ದೌರ್ಜನ್ಯ ತಡೆಯಲು ಜನತೆಯ ಸಹಕಾರ ಅಗತ್ಯ

| Published : Oct 29 2024, 01:01 AM IST

ಸಾರಾಂಶ

ಕಾನೂನಿನ ಅರಿವಿಲ್ಲದೆ ಅನೇಕ ಅಪರಾಧಗಳು ನಡೆಯುತ್ತಿವೆ. ಕಾನೂನಿನ ಅರಿವನ್ನು ಹೆಚ್ಚಿಗೆ ಪಡೆದುಕೊಂಡಲ್ಲಿ ಅಪರಾಧಗಳನ್ನ ತಡೆಯಲು ಸಹಕಾರಿಯಾಗುತ್ತದೆ. ದೌರ್ಜನ್ಯ ತಡೆಯಲು ಸರ್ಕಾರ ರೂಪಿಸಿರುವ ನಿಯಮಗಳ ಬಗ್ಗೆ ಪ್ರತಿಯೊಬ್ಬರು ತಿಳಿವಳಿಕೆ ಬೆಳೆಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ಸರ್ಕಾರದೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಹಾಗೆ ಮಾಡಿದರೆ ಮಾತ್ರ ದೇಶದಲ್ಲಿ ಎಲ್ಲಾ ಜಾತಿ ಜನಾಂಗಗಳು ಸಮಾನತೆಯಿಂದ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಅಂಜಲಿದೇವಿ ಹೇಳಿದರು. ತಾಲೂಕಿನ ದೊಡ್ಡ ಚಿನ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಸರ್ವೋದಯ ಗ್ರಾಮೀಣಾಭಿವೃದ್ಧಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಘಟನೆಯ ಸಹಯೋಗದಲ್ಲಿ ನಡೆದ 2024-25 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ನಿಯಂತ್ರಣ ಕಾಯ್ದೆಯ ಬಗ್ಗೆ ನಡೆದ ವಿಚಾರಗೋಷ್ಠಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೌರ್ಜನ್ಯ ತಡೆಗಟ್ಟಲು ಕ್ರಮ

ದೌರ್ಜನ್ಯ ತಡೆಯಲು ಸರ್ಕಾರ ರೂಪಿಸಿರುವ ನಿಯಮಗಳ ಬಗ್ಗೆ ಪ್ರತಿಯೊಬ್ಬರು ತಿಳಿವಳಿಕೆ ಬೆಳೆಸಿಕೊಳ್ಳಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ದೌರ್ಜನ್ಯಕ್ಕೆ ಒಳಗಾದವರಿಗೆ ಸರ್ಕಾರ ಹಂತ ಹಂತವಾಗಿ ಪರಿಹಾರವನ್ನು ನೀಡುತ್ತದೆ ಮತ್ತು ಸರ್ಕಾರಿ ಸೇವೆಯನ್ನು ಸಹ ಮಾಡಲು ಅವರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.

ಕಾನೂನು ಅರಿವು ಅಗತ್ಯ

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಗಾರಪೇಟೆ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ರಾಜಣ್ಣ ಮಾತನಾಡಿ, ಕಾನೂನಿನ ಅರಿವಿಲ್ಲದೆ ಅನೇಕ ಅಪರಾಧಗಳು ನಡೆಯುತ್ತಿವೆ. ಕಾನೂನಿನ ಅರಿವನ್ನು ಹೆಚ್ಚಿಗೆ ಪಡೆದುಕೊಂಡಲ್ಲಿ ಅಪರಾಧಗಳನ್ನ ತಡೆಯಲು ಸಹಕಾರಿಯಾಗುತ್ತದೆ ಎಂದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘಟನೆಗಳ ಮುಖಂಡರಾದ ಸೂಲಿಕುಂಟೆ ಆನಂದ್, ರಮೇಶ್, ಹುಣಸನಹಳ್ಳಿ ವೆಂಕಟೇಶ್ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಬ್ರಮಣಿ ಮತ್ತಿತರರು ಇದ್ದರು.