ಸಾರಾಂಶ
ಬೆಳಗ್ಗೆ ಕೆಲಸಕ್ಕೆಂದು ಹೊರಗಡೆ ಹೊರಟರೆ ಸಾಕು ಬಿಸಿಲ ಧಗೆಗೆ ಮೈಯಿಂದ ಇಳಿವ ಬೆವರು, ಬಾಯಾರಿಕೆ, ನೀರಡಿಕೆ, ಆಯಾಸಗಳಿಂದ ಕೊಪ್ಪಳ ಜನತೆ ಬಸವಳಿದಿದ್ದಾರೆ
ಕೊಪ್ಪಳ: ಬೆಳಗ್ಗೆ 9 ಗಂಟೆಯಾದರೆ ಸಾಕು ಸೂರ್ಯನ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ. ನೆತ್ತಿ ಸುಡುವ ಬಿಸಿಲು ಬೆಳಗ್ಗೆಯೇ ಆರಂಭವಾಗುವುದರಿಂದ ಜನರು ಬಿಸಿಲ ಝಳಕ್ಕೆ ತತ್ತರಿಸುತ್ತಿದ್ದಾರೆ.
ಅಬ್ಬಾ ಎಂತಹ ಬಿಸಿಲು ಎಂದು ನೆತ್ತಿ ಮೇಲೆ ಕೈ ಇಟ್ಟು ಹೆಜ್ಜೆ ಹಾಕುತ್ತಿದ್ದಾರೆ. ಮನೆಯಿಂದ ಯಾಕಾದರೂ ಹೊರ ಬಂದೇವು ಎಂದು ಪಶ್ಚಾತಾಪ ಪಡುವಂತಾಗಿದೆ.ಬೆಳಗ್ಗೆ ಕೆಲಸಕ್ಕೆಂದು ಹೊರಗಡೆ ಹೊರಟರೆ ಸಾಕು ಬಿಸಿಲ ಧಗೆಗೆ ಮೈಯಿಂದ ಇಳಿವ ಬೆವರು, ಬಾಯಾರಿಕೆ, ನೀರಡಿಕೆ, ಆಯಾಸಗಳಿಂದ ಕೊಪ್ಪಳ ಜನತೆ ಬಸವಳಿದಿದ್ದಾರೆ. ಜನರಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳೆಲ್ಲ ಬಿಸಿಲಿನ ಹೊಡೆತಕ್ಕೆ ಬೆರಳಣಿಕೆಯಷ್ಟು ಜನರು ಮಾತ್ರ ಕಾಣ ಸಿಗುತ್ತಿದ್ದಾರೆ. ಬಾಯಾರಿಕೆ, ನೀರಡಿಕೆ ಅಧಿಕ ಆಗುತ್ತಿದೆ.
