ಎಡಪಕ್ಷಗಳು ಅಧಿಕಾರಕ್ಕೆ ಬಂದರೆ ಮಾತ್ರ ಜನಾಭಿವೃದ್ಧಿ ಸಾಧ್ಯ: ಕೆ.ಕೆ.ಶೈಲಜಾ

| Published : Dec 02 2024, 01:17 AM IST

ಎಡಪಕ್ಷಗಳು ಅಧಿಕಾರಕ್ಕೆ ಬಂದರೆ ಮಾತ್ರ ಜನಾಭಿವೃದ್ಧಿ ಸಾಧ್ಯ: ಕೆ.ಕೆ.ಶೈಲಜಾ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಬಂಡವಾಳಶಾಯಿ ಪರ ಆರ್ಥಿಕ ನೀತಿ ಜಾರಿ ಮಾಡಿದ್ದರಿಂದ ಇಂದು ಬಡ ಭಾರತವೇ ಕಣ್ಣಿಗೆ ರಾಚುತ್ತಿದೆ. ಬಡತನ, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯ, ರೈತರಿಗೆ ಅವೈಜ್ಞಾನಿಕ ಬೆಲೆ, ಜಾತಿ ವ್ಯವಸ್ಥೆ, ಕಂದಾಚಾರ, ಮೌಢ್ಯಗಳು ಇಂದಿಗೂ ಮುಂದುವರೆಯುತ್ತಿದೆ. ಇದನ್ನು ಬಿಜೆಪಿ ಸರ್ಕಾರ ತೀವ್ರವಾಗಿ ಮುಂದುವರೆಸುತ್ತಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಎಡಪಕ್ಷಗಳು ಅಧಿಕಾರಕ್ಕೆ ಬಂದರೆ ಮಾತ್ರ ಆರ್ಥಿಕಾಭಿವೃದ್ಧಿ ಜೊತೆಗೆ ಜನಾಭಿವೃದ್ಧಿ ಸಾಧ್ಯ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯೆ ಕೆ.ಕೆ.ಶೈಲಜಾ ಅಭಿಪ್ರಾಯಪಟ್ಟರು.

ಭಾರತೀ ಕಾಲೇಜು ಗೇಟ್ ಸಮೀಪದ ಮೈದಾನದಲ್ಲಿ ಶನಿವಾರ ಸಿಪಿಐ (ಎಂ)ಯಿಂದ ಮಂಡ್ಯ ಜಿಲ್ಲಾ ಸಮ್ಮೇಳನದ ಅಂಗವಾಗಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಕೇರಳ ರಾಜ್ಯದಲ್ಲಿ ಎಡಪಕ್ಷಗಳು ನಡೆಸುತ್ತಿರುವ ಅಧಿಕಾರದಿಂದ ರೈತರು, ಕಾರ್ಮಿಕರು, ಬಡವರು ಎಲ್ಲಾ ವಿಭಾಗ ಜನರಿಗೆ ಆರ್ಥಿಕ ಅಭಿವೃದ್ಧಿ ಸಿಕ್ಕಿದೆ ಎಂದರು.

ಕೇರಳ ರಾಜ್ಯದ ಜನರಿಗೆ ಆರೋಗ್ಯ, ಶಿಕ್ಷಣ, ಎಲ್ಲರಿಗೂ ತಲುಪಿಸಿ, ಕುಟುಂಬ ಸ್ತ್ರೀ ಯೋಜನೆಯನ್ನು ಜಾರಿಗೆ ತಂದಿದೆ. ಸರ್ಕಾರದ ಯೋಜನೆಗಳೆಲ್ಲವನ್ನು ಸ್ತ್ರೀಯರೇ ನಡೆಸುತ್ತಿದ್ದಾರೆ. ದೇಶದಲ್ಲೇ ಅಭಿವೃದ್ದಿ ವಿಚಾರದಲ್ಲಿ ಕೇರಳ ನಂಬರ್ 1 ಆಗಿದೆ ಎಂದರು.

ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಬಂಡವಾಳಶಾಯಿ ಪರ ಆರ್ಥಿಕ ನೀತಿ ಜಾರಿ ಮಾಡಿದ್ದರಿಂದ ಇಂದು ಬಡ ಭಾರತವೇ ಕಣ್ಣಿಗೆ ರಾಚುತ್ತಿದೆ. ಬಡತನ, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯ, ರೈತರಿಗೆ ಅವೈಜ್ಞಾನಿಕ ಬೆಲೆ, ಜಾತಿ ವ್ಯವಸ್ಥೆ, ಕಂದಾಚಾರ, ಮೌಢ್ಯಗಳು ಇಂದಿಗೂ ಮುಂದುವರೆಯುತ್ತಿದೆ. ಇದನ್ನು ಬಿಜೆಪಿ ಸರ್ಕಾರ ತೀವ್ರವಾಗಿ ಮುಂದುವರೆಸುತ್ತಿದೆ ಎಂದು ವಿಷಾದಿಸಿದರು.

ಸ್ವತಂತ್ರ್ಯ ಪಡೆದ ಚೀನಾ ಮತ್ತು ಸಮಾಜವಾದಿ ನೆಲೆಗಟ್ಟಿನ ರಷ್ಯಾ ಜನಸಾಮಾನ್ಯರಿಗೆ ಕೊಡಬೇಕಾದ ಸೌಲಭ್ಯಗಳನ್ನು ನಿರಂತರವಾಗಿ ಕೊಡುತ್ತಾ ಬಂದಿದೆ. ಸಮ ಸಮಾಜವನ್ನು ಸೃಷ್ಠಿಸಿ ಎಲ್ಲರಿಗೂ ಉದ್ಯೋಗ ಮತ್ತು ಶಿಕ್ಷಣ ನೀಡುತ್ತಾ ಬರುತ್ತಿದೆ ಎಂದರು.

