ಸಾರಾಂಶ
ಶಿವಮೊಗ್ಗ: ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಕೇವಲ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಅದಕ್ಕೆ ಜನ ಸಾಮಾನ್ಯರ ಸಹಕಾರ ಕೂಡ ಅತಿ ಮುಖ್ಯವಾಗಿ ಬೇಕಾಗಿದ್ದು, ನಾವೆಲ್ಲರೂ ವನ್ಯಜೀವಿ ಸಂಪತ್ತನ್ನು ರಕ್ಷಣೆ ಮಾಡುವ ಮನೋಭಾವ ಬೆಳಿಸಿಕೊಳ್ಳೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಕರೆ ನೀಡಿದರು.
ನಗರದ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಕಚೇರಿಯ ಶ್ರೀಗಂಧ ಕೋಠಿ ಆವರಣದಲ್ಲಿ ಕರ್ನಾಟಕ ಅರಣ್ಯ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ-2025 ಕಾರ್ಯಕ್ರಮದಲ್ಲಿ ನಾಡಿನ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಪ್ರಾಣತ್ಯಾಗ ಮಾಡಿದ ಅರಣ್ಯ ಇಲಾಖೆಯ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಮಾಡುವ ಅಧಿಕಾರಿಗಳಿಗೆ ಜನರಿಂದ ಬೆಂಬಲ ಸಿಗುತ್ತಿಲ್ಲದಿರುವುದು ಶೋಚನಿಯವಾಗಿದೆ. ಕಳೆದ 10 ವರ್ಷದಲ್ಲಿ 20 ಮಂದಿ ಅರಣ್ಯ ಅಧಿಕಾರಿ ಹುತಾತ್ಮರಾಗಿದ್ದಾರೆ. ನಮ್ಮಲ್ಲಿ ಎಷ್ಟೇ ತಂತ್ರಜ್ಞಾನ ಮುಂದುವರಿದರೂ ಇಂತಹ ಅನಾಹುತಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಿಪಡಿಸಿದರು.
ಅರಣ್ಯ ಇಲಾಖೆಯಲ್ಲಿ ಸಾಕಷ್ಟು ತಂತ್ರಜ್ಞಾನದ ಉಪಯೋಗ ಆಗಬೇಕಿದೆ. ಆದರೆ ಇಂತಹ ಬಳಕೆ ಆಗದೇ ಇರುವ ಕಾರಣಕ್ಕೆ ಅಧಿಕಾರಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದನಿಸುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆಯು ತನಿಖಾ ಅಧಿಕಾರಿಗಳಿಗೆ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ 3 ಕ್ರಿಮಿನಲ್ ಕಾನೂನುಗಳು ಬದಲಾವಣೆ ಆಗಿ ಹೊಸ ಕಾನೂನು ಜಾರಿಗೆ ಬಂದಿದೆ. ಕಂದಾಯ, ಪೊಲೀಸ್ ಇಲಾಖೆ ಒಳಗೊಂಡಂತೆ ಅನೇಕ ಇಲಾಖೆಗಳಿಗೆ ಈ ಕಾನೂನಗಳ ಬಗ್ಗೆ ನಮ್ಮ ತಂಡ ಜಾಗೃತಿ ಮೂಡಿಸುತ್ತಿದೆ. ಅರಣ್ಯ ಇಲಾಖೆಯಲ್ಲಿಯೂ ಇಂತಹ ಜಾಗೃತಿ ಕಾರ್ಯಕ್ರಮಗಳು ಆಗಬೇಕಿದೆ. ಆಗ ನ್ಯಾಯಾಲಯದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆಯೂ ಅಧಿಕಾರಿಗಳಿಗೆ ಅರಿವು ಮೂಡುತ್ತದೆ ಎಂದರು.
