ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ನಗರ ಸೇರಿ ಜಿಲ್ಲೆಯ ವಿವಿಧೆಡೆ ಸುರಿದ ಭಾರೀ ಮಳೆಯಿಂದಾಗಿ ರೈತರ ಮುಖದಲ್ಲಿ ಸಂತಸ ಮೂಡಿದೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ಇಷ್ಟು ದಿನ ಬರಿದಾಗಿದ್ದ ಹಳ್ಳ-ಕೊಳ್ಳುಗಳು ತುಂಬುತ್ತಿದ್ದು, ರೈತರ ಜಮೀನುಗಳು ಮಳೆನೀರಿನಿಂದ ಕೆರೆಯಂತಾಗಿವೆ.ಗುರುವಾರ ಮಧ್ಯರಾತ್ರಿ 1 ರಿಂದ ಆರಂಭಗೊಂಡ ಮಳೆ ಬೆಳಗಿನ ಜಾವದವರೆಗೂ ಜೋರಾಗಿ ಸುರಿಯಿತು. ಇದರಿಂದಾಗಿ ರಾಯಚೂರು ನಗರದ ತಗ್ಗು ಪ್ರದೇಶದ ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿದರೆ, ಪ್ರಮುಖ ರಸ್ತೆ ವೃತ್ತಗಳು ಜಲಾವೃತಗೊಂಡವು. ಚರಂಡಿಗಳು ತುಂಬಿ ರಸ್ತೆಗಳ ಮೇಲೇ ಮಳೆ ನೀರು ಮಿಶ್ರಿತ ತ್ಯಾಜ್ಯ ರಸ್ತೆ ಮೇಲೆ ಬಂದು ರಾಡಿಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಇಡೀ ರಾತ್ರಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.
ನಗರದ ಹೈದರಾಬಾದ್ ಮುಖ್ಯ ರಸ್ತೆಯ ಒಪೆಕ್ ಆಸ್ಪತ್ರೆ ಸಮೀಪದ ರೈಲ್ವೆ ಸೇತುವೆಯಲ್ಲಿ ನೀರು ಸಂಗ್ರಹವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದ್ದರಿಮದ ಕಾರು, ಬೈಕ್ ಸವಾರರು ಪರದಾಡಿದರು. ಸೇತುವೆ ಕೆಳಕೆ ನೀರು ನಿಂತಿದ್ದರಿಂದ ಕೆಲ ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಹೆಚ್ಚಿನ ಪ್ರಮಾಣದ ನೀರು ನಿಂತಿದ್ದರಿಂದ ಬೈಕ್ ಸವಾರರು ಪರದಾಡುವಂತಾಯಿತು. ನಂತರ ಸ್ಥಳೀಯ ಸಿಬ್ಬಂದಿ ಬಂದು ನೀರು ಹರಿಯಲು ದಾರಿ ಮಾಡಿದ ಬಳಿಕ ಪ್ರಯಾಣಿಕರು ಸುಗಮವಾಗಿ ಓಡಾಡುವಂತಾಯಿತು.ನಗರದಲ್ಲಿ ರಸ್ತೆಗಳೆಲ್ಲ ಚರಂಡಿ ನೀರು ಹರಿದ ಪರಿಣಾಮ ಸಂಪೂರ್ಣ ರಾಡಿ ರಾಡಿಯಾಗಿದ್ದವು. ನಗರದ ಗಂಜ್ ವೃತ್ತದ ಬಳಿ ಚರಂಡಿ ಸ್ವಚ್ಛತೆ ಕಾರ್ಯ ಕೈಗೊಂಡಿದ್ದು, ನಿರಂತರವಾಗಿ ಸುರಿದ ಮಳೆಯಿಂದ ರಸ್ತೆಯಲ್ಲೆಲ್ಲ ಚರಂಡಿ ನೀರು ಹರಿದು ಅವಾಂತರ ಸೃಷ್ಟಿಯಾಯಿತು. ಇನ್ನೂ ಪ್ರಮುಖ ಬಡಾವಣೆಗಳಲ್ಲೂ ನೀರು ಶೇಖರಣೆಗೊಂಡು ಓಡಾಡುವುದೇ ಕಷ್ಟ ಎನ್ನುವಂತಾಗಿತ್ತು. ಎಪಿಎಂಸಿ ಆವರಣದಲ್ಲಿ ಮಳೆ ನೀರು ಬಂದಿದ್ದರಿಂದ ರೈತರು, ವರ್ತಕರು ಸಮಸ್ಯೆ ಎದುರಿಸಿದರು.
