ಆಧಾರ್ ಇಕೆವೈಸಿ ಮಾಡಿಸಲು ಕನಕಗಿರಿ ತಾಲೂಕಿನ ಜನ ನಾಡಕಚೇರಿ ಹಾಗೂ ಅಂಚೆ ಕಚೇರಿ ಎದುರು ರಾತ್ರಿಯಿಡಿ ಜಾಗರಣೆ ಮಾಡುತ್ತಿದ್ದಾರೆ!
ಪ್ರಹ್ಲಾದರೆಡ್ಡಿ ಮಾದಿನಾಳ
ಕನಕಗಿರಿ: ಆಧಾರ್ ಇಕೆವೈಸಿ ಮಾಡಿಸಲು ತಾಲೂಕಿನ ಜನ ನಾಡಕಚೇರಿ ಹಾಗೂ ಅಂಚೆ ಕಚೇರಿ ಎದುರು ರಾತ್ರಿಯಿಡಿ ಜಾಗರಣೆ ಮಾಡುತ್ತಿದ್ದಾರೆ!ಹೌದು, ತಾಲೂಕಿನ ವ್ಯಾಪ್ತಿಗೆ ೬೦ಕ್ಕೂ ಹೆಚ್ಚು ಗ್ರಾಮಗಳು ಒಳಪಡುತ್ತಿದ್ದು, ಹುಲಿಹೈದರ ಹಾಗೂ ನವಲಿ ಹೋಬಳಿಯ ನಾಡಕಚೇರಿಗಳಲ್ಲಿ ಆಧಾರ್ ಸೇವೆ ಸ್ಥಗಿತಗೊಂಡಿದೆ. ತಾಲೂಕು ಕೇಂದ್ರಲ್ಲಿರುವ ನಾಡಕಚೇರಿ ಮತ್ತು ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ಇ-ಕೆವೈಸಿಯನ್ನು ಮಾಡಲಾಗುತ್ತಿದ್ದು, ಅದು ಕೇವಲ ೬೦ ಜನಕ್ಕೆ ಸೀಮಿತವಾಗಿದೆ. ಮರುದಿನ ಬೆಳಗ್ಗೆ 10 ಗಂಟೆಗೆ ತೆರೆಯುವ ಕಚೇರಿಗಾಗಿ ಮುಂಚಿನ ದಿನ ಸಂಜೆ ೭ ಗಂಟೆಯಿಂದಲೇ ಪಾಳಿ ಹಚ್ಚುತ್ತಿದ್ದಾರೆ.
ಪಡಿತರ ಚೀಟಿಗೆ ಹೆಬ್ಬೆಟ್ಟು ಕೊಡಲು ೬ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಆಧಾರ್ ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದರಿಂದ ಪಟ್ಟಣದ ಅಂಚೆ ಕಚೇರಿ ಹಾಗೂ ನಾಡಕಚೇರಿ ಮುಂದೆ ಜಾಗರಣೆ ನಡೆಸುತ್ತಿದ್ದು, ಪಕ್ಕದ ಗಂಗಾವತಿ ಹಾಗೂ ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಹೋದರೂ ಅಲ್ಲಿಯೂ ನೂಕುನುಗ್ಗಲು ಇರುವುದರಿಂದ ತಾಲೂಕಿನ ಜನತೆಗೆ ಆಧಾರ್ ಇಕೆವೈಸಿ ಎಲ್ಲಿ ಮಾಡಿಸಬೇಕೆನ್ನುವುದು ಸಮಸ್ಯೆಯಾಗಿದೆ.ಸಚಿವರ ಕ್ಷೇತ್ರದಲ್ಲೇ ಇಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಸ್ವ-ಕ್ಷೇತ್ರದಲ್ಲಿ ಹೋಬಳಿಗೊಂದು ಆಧಾರ್ ಕೇಂದ್ರ ಇಲ್ಲವಾದರೆ ಹೇಗೆ? ತಾಲೂಕು ಕೇಂದ್ರದಲ್ಲಿ ಎರಡೇ ಆಧಾರ್ ಕೇಂದ್ರಗಳಿದ್ದು, ೬೦ ಜನರಿಗೆ ಮಾತ್ರ ಇಕೆವೈಸಿ ಮಾಡಲು ಅವಕಾಶವಿದೆ. ನಿತ್ಯ ೨೦೦ ಜನ ಬರುತ್ತಿದ್ದು, ಉಳಿದವರಿಗೆ ನಾಳೆ, ನಾಡಿದ್ದು ಮಾಡುತ್ತೇವೆಂದು ಗಣಕಯಂತ್ರ ಸಹಾಯಕರು ಜನರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಹರಸಾಹಸ: ರಾತ್ರಿಯಿಡಿ ಸೊಳ್ಳೆ ಕಚ್ಚಿಸಿಕೊಂಡು ನಿದ್ದೆಗೆಟ್ಟು ಜನರು ಆಧಾರ್ ಇಕೆವೈಸಿ ಮಾಡಿಸುತ್ತಿದ್ದಾರೆ. ಹೋಬಳಿ, ಗ್ರಾಮ ಒನ್ ಕೇಂದ್ರಗಳಲ್ಲಿಯೂ ಇಕೆವೈಸಿಗೆ ಅವಕಾಶ ಇಲ್ಲದಿರುವುದಕ್ಕೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ವಾರದಿಂದ ಈ ಸಮಸ್ಯೆಯಾಗಿದ್ದು, ನೂರಾರು ಜನ ನಿತ್ಯ ಇಕೆವೈಸಿ ಮಾಡಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಪಪಂ ಸದಸ್ಯ ಶೇಷಪ್ಪ ಹೇಳಿದರು.ಇನ್ನೆರಡು ಆರಂಭಿಸುತ್ತೇವೆ: ತಾಲೂಕಿನಲ್ಲಿ ಆಧಾರ್ ಇಕೆವೈಸಿಗೆ ಸಂಬಂಧಿಸಿದಂತೆ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದೆ. ನವಲಿ ಹಾಗೂ ಹುಲಿಹೈದರ ಹೋಬಳಿ ಕೇಂದ್ರಗಳಲ್ಲಿ ಆಧಾರ್ ಸೇವೆ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ತಹಸೀಲ್ದಾರ್ ಚಂದ್ರಶೇಖರ ಗಾಳಿ ಹೇಳಿದರು.