದಿನ ದಿನಮಾನಗಳಲ್ಲಿ ನಾವೆಲ್ಲರೂ ಯಂತ್ರಗಳಿಗೆ ಬಲಿಯಾಗಿದ್ದೇವೆ ಹಾಗಾಗೀ ಸಾಹಿತ್ಯ ಕುಂದುಗೊಳ್ಳುತ್ತಿದೆ ಎಂದರು.
ಸಾಹಿತಿ ಹಾಗೂ ಮನೋವೈದ್ಯ ವಿರೂಪಾಕ್ಷ ದೇವರಮನೆ ಮಾತನಾಡಿ, ಮನೆಗಳಲ್ಲಿ ಪ್ರತಿನಿತ್ಯ ನಮ್ಮ ದಿನಚರಿಯಲ್ಲಿ ಕನ್ನಡ ಮಾತನಾಡುವವರೇ ನಿಜವಾದ ಕನ್ನಡವನ್ನು ಉಳಿಸಿ ಬೆಳೆಸುವವರು. ಅನ್ಯ ಭಾಷೆಗಳ ನಡುವೆ ಕನ್ನಡ ಮಾತನಾಡಲು ಮುಜುಗರ ಬೇಡ. ಬೇರೆ ಭಾಷೆಗಳ ವ್ಯಾಮೋಹದಿಂದ, ತೋರಿಕೆಗಾಗಿ ಇಂದು ಮನೆಗಳಲ್ಲಿ ಕನ್ನಡ ಬಳಸದೇ ಇರುವುದರಿಂದ ಮುಂದಿನ ಪೀಳಿಗೆಗೆ ಸಾಕಷ್ಟು ತೊಂದರೆಯಾಗುತ್ತದೆ ಹಾಗೂ ಭಾಷೆ ಮೇಲಿನ ಕಾಳಜಿ ಕಡಿಮೆಯಾಗುತ್ತಿದೆ ಎಂದರು.ಭಾಷೆ ಎಂದರೆ ಕೇಲವ ಸಾಹಿತ್ಯ ಚಟುವಟಿಕೆಗಳಲ್ಲ. ಯುವ ಜನರು ಕನ್ನಡ ಭಾಷೆಯಿಂದ ಹಿಂದುಳಿದರೆ ಮುಂದಿನ ದಿನಮಾನಗಳಲ್ಲಿ ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗಳಲ್ಲಿ ಆಗುವ ತೊಂದರೆಗಳನ್ನು ಎಚ್ಚರಿಸಲು ಇಂತಹ ಕಾರ್ಯಕ್ರಮಗಳನ್ನು ಸಹಕಾರಿ ಯೂನಿಯನ್ ಬ್ಯಾಂಕ್ ನಿಂದ ಆಯೋಜಿಸಿರುವ ಈ ಕನ್ನಡ ರಾಜೋತ್ಸವ ಕಾರ್ಯಕ್ರಮ ಬರೀ ತೋರಿಕೆಗಲ್ಲದೇ ಭಾಷೆಯ ಮೇಲಿನ ಅಭಿಮಾನ ತೋರುತ್ತಿದೆ ಎಂದರು. ಯೂನಿಯನ್ ಬ್ಯಾಂಕ್‌ನ ಕ್ಷೇತ್ರಿಯ ಮುಖ್ಯಸ್ಥ ವಿಷು ಕಮಾರ್ ಮಾತನಾಡಿ, ಇಂಗ್ಲಿಷ್ ಭಾಷೆ ಅನಿವಾರ್ಯವಾದರೂ, ಕನ್ನಡದ ನೆಲದಲ್ಲಿ ಕನ್ನಡ ಸಾಹಿತ್ಯ, ಭಾಷೆಗೆ ಅಗ್ರ ಸ್ಥಾನ ದೊರೆಯಬೇಕು. ಕನ್ನಡ ಭಾಷೆ, ನಾಡು-ನುಡಿ-ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕನ್ನಡಿಗರು ಜವಾಬ್ದಾರಿ ಹೊತ್ತುಕೊಳ್ಳಬೇಕು. ಅನೇಕ ಮಹನೀಯರು ಕನ್ನಡದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವುಗಳನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು .
ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡೆಪ್ಯೂಟಿ ರೀಜನಲ್ ಹೆಡ್ ಮುರುಳಿಧರ, ರವಿಚಂದ್ರನ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಮುಖ್ಯಸ್ಥರು ಸಿಬ್ಬಂದಿ ಉಪಸ್ಥಿತರಿದ್ದರು.