ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಬೇಕಾದರೆ ತಮ್ಮ ಕ್ಷೇತ್ರದಲ್ಲಿ ಎಲ್ಲದರೂ ಬಂಜರು ಭೂಮಿ ಇದ್ದರೆ ಇಂಥ ಕಾರ್ಖಾನೆ ತೆಗೆದುಕೊಂಡು ಅಲ್ಲಿ ಹಾಕಲಿ

ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಕಾರ್ಖಾನೆ ಸ್ಥಾಪನೆಯಾಗುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟದ ಕುರಿತು ಸದನದಲ್ಲಿ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ, ಹೋರಾಟಗಾರರ ಕರೆ ಸ್ವೀಕರಿಸುತ್ತಿಲ್ಲ ಎಂದು ಹೋರಾಟ ಸಮಿತಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ನಗರಸಭೆ ಬಳಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಬಲ್ಡೋಟಾ (ಬಿಎಸ್ಪಿಎಲ್) ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ಧರಣಿಯನ್ನು ಉದ್ಧೇಶಿಸಿ ಮಾತನಾಡಿದರು.

ಕೊಪ್ಪಳ ಭಾಗ್ಯನಗರದ ಜನರ ಸಮಸ್ಯೆ ಇಲ್ಲಿನ ಪ್ರತಿನಿಧಿಗಳಿಗೆ ಗಂಭೀರವಾಗಿ ಕಾಣಿಸುತ್ತಿಲ್ಲ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ವಿಪ ಸದಸ್ಯೆ ಹೇಮಲತಾ ನಾಯಕ ಧ್ವನಿಯೆತ್ತಿದ್ದು, ಕೊಪ್ಪಳ ಜನರು ಗಮನಿಸುತ್ತಿದ್ದಾರೆ. ಈ ಕುರಿತು ಮಾತನಾಡಲು ಫೋನ್ ಕರೆ ಮಾಡಿ ಜಿಲ್ಲಾ ಸಚಿವರು, ಶಾಸಕರುಗಳಿಗೆ ಮಾತನಾಡಲು ಪ್ರಯತ್ನಿಸಿದರೂ ಕರೆ ಸ್ವೀಕರಿಸುತ್ತಿಲ್ಲ. ಇದರಿಂದ ನಮಗೆ ಆತಂಕ ಹೆಚ್ಚಾಗಿದೆ. ಒಂದು ಕಡೆ ಕೈಗಾರಿಕಾ ಮಂತ್ರಿಗಳು ತಜ್ಞರ ಸಮಿತಿ ವರದಿ ಮಾಡಿಸುತ್ತೇವೆ ಎಂದು ದಿಲ್ಲಿ ಕಡೆ ಕೈ ಮಾಡಿ ತೋರಿಸುತ್ತಾ ಹಳೆ ಚಾಳಿ ಮುಂದುವರಿಸಿದ್ದಾರೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಬೇಕಾದರೆ ತಮ್ಮ ಕ್ಷೇತ್ರದಲ್ಲಿ ಎಲ್ಲದರೂ ಬಂಜರು ಭೂಮಿ ಇದ್ದರೆ ಇಂಥ ಕಾರ್ಖಾನೆ ತೆಗೆದುಕೊಂಡು ಅಲ್ಲಿ ಹಾಕಲಿ. ಅದು ಬಿಟ್ಟು ನಮ್ಮ ಆಹ್ಲಾದಕರ ವಾತಾವರಣದ ತುಂಗಭದ್ರವೇ ಯಾಕೆ ಬೇಕು? ಇವರ ನಿಲುವು ಒಂದುವರೆ ಲಕ್ಷ ಜನರ ಆತಂಕ ಹೆಚ್ಚು ಮಾಡಿರುವಾಗಲೇ ಇಲ್ಲಿರುವ 28 ಸ್ಪಾಂಜ್ ಐರನ್ ಕಾರ್ಖಾನೆಗಳು 25 ಹಳ್ಳಿ, ಅಲ್ಲಿನ ಕೃಷಿ ಬದುಕು, ಅಂತರ್ಜಲ ಮಾಲಿನ್ಯಗೊಳಿಸಿವೆ ಎನ್ನುವುದು ಗೊತ್ತಾಗಲಿಲ್ಲವೇ? ಇದುವರೆಗಿನ ಬಂಡವಾಳ ₹4000 ಕೋಟಿಯ 28 ಕಾರ್ಖಾನೆಗಳು ಇಷ್ಟು ಮಾಲಿನ್ಯ ಮಾಡಿರುವಾಗ ಇನ್ನು ₹54,000 ಕೋಟಿ ಹೂಡಿಕೆಯಲ್ಲಿ ಎಷ್ಟು ಮಾಲಿನ್ಯವಾಗುತ್ತದೆ ಎಂದು ಅಂದಾಜು ಇಲ್ಲವೇ? ಈ ಮಂತ್ರಿಗಳಿಗೆ ಬಲ್ಡೋಟಾ ಒಳಗೊಂಡು ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ ಇಂಡಿಯಾ ವಿಸ್ತರಣೆ ಕೈಬಿಡಬೇಕು ಎನ್ನುವ ಧ್ವನಿ ಎತ್ತಲಾರದ ಇವರ ಧೋರಣೆ ಖಂಡಿಸಿ ಬೆಳಗಾವಿ ಅಧಿವೇಶನದತ್ತ ಡಿ.16 ರಂದು ಕೊಪ್ಪಳ ನಗರ ಮತ್ತು ಹಳ್ಳಿ ನಡೆಯಿರಿ ಎಂದು ಕರೆ ಕೊಟ್ಟರು.

