ಸಾರಾಂಶ
ಬಿಸಿಗಾಳಿಗೆ ಮೈತುಂಬ ಬೆವರಿನ ಒರತೆ. ಹೀಗಾಗಿ ಬೆಳಗ್ಗೆ ಬೇಗ ಎದ್ದು ದೈನದಿಂದ ಚಟುವಟಿಕೆ ಪೂರೈಸುವ ಗಡಿಬಿಡಿ.
ವಸಂತಕುಮಾರ್ ಕತಗಾಲ
ಕಾರವಾರ: ಇಲ್ಲಿ ಬಿಸಿಲಿನ ಝಳ, ಬಿಸಿಗಾಳಿಗೆ ಮೈತುಂಬ ಬೆವರಿನ ಒರತೆ. ಹೀಗಾಗಿ ಬೆಳಗ್ಗೆ ಬೇಗ ಎದ್ದು ದೈನದಿಂದ ಚಟುವಟಿಕೆ ಪೂರೈಸುವ ಗಡಿಬಿಡಿ. ಬಿಸಿಲೇರುತ್ತಿದ್ದಂತೆ ನಿರ್ಜನವಾಗುವ ಬೀದಿಗಳು. ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ದಾಖಲಾದ ತಾಲೂಕಿನ ಸಾವಂತವಾಡ ಹೋಬಳಿಯಲ್ಲಿ ಕಂಡುಬರುವ ನೋಟ ಇದು. ಸದಾಶಿವಗಡ, ಅಸ್ನೋಟಿ, ಸಾವಂತವಾಡ, ಹಣಕೋಣ......ಹೀಗೆ ಕಾಳಿ ನದಿಗುಂಟ ಇರುವ ಸಾವಂತವಾಡ ಹೋಬಳಿಯಲ್ಲಿ ಬಿರು ಬಿಸಿಲಿನ ನರ್ತನಕ್ಕೆ ಜನತೆ ಬಸವಳಿಯುತ್ತಿದ್ದಾರೆ. 15-20 ದಿನಗಳಿಂದ ಎರಡು ಬಾರಿ ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶ ಇಲ್ಲಿ ದಾಖಲಾಗಿದೆ. ಮಾ.11 ರಂದು ಬೆಳಗ್ಗೆಯಿಂದ ನಂತರದ 24 ಗಂಟೆಗಳಲ್ಲಿ ಉಷ್ಣಾಂಶ 42.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅದಕ್ಕೂ ಕೆಲ ದಿನಗಳ ಮುನ್ನ 42.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಕರಾವಳಿಯಲ್ಲಿ ಆದ್ರತೆ 80-85ರಷ್ಟು ಇರುವುದರಿಂದ ಸೆಕೆಯ ತೀವ್ರತೆ, ಬೆವರು ಹರಿಯುವುದು ಹೆಚ್ಚುತ್ತದೆ. ಕರಾವಳಿಯುದ್ದಕ್ಕೂ ಜನತೆ ಬಿಸಿಲಿನ ಬೇಗುದಿಯಿಂದ ತೊಂದರೆಗೊಳಗಾಗಿದ್ದರೆ ಸಾವಂತವಾಡ ಹೋಬಳಿಯ ಜನತೆ ಇನ್ನಷ್ಟು ಬಸವಳಿದಿದ್ದಾರೆ. ಸಾವಂತವಾಡ ಹೋಬಳಿಯ ಜನತೆ ಬೆಳಗಾಗುತ್ತಿದ್ದಂತೆ ದೈನದಿಂದ ಚಟುವಟಿಕೆಗಳನ್ನು ಲಗುಬಗೆಯಿಂದ ಪೂರೈಸುತ್ತಾರೆ. ಓಡಾಟ ಇರಲಿ, ದಿನಸಿ ತರವುದಾಗಲಿ, ಬೇರೆ ಏನೇ ಕೆಲಸಗಳಿದ್ದರೂ ಅದನ್ನೆಲ್ಲ 10-11 ಗಂಟೆಯೊಳಗೆ ಮುಗಿಸುತ್ತಾರೆ. ನಂತರ ಊರಿಗೆ ಊರೇ ಸ್ತಬ್ದವಾಗುತ್ತದೆ. ಹೊರಗಡೆ ಯಾರ ಸಂಚಾರವೂ ಕಂಡುಬರದು. ಮನೆಯೊಳಗೂ ಶರ್ಟು, ಟೀ ಶರ್ಟು ಕೇಳಲೇಬೇಡಿ. ಮತ್ತೆ ಮನೆಯಿಂದ ಹೊರಬರುವುದು ಸಂಜೆ 5 ಗಂಟೆಯ ನಂತರವೇ. ಅಪ್ಪಿತಪ್ಪಿ ಮಧ್ಯಾಹ್ನ ಹೊರಗಡೆ ಹೋಗಬೇಕಾಗಿ ಬಂದರೆ ಬೆವರಿನಿಂದ ತೊಯ್ದು ತೊಪ್ಪೆಯಾಗಲೇಬೇಕು. ಸುಡು ಬಿಸಿಲಿಗೆ ಬಳಲಿ ಮನೆಗೆ ಬಂದರೆ ಸಾಕು ಎಂಬ ಧಾವಂತ ಉಂಟಾಗುತ್ತದೆ. ರಾತ್ರಿಯಂತೂ ಕರೆಂಟು ಕೈಕೊಟ್ಟರೆ ಬೆವರಿನ ಸಿಂಚನ, ಜೊತೆಗೆ ಸೊಳ್ಳೆಗಳ ಕಾಟಸದ್ಯ ಕುಡಿಯುವ ನೀರಿಗೆ ಬರ ಎದುರಾಗಿಲ್ಲ. ಆದರೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದೆ ರೀತಿ ಬಿಸಿಲಿನ ಝಳ ಮುಂದುವರಿದರೆ ಕೆಲವೇ ದಿನಗಳಲ್ಲಿ ನೀರಿಗಾಗಿ ಪರದಾಟ ಶುರುವಾಗುವ ಆತಂಕ ಇದೆ. 65 ವರ್ಷಗಳಿಂದ ಮಾರ್ಚ ತಿಂಗಳಿನಲ್ಲಿ ಈ ರೀತಿ ಸೆಕೆ, ಬಿಸಿಲಿನ ತೀವ್ರತೆ ಉಂಟಾಗಿರುವ ಅನುಭವ ನನಗೆ ಆಗಿಲ್ಲ. ಯಾಕಾಗಿ ಹೀಗಾಗುತ್ತಿದೆ. ಈ ಸೆಕೆಯಲ್ಲಿ ಹೇಗೆ ದಿನ ಕಳೆಯಬೇಕು ಎನ್ನುವುದೇ ತಿಳಿಯದಾಗಿದೆ ಎನ್ನುತ್ತಾರೆ ಸಾವಂತವಾಡ ಗ್ರಾಮದ ಬಾಬು ಲಕ್ಷ್ಮಣ ಸಾವಂತ.