ಆನೆ ಯೋಜನೆಯ ಅಪರ ಮುಖ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಮಾತನಾಡಿ, ಪ್ರಾಣಿಗಳ ದಾಳಿ, ಪರಿಸರ ವಿಕೋಪದಂತಹ ಅನಾಹುತಗಳಿಂದ ಕರ್ನಾಟಕದಲ್ಲಿ 62 ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಾಣತ್ಯಾಗ ಮಾಡಿದ್ದಾರೆ. ಪ್ರಾಣಿ ಮತ್ತು ಮಾನವ ಸಂಘರ್ಷದಿಂದ 35 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 6300ಕ್ಕೂ ಹೆಚ್ಚು ಆನೆಗಳಿದ್ದು, ಇಡೀ ದೇಶದ ಮಾನವ ಮತ್ತು ಪ್ರಾಣಿ ಸಂಘರ್ಷದ ಪ್ರಕರಣಗಳನ್ನು ಗಮನಿಸಿದರೆ ನಮ್ಮ ರಾಜ್ಯದಲ್ಲಿ ಅನಾಹುತಗಳ ಸಂಖ್ಯೆ ಕಡಿಮೆ ಮಟ್ಟದಲ್ಲಿದೆ ಎಂದು ತಿಳಿಸಿದರು.ಇಂತಹ ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಆನೆ ಓಡಾಡುವ ದಾರಿಯಲ್ಲಿ ಬ್ಯಾರಿಕೇಡ್, ಕಾರಿಡಾರ್ ಹಾಗೂ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ತಂತ್ರಜ್ಞಾನ ಹಾಗೂ ಶ್ವಾನದಳ ಸಹಾಯದಿಂದ ಆನೆಯನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಕಳೆದ 2 ವರ್ಷಗಳಿಂದ ಅರಣ್ಯದಲ್ಲಿ ಪ್ರಾಕೃತಿಕ ವಿಕೋಪದಂತಹ ಯಾವುದೇ ಅನಾಹುತಗಳು ಕೂಡ ಕಂಡು ಬಂದಿಲ್ಲ ಎಂದು ಹೇಳಿದರು.
ಸರ್ಕಾರದ ಸೂಚನೆಯಂತೆ, ಅರಣ್ಯ ಇಲಾಖೆ ಅಧಿಕಾರಿಗಳ ಹಿತದೃಷ್ಟಿಯಿಂದ ಇಂಟಿಗ್ರೇಟೆಡ್ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಈ ಮೂಲಕ ಅಧಿಕಾರಿಗಳು ಜಾಗ್ರತೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗುತ್ತಿದ್ದು, ತಮ್ಮ ಲೋಪಗಳಿಂದ ಪ್ರಾಣತ್ಯಾಗ ಮಾಡುವಂತಹ ಸಂದರ್ಭವನ್ನು ತಂದಿಟ್ಟುಕೊಳ್ಳಬಾರದು ಎಂದು ಸಲಹೆ ನೀಡಲಾಗುತ್ತಿದೆ ಎಂದರು.ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ಮಾತನಾಡಿ, ಪ್ರಸ್ತುತ ಅರಣ್ಯ, ಭೂಮಿ, ಅಭಿವೃದ್ಧಿಯ ವಿಚಾರದಲ್ಲಿ ಅಧಿಕಾರಿಗಳಿಗೆ ಒತ್ತಡ ಇದೆ. ಆದರೂ ಎಲ್ಲಾ ಸಂದರ್ಭದಲ್ಲಿಯೂ ಪೊಲೀಸ್, ಕಂದಾಯ, ಕಾನೂನು ಇಲಾಖೆಗಳು ನಮಗೆ ಬೆಂಬಲವಾಗಿ ನಿಂತಿವೆ. ಅಧಿಕಾರಿಗಳ ಪ್ರಾಣತ್ಯಾಗವನ್ನು ಇಲಾಖೆಯು ಸದಾ ನೆನೆಯುತ್ತದೆ. ಅವರ ಕುಟುಂಬದ ನಷ್ಟವನ್ನು ತುಂಬಿಕೊಳ್ಳಲು ಸರ್ಕಾರವು ಕೂಡ 50 ಲಕ್ಷ ರು. ಪರಿಹಾರ ನೀಡಲು ಮುಂದಾಗಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಎನ್.ಹೇಮಂತ್, ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಆರ್.ಅಜ್ಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅರಣ್ಯ ಇಲಾಖೆ ನಿಸರ್ಗಕಾಯುವ ಸೇನೆ: ಡೀಸಿದೇಶದ ಸೇನೆಯಂತೆ ಅರಣ್ಯ ಇಲಾಖೆಯೂ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಅರಣ್ಯ ಇಲಾಖೆ ನಿಸರ್ಗವನ್ನು ಕಾಯುವ ಸೇನೆಯಾಗಿದೆ. ಅದರಂತೆ ಶರಾವತಿ ಸಂತ್ರಸ್ತರಿಗೆ ಪರಿಹಾರ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಉತ್ತಮ ಕೆಲಸ ಮಾಡುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಭೂಮಿ ಅತಿಕ್ರಮಣ ಹಾಗೂ ಅರಣ್ಯ ಭೂಮಿಗೆ ಸಂಬಂಧಿಸಿದ ಪ್ರಕರಣಗಳು ಬಾಕಿ ಇದ್ದು, ಇವನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಒಟ್ಟಾಗಿ ಕೆಲಸ ಮಾಡಿದರೆ ಅವುಗಳನ್ನು ವಿಲೇವಾರಿ ಮಾಡಬಹುದು ಎಂದರು.