ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಜನಪದ ಇತಿಹಾಸದ ಮೇಲ್ಪದರವನ್ನಷ್ಟೇ ತಿಳಿದು ಸ್ವಂತ ಚಿಂತನೆಯ ನೆಲೆಯಿಲ್ಲದೆ ಮೂಢನಂಬಿಕೆಗಳ ನೆರಳಲ್ಲಿ ಈಗಲೂ ಸಮಾಜ ಬದುಕುತ್ತಿರುವುದು ವಿಪರ್ಯಾಸ. ಸತ್ಯದ ಆಳವನ್ನು ಅರಿಯಲು ಸಂಶೋಧನೆಗಳಾಗಬೇಕಿದೆ ಎಂದು ಮೈಸೂರು ವಿವಿಯ ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ತಿಮ್ಮಯ್ಯ ಅಭಿಪ್ರಾಯಪಟ್ಟರು.ತುಮಕೂರು ವಿವಿಯ ಶ್ರೀ ಜುಂಜಪ್ಪ ಅಧ್ಯಯನ ಪೀಠ ಹಾಗೂ ವಿವಿ ಕಲಾ ಕಾಲೇಜಿನ ಕನ್ನಡ ವಿಭಾಗವು ಗುರುವಾರ ಆಯೋಜಿಸಿದ್ದ ಜನಪದ ಮಹಾಕಾವ್ಯಗಳಲ್ಲಿ ಶೈವ ಪರಂಪರೆ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.ವಿಶ್ವವಿದ್ಯಾನಿಲಯಗಳಲ್ಲಿರುವ ಹತ್ತಾರು ಅಧ್ಯಯನ ಪೀಠಗಳು ಅನುದಾನದ ಹಾಗೂ ಸೂಕ್ತ ಸೌಲಭ್ಯಗಳ ಕೊರತೆಯಿಂದ ನಲುಗುತ್ತಿವೆ. ಜನಪದ ಸಂಸ್ಕೃತಿಯನ್ನು ಸೂಕ್ಷ್ಮಚಿಂತನೆಗೆ ಒಳಪಡಿಸಿ, ವೈಚಾರಿಕವಾಗಿ, ವೈಜ್ಞಾನಿಕವಾಗಿ, ತಾತ್ವಿಕ ನೆಲೆಗಟ್ಟಿನಲ್ಲಿ, ಬೌದ್ಧಿಕವಾಗಿ ಪರಂಪರೆಯ ಮೂಲ ಸ್ವರೂಪವನ್ನು ತಿಳಿಯಲು ಅಧ್ಯಯನಪೀಠಗಳು ಮುಂದಾಗಬೇಕು ಎಂದರು.ವಿವಿಧ ಪಂಥಗಳ ವಿರುದ್ಧ ಹೋರಾಡಿದ ಜುಂಜಪ್ಪನ ಬದುಕಿನ ಹಿನ್ನಲೆಯನ್ನು ಸಾಂಕೇತಿಕ ಅರ್ಥದಲ್ಲಿ ಗ್ರಹಿಸಬೇಕು. ಜನಪದ ಕಾವ್ಯಗಳನ್ನು ಜನಸಾಮಾನ್ಯರು ಕಟ್ಟಿದರೆಂಬುದು ವಾಸ್ತವಕ್ಕೆ ದೂರವಾದ ಮಾತು. ಆಗಿನ ಕಾಲದ ಮಠ-ಮಂದಿರಗಳು ನೇಮಿಸಿದ ಕವಿಗಳಿಂದಾಗಿ ಜನಪದ ಕಾವ್ಯಗಳು ಹುಟ್ಟಿದವು.ಪಂಥಗಳು ತಮಗೆ ಅನುಕೂಲವಾಗುವಂತೆ ಕಾವ್ಯಗಳನ್ನು ರಚಿಸಿ ಜನರಿಗೆ ತಲುಪಿಸಿದರು ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಸಚಿವೆ ನಾಹಿದಾ ಜಮ್‌ಜಮ್, ಜನಪದ ಎಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ, ಜನಪದ ಕಾವ್ಯಗಳು. ಕಲಾವಿದರು ಮುಖ್ಯ ಭೂಮಿಕೆಯಿಂದ ಮರೆಯಾಗಿದ್ದಾರೆ. ಹಾಡಿನ ಜೀವ ತೆಗೆಯುವ ರ್ಯಾ ಪರ್‌ಗಳನ್ನು ಪೋಷಿಸುವ ಬದಲು ಪದಗಳಿಗೆ ಜೀವತುಂಬಿ ಕಾವ್ಯಗಳನ್ನು ಕಟ್ಟುವ ಜನಪದರನ್ನು ಪ್ರೋತ್ಸಾಹಿಸೋಣ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಕರ್ನಾಟಕದ ಸಂಸ್ಕೃತಿಯನ್ನು ಪರಿಭಾವಿಸಿಕೊಂಡಿರುವ ಬುಡಕಟ್ಟಿನ ನಾಯಕ ಜುಂಜಪ್ಪ ಪಶುಪಾಲಕರ ಆರಾಧ್ಯದೈವ ಎಂದು ತಿಳಿಸಿದರು.ಜನಪದ ಮಹಾಕಾವ್ಯಗಳಲ್ಲಿ ಶೈವ ಪರಂಪರೆ ವಿಷಯದ ಕುರಿತು ವಿಚಾರ ಗೋಷ್ಠಿಗಳು ನಡೆದವು. ಜಾನಪದ ವಿದ್ವಾಂಸಡಾ. ಜಿ. ವಿ. ಆನಂದಮೂರ್ತಿ, ವಿಮರ್ಶಕ ಡಾ.ಸುರೇಶ್ ನಾಗಲಮಡಿಕೆ ಹಾಗೂ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.ವಿವಿಯ ಜುಂಜಪ್ಪ ಅಧ್ಯಯನ ಪೀಠದ ಸಂಯೋಜಕ ಡಾ.ಎಸ್. ಶಿವಣ್ಣ ಬೆಳವಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ.ಉಪಸ್ಥಿತರಿದ್ದರು.ಸಹಪ್ರಾಧ್ಯಾಪಕಿಡಾ.ಎಚ್.ಆರ್.ರೇಣುಕಾ ನಿರೂಪಿಸಿದರು.