ಸಾರಾಂಶ
ಅಶೋಕ ವಾಚನಾಲಯ ಹಾಗೂ ಮನೋರಂಜನಾ ಕೇಂದ್ರದ ಶತಮಾನೋತ್ಸವ ಸಮಾರಂಭ. ಸಾಮಾಜಿಕ ಚಟುವಟಿಕೆಗಳ ಮೂಲಕ ತನ್ನ ಅಸ್ಥಿತ್ವ ಕಾಪಾಡಿಕೊಂಡು 100 ವರ್ಷ ಪೂರೈಸಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಸಚಿವರ ಅಭಿಮತ.
ಕನ್ನಡಪ್ರಭ ವಾರ್ತೆ ಹೊಸದುರ್ಗಜನಪರವಾದ ಕೆಲಸ ಮಾಡುವ ಸಂಘ ಸಂಸ್ಥೆಗಳಿಗೆ ಜನರ ಬೆಂಬಲ ಸಿಗಲು ಸಾಧ್ಯ ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಹೇಳಿದರು.
ಪಟ್ಟಣದ ಅಶೋಕ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಅಶೋಕ ವಾಚನಾಲಯ ಹಾಗೂ ಮನೋರಂಜನಾ ಕೇಂದ್ರದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯಾವುದೇ ಸಂಘ ಸಂಸ್ಥೆ ಸ್ಥಾಪನೆ ಮಾಡುವುದು ದೊಡ್ಡದಲ್ಲ. ಅದನ್ನು ಉಳಿಸಿ, ಬೆಳಸಿಕೊಂಡು ಹೋಗುವುದು ಕಠಿಣದ ಕೆಲಸ. ಹೊಸದುರ್ಗದ ಅಶೋಕ ವಾಚನಾಲಯ ಮತ್ತು ಮನೋರಂಜನಾ ಕೇಂದ್ರ ಸಾಮಾಜಿಕ ಚಟುವಟಿಕೆಗಳ ಮೂಲಕ ತನ್ನ ಅಸ್ಥಿತ್ವವನ್ನು ಕಾಪಾಡಿಕೊಂಡು 100 ವರ್ಷ ಪೂರೈಸಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ನಾಮಫಲಕ ಅನಾವರಣಗೊಳಿಸಿದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಅಶೋಕ ವಾಚನಾಲಯ ಕೇಂದ್ರ ಸಮಾಜಮುಖಿ ಕೆಲಸ ಮಾಡಿಕೊಂಡು ಬಂದಿದೆ. ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಕ್ಲಬ್‌ವೊಂದು ನೂರು ವರ್ಷ ಪೂರೈಸಿರುವುದು ವಿಶೇಷ. ಸಮಾಜದ ಒಳಿತಿಗಾಗಿ ಸ್ಥಾಪನೆಗೊಂಡ ಸಂಘ ಸಂಸ್ಥೆಗಳು ಸಾರ್ವಜನಿಕ ಸೇವೆ ಮಾಡಿದರೆ ಶಾಶ್ವತವಾಗಿ ಉಳಿಯಲಿವೆ ಎಂದರು.
ನಂಜುಂಡಪ್ಪ ವರದಿಯ ಪ್ರಕಾರ ಹೊಸದುರ್ಗ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿದೆ. ಬಿ.ಜಿ.ಗೋವಿಂದಪ್ಪ ಅವರು ಒಮ್ಮೆಯೂ ಸಚಿವರಾಗದಿದ್ದರೂ ಕ್ಷೇತ್ರದಲ್ಲಿ ಶಾಶ್ವತವಾದ ಕೆಲಸ ಮಾಡಿದ್ದಾರೆ ಎಂದರು.ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಅಶೋಕ ವಾಚನಾಲಯ ಕೇಂದ್ರವು ಈ ತಾಲೂಕಿನಲ್ಲಿ ನಡೆಯುವ ಧಾರ್ಮಿಕ ಹಾಗೂ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಗಳಿಗೆ ಕೈಲಾದ ನೆರವು ನೀಡುತ್ತಾ ಬಂದಿದೆ. ಈ ಹಿಂದೆ ಶಾಸಕರಾದ ಎಲ್ಲರೂ ಈ ಸಂಘದ ಬೆಳವಣಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ್ದಾರೆ. ಯಾವುದೇ ಸಂಘ ಸಂಸ್ಥೆಗಳು ಪಾರದರ್ಶಕ ಆಡಳಿತ ನೀಡಬೇಕು. ಸೂಕ್ತ ದಾಖಲೆ ಹಾಗೂ ಲೆಕ್ಕ ಪತ್ರ ನಿರ್ವಹಣೆ ಮಾಡಬೇಕು. ಈ ಕೇಂದ್ರವೂ ಸ್ವಚ್ಚ ಆಡಳಿತ ಹಾಗೂ ಪಾರದರ್ಶಕ ಲೆಕ್ಕ ಪತ್ರ ನಿರ್ವಹಣೆ ಮಾಡಬೇಕು ಎಂದರು.ಅಶೋಕ ವಾಚನಾಲಯ ಕೇಂದ್ರ ಶತಮಾನೋತ್ಸವ ಆಚರಣೆ ಹಿನ್ನೆಲೆ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು. ಈ ವೇಳೆ ಕೇಂದ್ರ ಅಧ್ಯಕ್ಷ ಎಚ್.ಬಿ.ಮರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಟಿ.ಎಚ್.ಬಸವರಾಜಪ್ಪ, ಕಾರ್ಯದರ್ಶಿ ಎಂ.ತಿಪ್ಪೇಸ್ವಾಮಿ, ದ್ಯಾಮಪ್ಪ, ಚಂದ್ರಶೇಖರ್, ಎಚ್.ಪಿ.ಉಮೇಶ್, ಗಿರೀಶ್, ಬಸವರಾಜಪ್ಪ, ಶ್ರೀಧರ್ ಭಟ್, ಬಾಲರಾಜ್, ವಜೀರ್, ಎ.ಟಿ.ತಿಮ್ಮಣ್ಣ ಮತ್ತಿತರಿದ್ದರು.