ಸಾರಾಂಶ
ರಜೆ ಮೇಲೆ ತೆರಳಿರುವ ಅಭಿವೃದ್ಧಿ ಅಧಿಕಾರಿ ಪಾಲಾಕ್ಷಪ್ಪ । ಜನರ ತೊಂದರೆಗೆ ಸ್ಪಂದಿಸದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು
ಕನ್ನಡಪ್ರಭ ವಾರ್ತೆ ಹೊಸದುರ್ಗತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರ ವೆನಿಸಿರುವ ಶ್ರೀರಾಂಪುರ ಗ್ರಾಮ ಪಂಚಾಯಿತಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.
ಹೋಬಳಿ ಕೇಂದ್ರ ಶ್ರೀರಾಂಪುರ ಗ್ರಾಮ ಸುಮಾರು 7,000 ಜನಸಂಖ್ಯೆ ಹೊಂದಿದ್ದು, ಪ್ರತಿನಿತ್ಯ ಇ-ಸ್ವತ್ತು, ಜನನ, ಮರಣ ದಾಖಲೆ, ಸೇರಿದಂತೆ ವಿವಿಧ ಕಾರ್ಯಗಳಿಗೆ ಸಾರ್ವಜನಿಕರು ಭೇಟಿ ನೀಡುತ್ತಿರುತ್ತಾರೆ. ಕುಡಿಯುವ ನೀರಿನ ನಿರ್ವಹಣೆ, ಚರಂಡಿ ಸ್ವಚ್ಛತೆ, ಬೀದಿ ದೀಪದ ನಿರ್ವಹಣೆ ಸೇರಿದಂತೆ ಹಲವಾರು ಕೆಲಸಗಳಿಗೆ ಸಾರ್ವಜನಿಕರು ಯಾರನ್ನು ಕೇಳುವುದು ಎಂಬುದು ತಿಳಿಯದಂತಾಗಿದೆ.4-5 ತಿಂಗಳುಗಳ ಹಿಂದೆ ಶ್ರೀರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಾಲಾಕ್ಷಪ್ಪ ರಜೆ ಮೇಲೆ ತೆರಳಿದ್ದರಿಂದ ಸಾಣೆಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಲೋಕೇಶ್ ನಾಯ್ಕ್ ಅವರನ್ನು ಶ್ರೀರಾಂಪುರ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಯಾಗಿ ನಿಯೋಜನೆ ಮಾಡಲಾಗಿತ್ತು.
ಆದರೆ ಏಪ್ರಿಲ್ ತಿಂಗಳಲ್ಲಿ ನಿಯೋಜನೆಗೊಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮೂಲ ಸ್ಥಾನದಲ್ಲಿ ಮರಳಿ ತೆರಳುವಂತೆ ಆದೇಶ ಬಂದ ಹಿನ್ನೆಲೆಯಲ್ಲಿ ಶ್ರೀರಾಂಪುರಕ್ಕೆ ನಿಯೋಜನೆಗೊಂಡಿದ್ದ ಲೋಕೇಶ್ ನಾಯ್ಕ್ ಸಾಣೆಹಳ್ಳಿ ಗ್ರಾಮ ಪಂಚಾಯಿತಿಗೆ ವಾಪಾಸ್ ತೆರಳಿದರು. ರಜೆಯ ಮೇಲಿದ್ದ ಪಾಲಾಕ್ಷಪ್ಪ ಕರ್ತವ್ಯಕ್ಕೆ ಹಾಜರಾಗಿ ವಾರದ ಬಳಿಕ ಪುನಃ ರಜೆ ಮೇಲೆ ತೆರಳಿದ್ದಾರೆ.ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಿಲ್ಲದೆ, ಸಮಸ್ಯೆಗಳ ಹೊತ್ತು ಬರುವ ಸಾರ್ವಜನಿಕರು, ಕಚೇರಿಗೆ ನಿತ್ಯವೂ ಅಲೆದು ಸುಸ್ತಾಗಿ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಇತ್ತ ತಾಪಂ ಇಒ ಅವರನ್ನು ಈ ಬಗ್ಗೆ ವಿಚಾರಿಸಿದರೆ ಪಿಡಿಒ ರಜೆ ಹೋಗಿದ್ದು ಆ ಸ್ಥಳಕ್ಕೆ ಬೇರೆಯವರನ್ನು ನಿಯೋಜನೆ ಮಾಡುವಂತೆ ಜಿಪಂಗೆ ಪ್ರಸ್ತಾವನೆ ಕಳಿಸಲಾಗಿದೆ. ಆದರೆ ಅಲ್ಲಿಂದ ಯಾವುದೇ ಸೂಚನೆ ಬಂದಿಲ್ಲ ಇನ್ನೂ ಒಂದೆರೆಡು ದಿನ ಆಗಬಹುದು ಎನ್ನುತ್ತಾರೆ. ಕಳೆದ 20 ದಿನಗಳಿಂದ ಖಾಲಿ ಇರುವ ಹುದ್ದೆಗೆ ಅಧಿಕಾರಿ ನಿಯೋಜನೆ ಮಾಡಲು ಹಿರಿಯ ಅಧಿಕಾರಿಗಳ ಮೀನಮೇಷಕ್ಕೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ರೀತಿ ಅಧಿಕಾರಿಗಳ ಬೇಜವಾಬ್ದಾರಿತನ ಮುಂದುವರಿದರೆ ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಕಳೆದ 20 ದಿನಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳಿಲ್ಲದೆ ಯಾವುದೇ ಕೆಲಸ ಕಾರ್ಯಗಳು ನೆಡೆಯುತ್ತಿಲ್ಲ. ಅಧ್ಯಕ್ಷೆಯಾಗಿ ಸಾರ್ವಜನಿಕರ ಕೆಲಸ ಮಾಡಿಕೊಡಲು ನಿಸ್ಸಹಾಯಕಳಾಗಿದ್ದೇನೆ. ಜನಪ್ರತಿನಿಧಿಯಾಗಿ ಜನರಿಂದ ನಿತ್ಯವೂ ಬೈಗುಳ ಕೇಳಬೇಕಾಗಿದೆ. ಅಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಂಡು ಆದಷ್ಟು ಬೇಗನೆ ಮೇಲಾಧಿಕಾರಿಗಳು ಈ ಸಮಸ್ಯೆ ಬಗೆಹರಿಸಬೇಕು ಎಂದು ಅಧ್ಯಕ್ಷೆ ಶ್ವೇತ ರಂಗಸ್ವಾಮಿ ತಮ್ಮ ಸಹಾಯಕತೆ ತೋಡಿಕೊಂಡರು.ಶ್ರೀರಾಂಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಪಾಲಾಕ್ಷಪ್ಪ ರಜೆ ಮೇಲೆ ತೆರಳಿರುವುದರಿಂದ ಆ ಸ್ಥಾನಕ್ಕೆ ಇನ್ನೊಬ್ಬರನ್ನು ನಿಯೋಜನೆ ಮಾಡುವಂತೆ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅಲ್ಲಿಂದ ಬಂದ ಮೇಲೆ ಅಧಿಕಾರಿಯನ್ನು ನಿಯೋಜನೆ ಮಾಡಲಾಗುವುದು.
ಸುನಿಲ್‌ಕುಮಾರ್, ಇಒ, ತಾಲೂಕು ಪಂಚಾಯತಿ, ಹೊಸದುರ್ಗ.