ಬಡತನಕ್ಕೆ ದೇವರು ಕಾರಣವಲ್ಲ. ಸಮಾಜದಲ್ಲಿನ ವರ್ಗ ವಿಭಜನೇಯೇ ಬಡತನಕ್ಕೆ ಮೂಲ ಕಾರಣ. ಶೋಷಣೆಗೆ ಒಳಗಾಗುವವರೆಲ್ಲ ಬಡವರಾಗಿಯೇ ಉಳಿಯುತ್ತಾರೆ. ಕಾರ್ಲ್ ಮಾರ್ಕ್ಸ್ ಅವರು ಬಡತನಕ್ಕೆ ಶೋಷಣೆ ಮಾಡುವ ವರ್ಗ, ಒಳಗಾಗುವ ವರ್ಗ ಎಂಬ ಎರಡು ವರ್ಗಗಳಿವೆ. ಶೋಷಣೆಗೊಳಗಾಗುವವರು ಎಂದಿಗೂ ಬಡವರಾಗಿಯೇ ಇರುತ್ತಾರೆ ಎಂಬುದನ್ನು ಅರಿವು ಮಾಡಿಕೊಟ್ಟರು.

ಬಡ ರೈತರು, ಕೂಲಿಕಾರರು, ಕಾರ್ಮಿಕರು ,ಅಸಂಘಟಿತ ವಲಯದ ಜನರು ಬಂಡವಾಳಶಾಹಿಗಳ, ಪಾಳೇಗಾರಿಕೆ ಶೋಷಣೆಗೆ ಒಳಗಾಗಿದ್ದೇವೆ. ಮಾನವ ಸಮಾಜ ಹಲವು ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಹಾದು ಬಂದಿದೆ. ಪಾಳೇಗಾರಿಕೆ ವ್ಯವಸ್ಥೆಯಲ್ಲಿ ಎಲ್ಲ ಜಮೀನುಗಳು ಕೆಲವರ ಕೈಯಲ್ಲಿ ಮಾತ್ರ ಇತ್ತು. ಎಲ್ಲರೂ ಅವರಿಗಾಗಿ ದುಡಿಯಬೇಕಾಗಿತ್ತು ಎಂದರು.

ಈಗ ಬಂಡವಾಳ ಶಾಹಿ ವ್ಯವಸ್ಥೆಯಲ್ಲಿ ನಾವಿದ್ದೇವೆ. ದೊಡ್ಡ ಬಂಡವಾಳಶಾಹಿ ವ್ಯವಸ್ಥೆಯು ಇಂದು ಸಾಮ್ರಾಜ್ಯಶಾಹಿ ಶಕ್ತಿಯಾಗಿ ರೂಪುಗೊಂಡಿದೆ. ಬಹುರಾಷ್ಟ್ರೀಯ ಕಂಪನಿಗಳ ರೂಪದಲ್ಲಿ ಎಲ್ಲರನ್ನೂ ಶೋಷಿಸಿ ವಂಚಿಸುತ್ತಿವೆ. ಇದರ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಬೇಕಿದೆ ಎಂದರು.

ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ.ಪುಟ್ಟಮಾದು ಮಾತನಾಡಿ, ಕೇಂದ್ರ ಸರ್ಕಾರವು ಹಲವು ಜನವಿರೋಧಿ ಮಸೂದೆಗಳನ್ನು ಸಂಸತ್‌ನಲ್ಲಿ ಅಂಗೀಕರಿಸಿ ಶ್ರೀಮಂತರ ಪರ ನೀತಿಗಳನ್ನು ಅನುಸರಿಸುತ್ತಿದೆ. ರಾಜ್ಯ ಸರ್ಕಾರವು ಅದೇ ಹಾದಿಯಲ್ಲಿ ಸಾಗಿ ದಿವಾಳಿಯತ್ತ ತಳ್ಳುತ್ತಿವೆ ಎಂದು ಕಿಡಿಕಾರಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸಿಪಿಐ(ಎಂ) ನೂರಾರು ಕಾರ್ಯಕರ್ತರು , ಮುಖಂಡರು ಮಂಡ್ಯ ರಸ್ತೆ, ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಜಾಥಾ ನಡೆಸಿದರು. ತುಂತುರು ಮಳೆಯಲ್ಲೂ 2 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಸಮಾವೇಶದಲ್ಲಿ ಪಾಲ್ಗೊಂಡರು.

ವೇದಿಕೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಸೈಯದ್ ಮುಜೀದ್, ಮೀನಾಕ್ಷಿ ಸುಂದರಂ, ರಾಜ್ಯಸಮಿತಿ ಸದಸ್ಯರಾದ ಕೆ.ಪುಟ್ಟಮಾದು, ದೇವಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಿ.ಕುಮಾರಿ, ಟಿ.ಎಲ್.ಕೃಷ್ಣೇಗೌಡ, ಎನ್.ಎಲ್.ಭರತ್‌ರಾಜು, ಸಿದ್ದತಾ ಸಮಿತಿ ಅಧ್ಯಕ್ಷ ಟಿ.ಯಶವಂತ್, ಪ್ರಧಾನ ಕಾರ್ಯದರ್ಶಿ ಟಿ.ಬಿ.ಶೋಭಾ, ಕಾರ್ಯಾಧ್ಯಕ್ಷ ಹನುಮೇಶ್, ಅನಿತಾ, ಬಿ.ಎಂ.ಶಿವಮಲವಯ್ಯ, ಜಿ.ರಾಮಲಿಂಗಯ್ಯ, ಕೆ.ಬಸವರಾಜು, ಸುಶೀಲ ಸೇರಿದಂತೆ ಹಲವರಿದ್ದರು.