ಸಫಾಯಿ ಕರ್ಮಚಾರಿಗಳಿಂದ ಜನರ ಆರೋಗ್ಯ ರಕ್ಷಣೆ: ಜಿಲ್ಲಾಧಿಕಾರಿ ಡಾ.ವೆಂಕಟೇಶ್

| Published : Feb 09 2024, 01:49 AM IST

ಸಫಾಯಿ ಕರ್ಮಚಾರಿಗಳಿಂದ ಜನರ ಆರೋಗ್ಯ ರಕ್ಷಣೆ: ಜಿಲ್ಲಾಧಿಕಾರಿ ಡಾ.ವೆಂಕಟೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸೈನಿಕರು ಹೊರಗಿನ ಶತ್ರುಗಳಿಂದ ದೇಶ ರಕ್ಷಿಸಿದರೇ ದೇಶದೊಳಗಿನ ಸ್ವಚ್ಛತೆ, ಅನೈರ್ಮಲ್ಯತೆ ಹೋಗಲಾಡಿಸುವ ಕೆಲಸ ಸಫಾಯಿ ಕರ್ಮಚಾರಿಗಳು ಮಾಡುತ್ತಾರೆ. ಕರ್ಮಚಾರಿಗಳ ಈ ಕೆಲಸದಿಂದ ಕ್ರಿಮಿ, ಕೀಟಗಳ ನಿಯಂತ್ರಣ, ಸಾಂಕ್ರಾಮಿಕ ರೋಗಳಿಂದ ಮುಕ್ತಿ ಹೊಂದಿ ಜನರು ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರ, ಪಟ್ಟಣಗಳ ಸ್ವಚ್ಛತೆ ಕಾಪಾಡುವಲ್ಲಿ ಸಫಾಯಿ ಕರ್ಮಚಾರಿಗಳ ಶ್ರಮ, ಬೆವರಿದ್ದು ಇವರ ಶ್ರೇಯೋಭಿವೃದ್ಧಿ ಅವಶ್ಯ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸಮಾಜ ಕಲ್ಯಾಣ ಇಲಾಖೆ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಸಫಾಯಿ ಕರ್ಮಚಾರಿಗಳಿಗಿರುವ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ ಸೈನಿಕರು ಹೊರಗಿನ ಶತ್ರುಗಳಿಂದ ದೇಶ ರಕ್ಷಿಸಿದರೇ ದೇಶದೊಳಗಿನ ಸ್ವಚ್ಛತೆ, ಅನೈರ್ಮಲ್ಯತೆ ಹೋಗಲಾಡಿಸುವ ಕೆಲಸ ಸಫಾಯಿ ಕರ್ಮಚಾರಿಗಳು ಮಾಡುತ್ತಾರೆ. ಕರ್ಮಚಾರಿಗಳ ಈ ಕೆಲಸದಿಂದ ಕ್ರಿಮಿ, ಕೀಟಗಳ ನಿಯಂತ್ರಣ, ಸಾಂಕ್ರಾಮಿಕ ರೋಗಳಿಂದ ಮುಕ್ತಿ ಹೊಂದಿ ಜನರು ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಂತಹ ಕಾರ್ಮಿಕರಿಗೆ ಸರ್ಕಾರದಿಂದ ರೂಪಿಸಿರುವ ಯೋಜನೆಗಳ ತಲುಪಿಸಿ ಇವರ ಶ್ರೇಯೋಭಿವೃದ್ಧಿ ಮಾಡಬೇಕಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್ ಮಾತನಾಡಿ, ಸಫಾಯಿ ಕರ್ಮಚಾರಿಗಳಿಗೆ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ ಯೋಜನೆಯಡಿ ಒಂದು ಲಕ್ಷದವರೆಗೆ ಶೇ 50 ಸಹಾಯಧನದಡಿ ನೇರ ಸಾಲ, ಉದ್ಯಮಶೀಲತಾ ಯೋಜನೆಯಡಿ ₹2 ಲಕ್ಷದವರೆಗೆ ಸಹಾಯಧನದಡಿ ಬ್ಯಾಂಕಿನ ಮೂಲಕ ಸಾಲ, ಸರಕು ಸಾಗಾಣಿಕ ವಾಹನ ಖರೀದಿಗೆ₹ 3.50 ಲಕ್ಷ ಸಹಾಯಧನದಡಿ ಬ್ಯಾಂಕಿನ ಮೂಲಕ ಸಾಲ, ಮೈಕ್ರೋ ಕ್ರೆಡಿಟ್ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಚಟುವಟಿಕೆಗಳಿಗಾಗಿ ಪ್ರತಿ ಸದಸ್ಯರಿಗೆ ರು.25 ಸಾವಿರದವರೆಗೆ ಇದರಲ್ಲಿ ₹15 ಸಾವಿರ ಸಹಾಯಧನ ಹಾಗೂ ₹10 ಸಾವಿರ ಬೀಜಧನವಾಗಿ ನೀಡಲಾಗುತ್ತದೆ. ಭೂ ಒಡೆತನ ಯೋಜನೆಯಡಿ ವಾಸಸ್ಥಳದಿಂದ 10 ಕಿ.ಮಿ.ಒಳಗೆ 2 ಎಕರೆ ಖುಷ್ಕಿ ಅಥವಾ 1 ಎಕರೆ ನೀರಾವರಿ ಭೂಮಿ ನೀಡುವ ಯೋಜನೆ ಇದಾಗಿದೆ. ಪೌರ ಕಾರ್ಮಿಕರು ಕೆಲಸಕ್ಕೆ ತೆರಳುವುದರಿಂದ ಅವರ 6 ತಿಂಗಳ ಮಕ್ಕಳಿಂದ 6 ವರ್ಷದವರೆಗೆ ಮಕ್ಕಳ ಲಾಲನೆ, ಪಾಲನೆ ಮಾಡಲು 50 ಮಕ್ಕಳಿಗೆ ಒಂದು ಘಟಕವಾಗಿ ಶಿಶುಪಾಲನಾ ಘಟಕ ತೆರೆಯಲಾಗುತ್ತದೆ ಎಂದು ವಿವರ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಅಭಿವೃದ್ಧಿ ನಿಗಮದ ಬಸವರಾಜ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ದಿ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೃಷ್ಣಕುಮಾರ ಭಾಗವತ್ ಹಾಗೂ ಇನ್ನಿತರರಿದ್ದರು.

ಈ ವೇಳೆ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.