ವಿವಿಧ ಸಂಘ ಸಂಸ್ಥೆಗಳು ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಶ್ಲಾಘನೀಯ
ಹೂವಿನಹಡಗಲಿ: ವಿವಿಧ ಸಂಘ ಸಂಸ್ಥೆಗಳು ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಶ್ಲಾಘನೀಯ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ರಾಮಸ್ವಾಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಿಗಂಬರ ಜೈನ ಸಮಾಜದ ಪ್ರಥಮ ಅಧ್ಯಕ್ಷರಾಗಿದ್ದ ಜೈನರ ನಾಗರಾಜ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ನಿಮಿತ್ತ ಬೆಂಗಳೂರಿನ ತಥಾಗತ್ ಹೃದಯ ರೋಗ ಸಂಸ್ಥೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ರಂಗಭಾರತಿ, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್, ಶ್ರೀರಾಮ ಸನ್ಮಂಗಳಂ, ಭಾರತೀಯ ಜೈನ್ ಮಿಲನ್, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ, ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಬಡ ಜನರು ಅನೇಕ ಕಾಯಿಲೆಗಳಿಗೆ ಸಾವಿರಾರು ರುಪಾಯಿ ವೆಚ್ಚದಲ್ಲಿ ಚಿಕಿತ್ಸೆ ಪಡೆಯಲು ತೀವ್ರ ತೊಂದರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಾಲೂಕಿನಾದ್ಯಂತ ಕೆಲವು ಸಂಘ ಸಂಸ್ಥೆಗಳು ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವುದು ಉತ್ತಮ ನಡೆ ಎಂದರು.ತಥಾಗತ್ ಹೃದಯ ರೋಗ ಸಂಸ್ಥೆಯ ಅಧ್ಯಕ್ಷ ಡಾ.ಮಹಾಂತೇಶ್ ಆರ್. ಚರಂತಿಮಠ, ಡಾ.ಸುಭಾಷ್ ಚಂದ್ರ, ಹಿರಿಯ ವೈದ್ಯ ಡಾ.ಎಂ. ಧರ್ಮಣ್ಣ, ರಾಮಸ್ವಾಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ರಾಕೇಶಯ್ಯ ರಾಮಸ್ವಾಮಿ, ಜೈನ ಸಮಾಜದ ಅಧ್ಯಕ್ಷ ಎಚ್.ಎಸ್. ಪ್ರಶಾಂತ್, ರಂಗಭಾರತಿಯ ಎಂ.ಪಿ.ಸುಮಾ ವಿಜಯ್, ವಾರದ ಗೌಸ್ ಮೊಹಿದ್ದೀನ್, ಚೇತನ್ ರಾಮಸ್ವಾಮಿ, ಬಾಹುಬಲಿ ಜೈನ್, ಆಯೋಜಕರಾದ ಸಂತೋಷ್ ಜೈನ್ ಇದ್ದರು.
ಹೃದ್ರೋಗ, ರಕ್ತದಲ್ಲಿ ಸಕ್ಕರೆ ಅಂಶ, ಕ್ಯಾನ್ಸರ್ ಪತ್ತೆ ಹಚ್ಚುವ, ರಕ್ತದೊತ್ತಡ, ಕಿವಿ ಗಂಟಲು ಮೂಗು, ಕಣ್ಣಿನ ಪರೀಕ್ಷೆ ಒಳಗೊಂಡಂತೆ ವಿವಿಧ ಖಾಯಿಲೆ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಿದರು.ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಜನರು ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು.