ದಿಢೀರ್‌ ಅಬ್ಬರದ ಗಾಳಿ ಮಳೆಗೆ ಜನ ಹೈರಾಣ

| Published : Jul 27 2024, 12:49 AM IST

ಸಾರಾಂಶ

ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಅಬ್ಬರ ಜೋರಾಗಿದ್ದು, 24 ಗಂಟೆಗಳಲ್ಲೆ 43.17 ಮಿ.ಮೀ ಮಳೆ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಾದ್ಯಂತ ಮಳೆ ಅಬ್ಬರ ಜೋರಾಗಿದ್ದು, ಗಾಳಿ ಮಳೆಗೆ ಹಲವಡೆ ಹಾನಿಯಾಗಿವೆ. ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕು ಭಾಗದಲ್ಲಿ ಗಾಳಿ ಮಳೆಗೆ ಹಲವು ಮನೆಗಳ ಗೋಡೆಗಳು ಕುಸಿದಿವೆ.

ಶಿವಮೊಗ್ಗ ಸಮೀಪದ ಸೋಮಿನ ಕೊಪ್ಪದ ಬಳಿ ಇರುವ ಹೊಸೂರು ಗ್ರಾಮದಲ್ಲಿ ಜೋರು ಮಳೆಗೆ ಕೋಳಿ ಫಾರಂ ಸಂಪೂರ್ಣ ಕುಸಿದು ಬಿದ್ದಿದ್ದು, 5 ಸಾವಿರಕ್ಕೂ ಹೆಚ್ಚಿನ ಕೋಳಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಇಮ್ತಿಯಾಝ್ ಅಹಮದ್ ಎಂಬುವವರಿಗೆ ಸೇರಿದ ಕೋಳಿ ಫಾರಂ ಇದಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಕೋಳಿ ಫಾರಂನ ಶೆಡ್ ಸಂಪೂರ್ಣ ಕುಸಿದು ಬಿದ್ದಿದೆ. ಈ ಕುರಿತು ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಶಿವಮೊಗ್ಗ ತಾಲೂಕಿನಲ್ಲಿ ಒಂದೇ ದಿನಕ್ಕೆ ಶಿವಮೊಗ್ಗ ತಾಲೂಕಿನಲ್ಲಿ 25ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ. ಅದೃಷ್ಠವಶಾತ್ ಜನಗಳು ಇಲ್ಲದ ವೇಳೆ ಬಿದ್ದ ಪರಿಣಾಮ ಯಾವುದೇ ಪ್ರಾಣಿ ಹಾನಿ ಸಂಭವಿಸಿಲ್ಲ.

ಕೋಹಳ್ಳಿ, ಆಯನೂರು, ತ್ಯಾಜ್ಯವಳ್ಳಿ, ಹಾರನಹಳ್ಳಿ, ಮುದ್ದಿನಕೊಪ್ಪ, ಹಾರೋಬೆನವಳ್ಳಿಯಲ್ಲಿ ಸುಮಾರು 20ಕ್ಕೂ ಹೆಚ್ಚುಮನೆಗಳು ಧರೆಗೆ ಉರುಳಿವೆ.

ಮಳೆ ಚುರುಕುಗೊಳ್ಳುತ್ತಿದ್ದಂತೆ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಶುಕ್ರವಾರ ಭದ್ರಾ ಜಲಾಶಯಕ್ಕೆ 35318 ಕ್ಯುಸೆಕ್ ನೀರು ಹರಿದು ಬಂದಿದೆ. 186 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದ ಮಟ್ಟ ಸದ್ಯ 174.3 ಕ್ಕೆ ಏರಿಕೆಯಾಗಿದ್ದು, ಭರ್ತಿಗೆ ಇನ್ನೂ 14 ಅಡಿಯಷ್ಟು ಮಾತ್ರ ಬಾಕಿ ಉಳಿದಿದೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ದಿನದಿಂದ ಏರಿಕೆಯಾಗುತ್ತಿದ್ದು, ಈಗಾಗಲೇ 1804.80 ಅಡಿಗೆ ಏರಿಕೆಯಾಗಿದೆ. ಶುಕ್ರವಾರ 65147 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿದೆ.ಗಿನ್ನು, ತುಂಗಾ ಜಲಾಶಯ ಭರ್ತಿಯಾಗಿರುವುದರಿಂದ 63612 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.