ತಂಪು ಪಾನೀಯ ಮೊರೆ: ನೆತ್ತಿ ಸುಡುವ ಬಿಸಿಲು ಒಂದು ಕಡೆಯಾದರೆ, ಧಗೆಯಿಂದ ತಣ್ಣಗಾಗಲು ಜೇಬು ಸುಟ್ಟುಕೊಳ್ಳುವ ಸಂದಿಗ್ಧ ಸ್ಥಿತಿ ಒದಗಿದೆ. ಬಿಸಿಲ ಝಳದಿಂದ ಪಾರಾಗಲು ಜನರು ತಂಪು ಪಾನೀಯ ಮೊರೆ ಹೋಗುತ್ತಿದ್ದಾರೆ. ಭಾರಿ ಬೇಡಿಕೆಯಿಂದ ಹಣ್ಣು, ತಂಪು ಪಾನೀಯ ಹಾಗೂ ಎಳನೀರು ಬೆಲೆ ಸಹ ಗಗನಕ್ಕೇರಿದೆ. ತಂಪು ಪಾನೀಯ, ಮಜ್ಜಿಗೆ, ಎಳನೀರು, ಕಲ್ಲಂಗಡಿ ಹಣ್ಣು, ಜ್ಯೂಸ್, ಶರಬತ್, ಕಬ್ಬಿನ ಹಾಲು, ಐಸ್‌ಕ್ರೀಮ್‌ಗಳ ಮೊರೆ ಹೋಗುತ್ತಿದ್ದಾರೆ. ಎಳನೀರು ₹40 ರಿಂದ ₹ 50, ಕಲ್ಲಂಗಡಿ ಕೆಜಿ ₹35 ರಿಂದ ₹ 40, ಜ್ಯೂಸ್ ಬೆಲೆ ಸಹ ಏರಿಕೆಯಾಗಿದೆ.ನೆರಳಿನ ಮೊರೆ:ಸುಡುವ ಬಿಸಿಲಿಗೆ ಜನರು ಪಾರ್ಕ್, ಗಿಡ ಮರಗಳ ಮೊರೆ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕುರಿಗಾಹಿಗಳು ಸಹ ಕುರಿ ಸಮೇತ ಗಿಡದ ನೆರಳಿನ ಮೊರೆ ಹೋಗುತ್ತಿದ್ದಾರೆ. ಗಿಡದ ಬುಡದಲ್ಲಿ ಜನರು ತಂಪು ಅರಸಿ ಹೋಗುತ್ತಿದ್ದು ಬೆಳಗ್ಗೆಯಿಂದ ಸಂಜೆವರೆಗೂ ಅಲ್ಲಿಯೇ ಕಾಲ ಕಳೆದು ಬರುತ್ತಿದ್ದಾರೆ.
ಜನರು ಬೆಳಗ್ಗೆ 10 ಗಂಟೆ ನಂತರ ಹಾಗೂ ಮಧ್ಯಾಹ್ನ 4 ಗಂಟೆ ಒಳಗೆ ಬಿಸಿಲ ಝಳಕ್ಕೆ ಒಳಪಡುವ ಯಾವುದೇ ಕೆಲಸ ಮಾಡಬಾರದು. ಅರ್ಧ ಗಂಟೆಗೊಮ್ಮೆಯಾದರೂ ನೀರು ಸೇವಿಸಬೇಕು. ಹಣ್ಣಿನ ಜ್ಯೂಸ್, ಎಳನೀರು ಕುಡಿಯಬೇಕು. ಆದಷ್ಟು ಬಿಸಿಲ ಝಳದಿಂದ ದೂರವಿರಬೇಕು. ಈಗಾಗಲೇ ಕೊಪ್ಪಳದ ಬಿಸಿಲ ತಾಪ 40 ಡಿಗ್ರಿಗಿಂತಲೂ ಅಧಿಕ ಆಗಿದೆ. ಯಾರಿಗಾದರೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡರೆ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಕೊಪ್ಪಳ ಡಿಎಚ್ಒ ಟಿ.ಲಿಂಗರಾಜು ತಿಳಿಸಿದ್ದಾರೆ. ಬಿಸಿಲು ನೆತ್ತಿ ಸುಡುತ್ತಿದೆ. ಹೊರಗಡೆ ಬರಲು ಸಹ ಆಗುತ್ತಿಲ್ಲ. ಅಧಿಕ ಬಿಸಿಲಿನಿಂದ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತಿದೆ. ಬೆಳಗ್ಗೆ 9 ಗಂಟೆ ಹೊತ್ತಿಗೆ ಬಿಸಿಲ ಧಗೆ ಹೆಚ್ಚಾಗುತ್ತದೆ. ಸಂಜೆ ಆದರೂ ಸಹ ಝಳ, ಸೆಕೆಯ ವಾತಾವರಣ ಅಧಿಕವಾಗಿರುತ್ತದೆ ಎಂದು ಕನಕಪ್ಪ, ರಾಮಣ್ಣ ತಿಳಿಸಿದ್ದಾರೆ.