ಪುಸ್ತಕ ಪ್ರಕಾಶಕ ಡಿ.ಎಂ. ಬಡಿಗೇರ ಮಾತನಾಡಿ, ತಜ್ಞರ ಸಮಿತಿ ಯಾವತ್ತೂ ಕೊಪ್ಪಳದ ಕಾರ್ಖಾನೆ ಧೂಳು ಬಾಧಿತರ ಹಳ್ಳಿಗಳ ಮುಖ ನೋಡಿಲ್ಲ. ಈಗಾಗಲೇ ಪತ್ರಿಕೆಗಳಲ್ಲಿ ದೇಶದಲ್ಲಿ ಕೊಪ್ಪಳ ಶುದ್ಧ ಗಾಳಿಯಲ್ಲಿ ಹತ್ತರಲ್ಲಿ ಮೂರನೇ ಸ್ಥಾನ, ನಾಲ್ಕನೇ ಸ್ಥಾನ ಎಂದು ನಕಲಿ ಏಜನ್ಸಿಗಳಿಂದ ವರದಿ ಮಾಡಿಸಿ ಪ್ರಚಾರ ಮಾಡಿಸುತ್ತಿರುವುದು ನೋಡಿದರೆ ನಮಗೆ ಆತಂಕವಲ್ಲ ಜೀವಾತಂಕ ಹೆಚ್ಚಾಗಿದೆ. ಇದನ್ನು ಸರ್ಕಾರ ಪರಿಗಣಿಸದೆ ಕೈಬಿಡಬೇಕು. ನಿಮ್ಮ ಉನ್ನತ ತಾಂತ್ರಿಕ ಸಮಿತಿಯಲ್ಲಿ ಬಾಧಿತ ಹಳ್ಳಿಗಳ ಪ್ರತಿನಿಧಿಗಳು, ಹೋರಾಟ ಮುಖಂಡರು ಇರಬೇಕು. ಅಂದಾಗ ಮಾತ್ರ ನಿಮ್ಮ ತಂತ್ರಜ್ಞರ ಸಮಿತಿಯ ವರದಿಗೆ ಮಾನ್ಯತೆ ಇರುತ್ತದೆ. ಇದು ಏಕಮುಖವಾಗಿ ನೀವು ಮಾಡುವ ವರದಿ ಜನರ ಜೀವನ, ಆರೋಗ್ಯ ಉಳಿಸಲು ಸಾಧ್ಯವಿಲ್ಲ ಎಂದರು.

ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ಸಿ.ವಿ. ಜಡಿಯವರ್, ಜಂಟಿ ಕ್ರಿಯಾ ವೇದಿಕೆಯ ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಮಂಂಜುನಾಥ ಜಿ. ಗೊಂಡಬಾಳ, ಶಂಭುಲಿಗಪ್ಪ ಹರಗೇರಿ, ಬಸವರಾಜ ಶೀಲವಂತರ, ಮಹಾದೇವಪ್ಪ ಮಾವಿನಮಡು, ಬಸವರಾಜ್ ಜಟ್ಟೆಪ್ಪನವ, ಕುಷ್ಟಗಿ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಬೆಟ್ಟಪ್ಪ ಯತ್ನಟ್ಟಿ, ಹೊಸಳ್ಳಿ ಗ್ರಾಮದ ನಾಗರಾಜ ಪಿ. ಹನುಮಂತಪ್ಪ ಡಿ. ಸುಭಾನಸಾಬ್‌, ಮೂಕಪ್ಪ ಮೇಸ್ತ್ರಿ, ಗಾಳೆಪ್ಪ ಮುಂಗೋಲಿ, ಮಖ್ಬೂಲ್ ರಾಯಚೂರು, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಶಾಂತಯ್ಯ ಅಂಗಡಿ, ಗವಿಸಿದ್ದಪ್ಪ ಹಲಿಗಿ ಪಾಲ್ಗೊಂಡರು.