43.17 ಮಿ.ಮೀ ಮಳೆ: ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 43.17 ಮಿ.ಮೀ ಮಳೆ ಸುರಿದಿದ್ದು, ಶಿವಮೊಗ್ಗದಲ್ಲಿ 17.30 ಮಿ.ಮೀ, ಭದ್ರಾವತಿ 16.30 ಮಿ.ಮೀ, ತೀರ್ಥಹಳ್ಳಿ 90.20 ಮಿ.ಮೀ, ಸಾಗರದಲ್ಲಿ 55 ಮಿ.ಮೀ, ಶಿಕಾರಿಪುರ 26.20 ಮಿ.ಮೀ, ಸೊರಬದಲ್ಲಿ 39 ಮಿ.ಮೀ, ಹೊಸನಗರದಲ್ಲಿ 58.20 ಮಿ.ಮೀ ಮಳೆಯಾಗಿದೆ.

ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತ

ರಿಪ್ಪನ್‌ಪೇಟೆ: ಕಳೆದ ಹದಿನೈದು ದಿನಗಳಿಂದ ನಡುಮಲೆನಾಡಿನ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಗುರುವಾರ ರಾತ್ರಿಯಿಂದ ದಿಧೀರ್ ಗಾಳಿ ಮಳೆ ಬಿರುಸುಗೊಂಡು ಜನತೆ ಹೈರಾಣಾಗಿದ್ದಾರೆ.

ಕಳೆದ ವರ್ಷದಲ್ಲಿ ಮಲೆನಾಡಿನಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದು, ಕೆರೆಕಟ್ಟೆಗಳು ತುಂಬಿ ಹರಿಯದೆ ಇದ್ದು ಕಂಗಾಲಾಗಿದ್ದ ರೈತರು ಈ ಭಾರಿ ವಾಡಿಕೆಗಿಂತ ಹೆಚ್ಚು ಮತ್ತು ತನ್ನ ಗತವೈಭವ ಮರುಕಳಿಸಿ ಮಲೆನಾಡಿನ ಚಿರಾಪುಂಜಿಯೆಂದು ಕರೆಸಿಕೊಂಡ ಅಗುಂಬೆ ಮತ್ತು ಮಾಸ್ತಿಕಟ್ಟೆ ನಿಟ್ಟೂರು ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿ ಎಡಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಶುಕ್ರವಾರ ಶಾಲಾ ಕಾಲೇಜಿಗೆ ರಜೆ ಘೊಷಣೆ ಮಾಡಲಾಗಿತ್ತು.

ಧಾರಕಾರ ಮಳೆಗೆ ಕುಸಿದುಬಿದ್ದ ಮನೆ

ಹೊಳೆಹೊನ್ನೂರು: ಪಟ್ಟಣದ ಸಮೀಪದ ಡಣಾಯಕಪುರದಲ್ಲಿ ವಾಸದ ಮನೆಯೊಂದು ಕುಸಿದು ಬಿದ್ದಿದೆ. ಗೋಲ್ಲರ ಬೀದಿಯ ನಿವಾಸಿ ಮಾರುತಿ ಎಂಬುವರಿಗೆ ಸೇರಿದ ವಾಸದ ಮನೆಯೂ ಮಳೆಯಿಂದ ಕುಸಿದು ಬಿದ್ದಿದ್ದು, ಆ ಮನೆಯನ್ನೇ ನಂಬಿಕೊಂಡಿದ್ದ ಕುಟುಂಣ ಬೀದಿಪಾಲಾಗಿದೆ.

ಗೋಲ್ಲರ ಬೀದಿಯ ನಿವಾಸಿ ಮಾರುತಿ ಅವರು ಸುಮಾರು 35 ವರ್ಷಗಳ ಹಿಂದೆ ಕಟ್ಟಿಕೊಂಡಿದ್ದ ಈ ಮನೆಯೂ, ತುಂಬಾ ಹಳೆಯದಾಗಿತ್ತು. ಸುರಿದ ಮಳೆ ಗಾಳಿಯಿಂದಾಗಿ ಈ ಮನೆಯು ಕುಸಿದು ಬಿದ್ದಿದೆ ಎಂದು ಕುಟುಂಬ ತಿಳಿಸಿದೆ. ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.

ಗಾಳಿಯ ರಭಸಕ್ಕೆ 3 ಕಿ.ಮೀ.ತೇಲಿದ ಲಾಂಚ್‌

ಬ್ಯಾಕೋಡು: ತಾಲ್ಲೂಕಿನ ಶರಾವತಿ ಹಿನ್ನೀರಿನ ಹಲ್ಕೆ - ಮುಪ್ಪಾನೆ ಲಾಂಚ್ ಗಾಳಿಯ ರಭಸಕ್ಕೆ ಕಟ್ಟಿದ ಹಗ್ಗ ತುಂಡಾಗಿ ಸುಮಾರು ಮೂರು ಕಿಲೋಮೀಟರ್ ತೇಲಿ ಹೋಗಿರುವ ಘಟನೆ ನಡೆದಿದೆ.