ಮಳೆಯಿಂದ ತಾಲೂಕಿನ ಗಿಲ್ಲೇಸೂಗು ಹೋಬಳಿಯ ಬಿ.ಯದ್ಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಳ್ಳ ತುಂಬಿ ಹರಿದ ಪರಿಣಾಮ ಕೊಚ್ಚಿ ಹೋಗಿದೆ. ಬಿಚ್ಚಾಲಿ ಗ್ರಾಪಂ ವ್ಯಾಪ್ತಿಯ ಬಿ.ಯದ್ಲಾಪುರು ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ರಸ್ತೆ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡು ದುರಸ್ತಿಯಾಗದೇ ದಿನ 60ಕ್ಕು ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಿನ ನಿತ್ಯ ಓಡಾಟಕ್ಕೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟಂತಹ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಕಡಿತವಾಗಿದ್ದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದು ಪ್ರತಿದಿನ ಪ್ರಯಾಣಕ್ಕೆ ಸ್ಥಳೀಯ ನಾಗರಿಕರಿಗೆ ತೊಂದರೆಯಾಗುವುದರಿಂದ ಈ ಬಗ್ಗೆ ಯಾವುದೇ ಅಧಿಕಾರಿಗಗಳು, ರಾಜಕಾರಣಿಗಳು ಗಮನಹರಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಅದೇ ರೀತಿ ತಾಲೂಕಿನ ಇಡಪನೂರಿನ ಹಳ್ಳ ತುಂಬಿದ್ದರಿಂದ ಜನರು ನಡೆದುಕೊಂಡೇ ಹಳ್ಳ ದಾಟುತ್ತಿದ್ದಾರೆ. ತಾಲೂಕಿನ ಹಲವಾರು ಹೋಬಳಿಗಳ ಗ್ರಾಮಗಳ ಅಕ್ಕ-ಪಕ್ಕದ ಜಮೀನುಗಳಲ್ಲಿ ನೀರು ನಿಂತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು.
ಇನ್ನು ಮಾನ್ವಿ ಪಟ್ಟಣ ಸೋನಿಯಾಗಾಂಧಿ ಬಡಾವಣೆಯಲ್ಲಿ ಗಾಳಿ ಮಳೆಯಿಂದಾಗಿ ಮನೆಗಳ ಮೇಲೆ ಹಾಕಲಾಗಿದ್ದ ಟಿನ್‌ಶೆಡ್ ಕಿತ್ತಿಹೋಗಿವೆ. ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮದ ವೆಂಕಟೇಶ್ವರ ದೇವಸ್ಥಾನದ ಪ್ರಾಂಗಣದ ಮೇಲ್ಚಾವಣಿ ಕುಸಿದುಬಿದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ, ಮಳೆಯಿಂದಾಗಿ ತಾತ್ಕಾಲಿಕ ಸಮಸ್ಯೆಗಳು ಎದುರಾಗಿದ್ದರು ಸಹ ಬರಗಾಲದ ಬಳಿಕ ಮುಂಗಾರು ಆರಂಭದ ಪೂರ್ವದಲ್ಲಿ ಸುರಿಯುತ್ತಿರುವ ಮಳೆಯು ರೈತರಲ್ಲಿ ಸಂತೋಷವನ್ನುಂಟು ಮಾಡಿದೆ.