ಹೊಸ ಲಾಂಚ್ ಬರುವ ಮೊದಲು ಸೇವೆ ಸಲ್ಲಿಸುತ್ತಿರುವ ಸಣ್ಣ ಲಾಂಚ್ ಕೆಟ್ಟು ಹೋಗಿದ್ದು ಅದನ್ನು ಮುಪ್ಪಾನೆ ದಡದಲ್ಲಿ ಕಟ್ಟಿ ಹಾಕಲಾಗಿತ್ತು. ಸೂಕ್ತ ಪ್ಲಾಟ್ ಫಾರಂ ವ್ಯವಸ್ಥೆ ಇಲ್ಲದ ಕಾರಣ ಹಳೆಯ ಲಾಂಚ್ ಪಕ್ಕದಲ್ಲಿ ಹೊಸಾ ಲಾಂಚನ್ನು ಕೂಡ ನಿಲ್ಲಿಸಿದ್ದು, ಹಳೆಯ ಲಾಂಚ್ ಕಟ್ಟಿದ್ದ ಹಗ್ಗ ತುಂಡಾಗಿ ಹೊಸ ಲಾಂಚಿಗೆ ಬಡಿದು ಹಗ್ಗ ತುಂಡಾಗಿ ಲಾಂಚ್ ತೇಲಿ ಹೋಗಿದೆ.

ಗಾಳಿಯ ರಭಸಕ್ಕೆ ಹಳೆಯ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಲಾಂಚ್ ಮಂಡವಳ್ಳಿ ಹತ್ತಿರ ಪತ್ತೆಯಾಗಿವೆ. ಸ್ಥಳಿಯ ಮೀನುಗಾರರ ಸಹಾಯದಿಂದ ಲಾಂಚ್ ಸಿಬ್ಬಂದಿಗಳು ಗಾಳಿ ಮಳೆಯನ್ನು ಲೆಕ್ಕಿಸದೆ ದೋಣಿಯಲ್ಲಿ ತೆರಳಿ ಲಾಂಚ್ ಗಳನ್ನು ಮರಳಿ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಲಾಂಚ್ ಸುರಕ್ಷತೆಗೆ ಆದ್ಯತೆ ನೀಡಿ: ಶರಾವತಿ ಹಿನ್ನೀರಿನಲ್ಲಿರುವ ಲಾಂಚ್ ಸುರಕ್ಷತೆಗೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ಲಾಂಚ್ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಅಲ್ಲದೆ ಲಾಂಚ್ ಸಿಬ್ಬಂದಿಗಳಿಗೆ ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಾಸದ ಮನೆ ಮೇಲ್ಚಾವಣಿ ಕುಸಿದು ನಷ್ಟ

ಆನಂದಪುರ : ಆನಂದಪುರ ಗುರುವಾರ ರಾತ್ರಿ ಬೀಸಿದ ಗಾಳಿ ಮಳೆಯಿಂದಾಗಿ ಸಮೀಪದ ಯಡೇಹಳ್ಳಿ ಗ್ರಾಮದ ನಾಗರಾಜ್ ಎಂಬುವರ ವಾಸದ ಮನೆಯ ಮೇಲ್ಚಾವಣಿ ಕುಸಿದು ಬಿದ್ದು ನಷ್ಟ ಸಂಭವಿಸಿದ್ದು, ಕಂದಾಯ ಅಧಿಕಾರಿ ಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಮೀಪದ ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್‍ಸಿ ಕಾಲೋನಿಯ ಶಿವಪ್ಪ ಎಂಬುವರ ವಾಸದ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು ಸ್ಥಳಕ್ಕೆ ಸಾಗರ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲೌಗೆರೆ ಆಗಮಿಸಿ ಪರಿಶೀಲನೆ ನಡೆಸಿದರು.

ಆಚಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲೀಮುಲ್ಲಾ ಖಾನ್ ಮಳೆಯಿಂದ ಮನೆಯ ಕಳೆದುಕೊಂಡ ಶಿವಪ್ಪ ಕುಟುಂಬಕ್ಕೆ ಗ್ರಾಮ ಪಂಚಾಯಿತಿಯಿಂದ ಸಹಾಯಧನವನ್ನು ನೀಡಿದರು. ಪಂಚಾಯತ್ ಸದಸ್ಸೆ ಲತಾ, ಕಂದಾಯ ಅಧಿಕಾರಿ ಚಂದ್ರಮೌಳಿ, ಗ್ರಾಮ ಸೇವಕ ಪಣಿರಾಜ್, ಪಿಡಿಒ ರಂಗಸ್ವಾಮಿ ಇತರರಿದ್ದರು.

ವಿದ್ಯುತ್ ಕಂಬ ಧರಾಶಾಯಿ: ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದು ಎಲ್ಲೆಡೆ ಜಲಾವೃತಗೊಂಡಿದೆ. ಕಳೆದ ಒಂದು ವಾರದಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಮನೆ ಗೋಡೆ ಮೇಲ್ಚಾವಣಿ ಹಾಗೂ ದನದ ಕೊಟ್ಟಿಗೆಗಳು ಧರೆಗೆ ಉರುಳಿವೆ. ಕಳೆದ ರಾತ್ರಿ ಬೀಸಿದ ಭಾರಿ ಗಾಳಿಯಿಂದಾಗಿ ವಿದ್ಯುತ್ ಕಂಬದ ಮೇಲೆ ತೆಂಗಿನ ಮರ ಸೇರಿದಂತೆ ಅನೇಕ ಮರಗಳು ಬಿದ್ದಿದ್ದು 15 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು 3 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ . ಆನಂದಪುರ ಶಿಕಾರಿಪುರ ಹೆದ್ದಾರಿ ರಸ್ತೆಯ ಬೈರಾಪುರ ಗ್ರಾಮದಲ್ಲಿ ತೆಂಗಿನ ಮರ 11 ಕೆ ವಿ ಸಾಮರ್ಥ್ಯದ ವಿದ್ಯುತ್ ತಂತಿಯ ಮೇಲೆ ಬಿದ್ದು ಅಪಾರ ನಷ್ಟ ಸಂಭವಿಸಿದೆ.

ರಾತ್ರಿ ಬೀಸಿದ ಗಾಳಿಯಿಂದ ಬೈರಾಪುರ, ದೊಡ್ಡಬ್ಯಾಣ , ಕೆರೆಹಿತ್ತು, ಗೇರುಬೀಸ್ ಸೇರಿದಂತೆ ಅನೇಕ ಗ್ರಾಮಂತರ ಪ್ರದೇಶಗಳಲ್ಲಿ ವಿದ್ಯುತ್ ಕಂಬದ ಮೇಲೆ ಮರಗಳು ಬಿದ್ದು ಕಂಬಗಳು ಮುರಿದು ಹೋಗಿದೆ. ಆನಂದಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ಕಳೆದ ರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೆಸ್ಕಾಂ ಇಲಾಖೆಯ ಅಧಿಕಾರಿ ಯೋಗೇಂದ್ರಪ್ಪ ನೇತೃತ್ವದಲ್ಲಿ ಹಾನಿಗೊಳಗಾದ ವಿದ್ಯುತ್ ಕಂಬ ಹಾಗೂ ಮರಗಳನ್ನು ತಿರುವುಗೊಳಿಸಿ ಹೊಸ ವಿದ್ಯುತ್ ಕಂಬಗಳು ನಿಲ್ಲಿಸುವಲ್ಲಿ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಮುಂದಾಗಿದ್ದಾರೆ. ಅಪಾಯಮಟ್ಟ ಮೀರಿದ ತುಂಗಾ, ಮಾಲತಿ ನದಿ

ತೀರ್ಥಹಳ್ಳಿ: ತಾಲೂಕಿನಲ್ಲಿ ಗುರುವಾರ ರಾತ್ರಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಭಾರಿ ಗಾಳಿಮಳೆಯಿಂದಾಗಿ ಹಲವಾರು ಮನೆಗಳಿಗೆ ಹಾನಿ ಸಂಭವಿಸಿದೆ.

ತಾಲೂಕಿನ ಎಲ್ಲಾ ನದಿಗಳೂ ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಶುಕ್ರವಾರವೂ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ತಾಲೂಕಿನ ಪ್ರಮುಖ ನದಿಗಳಾದ ತುಂಗಾ ಮತ್ತು ಮಾಲತಿ ಸೇರಿದಂತೆ ಕನ್ನಂಗಿ ಸಮೀಪದ ಕುಂಟೆಹಳ್ಳ, ಪಟ್ಟಣ ಸಮೀಪದ ಕುಶಾವತಿ ನದಿ, ಆರಗ ಬಳಿಯ ಗೋಪಿನಾಥ ಹಳ್ಳಗಳೂ ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.

ಹಾನಿ ಸ್ಥಳಗಳಿಗೆ ಪಪಂ ಮುಖ್ಯಾಧಿಕಾರಿ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನಲ್ಲಿ ಹಲವಾರು ಮನೆಗಳಿಗೆ ಹಾನಿ ಸಂಭವಿಸಿದ್ದು, ನೊಣಬೂರು ಗ್ರಾಪಂ ವ್ಯಾಪ್ತಿಯ ಕೋದೂರು ಸಮೀಪದ ಯಮರಳ್ಳಿಯ ಪುಟ್ಟಪ್ಪ ಹಾಗೂ ಹೊಸಕೆರೆ ಗ್ರಾಮದ ಮಾನಪ್ಪ ಗೌಡರ ಮನೆ ಮೇಲೆ ತೆಂಗಿನಮರ ಬಿದ್ದು ಹಾನಿ ಸಂಭವಿಸಿದೆ. ಹುರುಳಿ ಗ್ರಾಮದ ಗೋಪಾಲ ಭಟ್ ಮನೆ, ಬೆಜ್ಜವಳ್ಳಿ ಗ್ರಾಪಂಯ ಶೀಕೆ ಗ್ರಾಮದ ಲಕ್ಷ್ಮಮ್ಮ ವಾಸದ ಮನೆ ಮುಂಭಾಗದಲ್ಲಿರುವ ಅಂಗಡಿ ಮೇಲೆ ಮರ ಬಿದ್ದು ಮಾಡಿಗೆ ಹಾನಿಯಾಗಿದೆ.ಹೊಸನಗರ:

ಹೊಸನಗರ: ಶಾಲಾ ಕಾಲೇಜಿಗೆ ಇಂದೂ ರಜೆ

ಹೊಸನಗರ: ತಾಲೂಕು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶನಿವಾರವೂ ಹೊಸನಗರ ತಾಲೂಕಿನ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಮಕ್ಕಳ ಕ್ಷೇಮದ ದೃಷ್ಠಿಯಿಂದ ತಾಲೂಕಿನ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ತಹಶೀಲ್ದಾರ್‌ ರಶ್ಮಿ ಹಾಲೇಶ್ ಆದೇಶಿಸಿದ್ದಾರೆ.ಭದ್ರಾ ಜಲಾನಯನ ನಿವಾಸಿಗಳಿಗೆ ಎಚ್ಚರಿಕೆ

ಶಿವಮೊಗ್ಗ: ಭದ್ರಾ ಜಲನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಭದ್ರಾ ಜಲಾಶಯದ ಒಳಹರಿವು ಪ್ರಮಾಣ ದಿನದಿಂದ ಹೆಚ್ಚಾಗುತ್ತಿದ್ದು, ಯಾವುದೇ ಸಂದರ್ಭದಲ್ಲಿ ಜಲಾಶಯದ ಕ್ರಸ್ಟ್‌ಗೇಟ್‌ ಮೂಲಕ ನೀರು ಹೊರ ಬಿಡುವ ಸಾಧ್ಯತೆ ಇದೆ. ಹಾಗಾಗಿ ನೀರಾವರಿ ನಿಗಮದ ನದಿ ಪಾತ್ರದ ನಿವಾಸಿಗಳಿಗೆ ಮೊದಲ ಎಚ್ಚರಿಕೆ ನೀಡಲಾಗಿದೆ. ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದೆ. ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಜು.26ರಂದು ಜಲಾಶಯದ ನೀರಿನ ಮಟ್ಟ 174.3 ಅಡಿಗೆ ತಲುಪಿದೆ. ಒಳ ಹರಿವಿನ ಪ್ರಮಾಣ 35 ಸಾವಿರ ಕ್ಯೂಸೆಕ್‌ಗೂ ಹೆಚ್ಚಿದೆ. ಇದೇ ರೀತಿ ಮಳೆ ಮುಂದುವರೆದರೆ ಶೀಘ್ರದಲ್ಲಿ ಭದ್ರಾ ಜಲಾಶಯದ ನೀರಿನ ಮಟ್ಟ ಗರಿಷ್ಠ ಹಂತಕ್ಕೆ ತಲುಪಲಿದೆ. ಹೀಗಾಗಿ ಯಾವುದೇ ಸಂದರ್ಭ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತದೆ ಎಂದು ತಿಳಿಸಲಾಗಿದೆ.